ಆ್ಯಪ್ನಗರ

ಪಕ್ಷ ಬಲವರ್ಧನೆಗೆ ಮುಖಂಡರಿಗೆ ಕರೆ

ಜಿಲ್ಲಾ ಮತ್ತು ತಾಲೂಕಾದ್ಯಂತ ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಕಾರ್ಯಕರ್ತರಿಂದ-ಮುಖಂಡರವರೆಗೆ ಶ್ರಮಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಾ.ಬಿ.ಎಲ್‌.ಶಂಕರ್‌ ಕರೆ ನೀಡಿದರು.

Vijaya Karnataka 18 Dec 2018, 5:00 am
ಅಜ್ಜಂಪುರ: ಜಿಲ್ಲಾ ಮತ್ತು ತಾಲೂಕಾದ್ಯಂತ ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಕಾರ್ಯಕರ್ತರಿಂದ-ಮುಖಂಡರವರೆಗೆ ಶ್ರಮಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಮಾಜಿ ಸಭಾಪತಿ ಡಾ.ಬಿ.ಎಲ್‌.ಶಂಕರ್‌ ಕರೆ ನೀಡಿದರು.
Vijaya Karnataka Web
ಪಕ್ಷ ಬಲವರ್ಧನೆಗೆ ಮುಖಂಡರಿಗೆ ಕರೆ


ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಅಜ್ಜಂಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಏರ್ಪಡಿಸಿದ್ದ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ತರೀಕೆರೆ ಕ್ಷೇತ್ರದಲ್ಲಿ ನಾಯಕರ ಸಂಖ್ಯೆ ಹೆಚ್ಚಾಗಿದೆ. ಈ ಸಮಸ್ಯೆಯಿಂದ ಕಾಂಗ್ರೆಸ್‌ ಪಕ್ಷ ದ ಸೋಲಿಗೆ ಕಾಂಗ್ರೆಸ್‌ ಮುಖಂಡರೇ ಕಾರಣರಾಗಿದ್ದಾರೆ. ಈ ಎಲ್ಲಾ ಕಾರಣಗಳ ಜತೆಗೆ ಕಾರ್ಯಕರ್ತರನ್ನು ಕಡೆಗಣಿಸುವ ಕ್ರಿಯೆಯಿಂದ ಕಾಂಗ್ರೆಸ್‌ ಪಕ್ಷ ಸೋತಿದೆ. ಮುಖಂಡರು ಮನಸ್ಸನ್ನು ಬದಲಾಯಿಸಿಕೊಂಡಾಗ ಮಾತ್ರ ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವ ತೋರಿಸಲಿದೆ ಎಂದರು.

ತರೀಕೆರೆ ಕ್ಷೇತ್ರ ಅಭಿವೃದ್ಧಿ ಹೊಂದಲು ಹಿಂದಿನ ಕಾಂಗ್ರೆಸ್‌ ಸರಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಮುಖ್ಯವಾಗಿ ನೀರಾವರಿ ಯೋಜನೆಗೆ ಪ್ರಾಮುಖ್ಯತೆ ಕೊಟ್ಟಿದೆ. ಬೆಳಗಾಂ ಅಧಿವೇಶನ ಮುಗಿದ ತಕ್ಷ ಣ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಹತ್ತಿರ ಸ್ಥಳೀಯ ಮುಖಂಡರ ನಿಯೋಗ ತೆರಳಿ, ಚಿಕ್ಕಮಗಳೂರು ಮತ್ತು ತರೀಕೆರೆಯ ಬಯಲು ಸೀಮೆಯ ರೈತರ ಎಲ್ಲಾ ಕೆರೆಗಳಿಗೆ ನೀರುಣಿಸುವ ಕೆಲಸಕ್ಕೆ ಚಾಲನೆ ನೀಡಬೇಕು. ಅಭಿವೃದ್ಧಿ ರಾಜಕಾರಣ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು. ಬರುವ ಫೆಬ್ರವರಿಯಲ್ಲಿ ಪುರಸಭೆ, ನಗರಸಭೆಗೆ ಚುನಾವಣೆ ನಡೆಯುತ್ತಿದೆ. ಇದು ನಮಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಪಕ್ಷ ಅಧಿಕಾರಕ್ಕೆ ಬರಬೇಕು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ಎರಡೂ ಸೇರಿ ಲೋಕಸಭೆ ಚುನಾವಣೆಯಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನೂತನ ಅಧ್ಯಕ್ಷ ರು ಮಾಜಿ ಶಾಸಕರಾದ ಟಿ.ಎಚ್‌.ಶಿವಶಂಕರಪ್ಪ, ಎಸ್‌.ಎಂ. ನಾಗರಾಜ್‌, ಜಿ.ಎಚ್‌.ಶ್ರೀನಿವಾಸ ಅವರ ಜತೆ ಪಕ್ಷ ದ ಹಿರಿಯ ಮುಖಂಡರನ್ನು ಒಗ್ಗೂಡಿಸಿಕೊಂಡು ಕೆಲಸ ನಿರ್ವಹಿಸಬೇಕು. ಅರೆಮನಸ್ಸಿನ ನಾಯಕರು ಮನಸ್ಸು ಬದಲಾಯಿಸಿ ಕಾರ್ಯಕರ್ತರ ಪಡೆ ಕಟ್ಟಬೇಕು ಎಂದರು.

