Please enable javascript.ಮನಸೂರೆಗೊಂಡ ಮಹಾರಥಿ ಭೀಷ್ಮ! - ಮನಸೂರೆಗೊಂಡ ಮಹಾರಥಿ ಭೀಷ್ಮ! - Vijay Karnataka

ಮನಸೂರೆಗೊಂಡ ಮಹಾರಥಿ ಭೀಷ್ಮ!

ವಿಕ ಸುದ್ದಿಲೋಕ 7 Feb 2013, 11:36 pm
Subscribe

ಪಟ್ಟಣದ ಯುವಕರ ಗುಂಪು ಮಹಾಭಾರತದ ದಶ್ಯವೊಂದಕ್ಕೆ ಸಂಬಂಧಿಸಿ ಶ್ರಮ ವಹಿಸಿ ಕಲಿತು ಪ್ರದರ್ಶಿಸಿದ ನಾಟಕ ಮಹಾರಥಿ ಭೀಷ್ಮ ಪ್ರೇಕ್ಷಕರ ಮನಸೂರೆಗೊಂಡಿತು.

ಮನಸೂರೆಗೊಂಡ ಮಹಾರಥಿ ಭೀಷ್ಮ!
ಎನ್.ವೆಂಕಟೇಶ್

ಅಜ್ಜಂಪುರ :
ಪಟ್ಟಣದ ಯುವಕರ ಗುಂಪು ಮಹಾಭಾರತದ ದಶ್ಯವೊಂದಕ್ಕೆ ಸಂಬಂಧಿಸಿ ಶ್ರಮ ವಹಿಸಿ ಕಲಿತು ಪ್ರದರ್ಶಿಸಿದ ನಾಟಕ ಮಹಾರಥಿ ಭೀಷ್ಮ ಪ್ರೇಕ್ಷಕರ ಮನಸೂರೆಗೊಂಡಿತು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ಇಲ್ಲಿನ ಯುವಕರು ತುಸು ವಿಭಿನ್ನವಾಗಿ ನಿಲುವು ಕೈಗೊಂಡು ಪೌರಾಣಿಕ ನಾಟಕ ಕಲಿತು ಪ್ರದರ್ಶನ ನೀಡಿದರು.

ಹಿನ್ನೆಲೆ
ಕಲಾಸೇವಾ ಸಂಘದ ಭೀಷ್ಮರೆಂದು ಹೆಸರು ಮಾಡಿದ್ದ ದಿ.ಪಿ. ವೆಂಕಟರಾಂ 1965ರ ಹೊತ್ತಿಗೆ ರಚಿಸಿದ ಮೇರು ಕತಿ ಮಹಾರಥಿ ಭೀಷ್ಮ ನಾಟಕವನ್ನು 1971ರಲ್ಲಿ ಕಲಿತು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ತುಮಕೂರು ಮತ್ತು ತಿಪಟೂರಿನಲ್ಲಿ ಯಶಸ್ವಿ ಪ್ರದರ್ಶನ ನೀಡಲಾಗಿತ್ತು. ಭೀಷ್ಮನ ಪಾತ್ರಧಾರಿ ದಿ.ಎನ್. ಪಾಂಡುರಂಗರಾವ್ ನೀಡಿದ್ದ ಮನೋಜ್ಞ ಅಭಿನಯ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದೆ.