ಮಾಜಿ ಶಾಸಕ ಎಸ್‌.ಎಂ. ನಾಗರಾಜ್‌ ಮಾತನಾಡಿ, ಈ ಬಾರಿ ಚುನಾವಣೆಯ ಸೋಲಿಗೆ ಪಕ್ಷ ದ ಮುಖಂಡರೇ ಕಾರಣ. ಪಕ್ಷ ದಲ್ಲಿ ಮುಖಂಡರೆನಿಸಿಕೊಂಡವರು ಎಲ್ಲಾ ಪ್ರತಿಷ್ಠೆ ಬದಿಗಿಟ್ಟು ಚುನಾವಣೆ ಮೂಲಕ ಹೋರಾಟ ಮಾಡಬೇಕು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅಭಿವೃದ್ಧಿಯಲ್ಲಿ ಜಿಲ್ಲೆ ಹಿಂದಿದೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. 6 ತಿಂಗಳಾದರೂ ವಿವಿಧ ಸಮಿತಿ ನೇಮಕವಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸುವ ಮತ್ತು ಅವರಿಗೆ ಹುದ್ದೆ ನೀಡುವ ಕೆಲಸ ಆಗಿಲ್ಲ. ಈಗ ಅಧಿಕಾರ ವಹಿಸಿಕೊಂಡಿರುವ ಅಜ್ಜಂಪುರ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎ.ಸಿ. ಚಂದ್ರಪ್ಪ, ಯಾವುದೇ ವ್ಯಕ್ತಿಯ ಕೈ ಗೊಂಬೆಯಾಗದೆ ಪಕ್ಷ ದಲ್ಲಿ ನಿಷ್ಟಾವಂತ ವ್ಯಕ್ತಿಯಾಗಿ ಸಕ್ರಿಯವಾಗಿ ಕೆಲಸ ಮಾಡಲಿ ಎಂದು ಆಶಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಗೋಪಾಲ ಭಂಡಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಸಿ ಹಸಿ ಸುಳ್ಳು ಹೇಳಿ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಒಗ್ಗೂಡಿನಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ಪಿ.ಸಿ.ವಿಷ್ಣುನಾಧನ್‌ ಸಮಾವೇಶ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌ ಮಾತನಾಡಿದರು.

ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಗುರುಮೂರ್ತಿ ಅವರು ಎ.ಸಿ.ಚಂದ್ರಪ್ಪ ಅವರಿಗೆ ಕಾಂಗ್ರೆಸ್‌ ಪಕ್ಷ ದ ಧ್ವಜ ನೀಡುವುದರ ಮೂಲಕ ಅಧಿಕಾರ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯಿತ್ರಿ ಶಾಂತೇಗೌಡ, ಪುರುಷೋತ್ತಮ ಚಿತ್ತಾಪುರ, ಸದಸ್ಯ ಟಿ.ವಿ.ಶಿವಶಂಕರಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಎಸ್‌. ತಿಪ್ಪೇರುದ್ರಯ್ಯ, ಎಚ್‌.ವಿಶ್ವನಾಥ್‌, ಕೆ.ಆರ್‌.ಧೃವಕುಮಾರ್‌, ಪ್ರಧಾನ ಕಾರ್ಯದರ್ಶಿ ದೊರನಾಳ ಪರಮೇಶ, ಎಪಿಎಂಸಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಉಪಾಧ್ಯಕ್ಷ ಅಂಕುಶ್‌ ಆನಂದ್‌ಕುಮಾರ್‌, ಗ್ರಾ.ಪಂ. ಅಧ್ಯಕ್ಷೆ ಚನ್ನಬಸಮ್ಮ, ಉಪಾಧ್ಯಕ್ಷೆ ಸುನಂದ, ತರೀಕೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುಳ್ಳದಮನೆ ರಾಮಚಂದ್ರಪ್ಪ, ಜಿ.ಜಿ. ತಿಪ್ಪೇಶ್‌, ಟಿ.ಎನ್‌. ಗೋಪಿನಾಥ್‌, ಕೆ.ಪಿ. ಕುಮಾರ್‌, ಮಂಜೇಗೌಡ, ಹೇಮಲತಾ, ಅಸ್ಲಾಂ ಖಾನ್‌, ವಸಂತಮ್ಮ, ಟಿ.ಬಿ. ಹರಳಪ್ಪ, ಧರ್ಮರಾಜ್‌ ಇತರರು ಉಪಸ್ಥಿತರಿದ್ದರು.

ಗುಣಶೀಲ ಪ್ರಾರ್ಥಿಸಿ, ಎಂ.ಕೃಷ್ಣಮೂರ್ತಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್‌ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