ಇದಾದ ಬಳಿಕ 1990ರಲ್ಲಿ ಈಗಿನ ರಂಗತಂಡದ ಕಲಾವಿದರು, ಕಲಾ ಸೇವಾ ಸಂಘದ ಹಿರಿಯ ಕಲಾವಿದರನ್ನು ಸಂಘಟಿಸಿ ಸತತ 1 ತಿಂಗಳು ಕಲಿತು ಪುನಃ ಮಹಾರಥಿ ಭೀಷ್ಮ ನಾಟಕ ಪ್ರದರ್ಶಿಸಿದ್ದರು. ನಾಟಕ ನಿರ್ದೇಶಕ ದಿ. ಧ್ರುವರಾಜ ದೇಶಪಾಂಡೆ ನೇತತ್ವ ವಹಿಸಿದ್ದರು. ಎಲ್ಲ ಕಲಾವಿದರು ಸರಿಸುಮಾರು 60- 70 ವಯಸ್ಸಿನವರಾಗಿದ್ದರೂ ಯಾರಿಗೂ ಕಮ್ಮಿಯಿಲ್ಲದಂತೆ ಶ್ರಮವಹಿಸಿ ನಾಟಕವನ್ನು ಪುನಃ ಕಲಿತು ಅಜ್ಜಂಪುರ, ಹಿರಿಯೂರು, ಚೆತ್ರಶ್ರೀ ಉತ್ಸವ ಹಾಗೂ ಕೆಮ್ಮಣ್ಣುಗುಂಡಿಯಲ್ಲಿ ಪ್ರದರ್ಶಿಸಿದ್ದರು. ಇದಾದ 23 ವರ್ಷಗಳ ಅಂತರದಲ್ಲಿ ಈಗ ಯುವಕರ ಗುಂಪು ಎ.ಎಸ್. ಕಷ್ಣಮೂರ್ತಿ ಮತ್ತು ಮಹಾವೀರ್‌ಜೆನ್ ನಿರ್ದೇಶನದಲ್ಲಿ 3 ತಿಂಗಳಿಂದ ಸತತ ಅಭ್ಯಾಸ ಮಾಡಿ ನಾಟಕ ಪ್ರದರ್ಶಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದೆ.

ಪ್ರೇರಣೆ
ಪಟ್ಟಣದಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ನಾಟಕೋತ್ಸವ ನಡೆಯುತ್ತವೆ. ಸಾಣೇಹಳ್ಳಿ ಶಿವಸಂಚಾರ, ಚಿತ್ರದುರ್ಗದ ಜಮುರಾ, ಹೆಗ್ಗೋಡು ನೀನಾಸಂ ಹಾಗೂ ಇತರೆ ಕಲಾವಿದರು ಆಗಮಿಸಿ, ನಾಟಕೋತ್ಸವ ನಡೆಸಿಕೊಡುತ್ತಾರೆ. ನಾಟಕೋತ್ಸವದ ಉದ್ಘಾಟನೆಯಂದು ಬಂದಿದ್ದ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಟ್ಟಣದಲ್ಲಿರುವ ಸ್ಥಳೀಯ ಕಲಾವಿದರೇ ನಾಟಕ ಕಲಿತು ಪ್ರದರ್ಶನ ನೀಡುವಂತೆ ಸಲಹೆ ಮಾಡಿದ್ದು ಮಹಾರಥಿ ಭೀಷ್ಮ ನಾಟಕ ಕಲಿಕೆಗೆ ಪ್ರೇರಣೆಯಾಯಿತು ಎಂದು ಕಲಾವಿದ ಮೋಹನರಾವ್ ಹೇಳುತ್ತಾರೆ.

ಕಥಾಹಂದರ
ಕುರುಕ್ಷೇತ್ರ ಮಹಾಸಂಗ್ರಾಮ. ಒಂದು ರಾತ್ರಿ ದುರ್ಯೋಧನ ಚಕ್ರವರ್ತಿ ಬಹಳ ನಿರಾಶೆ ಹೊಂದಿ ಸೇನಾಪತಿ ಭೀಷ್ಮಾಚಾರ್ಯರತ್ತ ಆಗಮಿಸಿ, ತನ್ನ ಪರಿಸ್ಥಿತಿಯನ್ನು ತೋಡಿಕೊಳ್ಳುವ ಸನ್ನಿವೇಶ. ಎಂತೆಂತಹ ಅತಿರಥ ಮಹಾರಥರನ್ನು ಹೊಂದಿಯೂ ತಾನು ಪಾಂಡವರನ್ನು ಗೆಲ್ಲಲಾಗದಿದ್ದಕ್ಕೆ ಮುತ್ತಾತ ಭೀಷ್ಮರ ಎದುರು ಪ್ರಲಾಪಿಸುತ್ತಾನೆ. ತಮ್ಮಂತಹ ಅಸಾಮಾನ್ಯ ಪರಾಕ್ರಮಿಗಳಿದ್ದರೂ ಇಂತಹ ಪರಿಸ್ಥಿತಿ ಎದುರಾಗಿದ್ದು ತನ್ನ ದೌರ್ಭಾಗ್ಯವೇ ಸರಿ. ಆದುದಾಗಲಿ, ನಾಳೆ ನಡೆಯುವ ಪ್ರಚಂಡ ಯುದ್ಧದಲ್ಲಿ ಕೌರವರಿಗೆ ಜಯಭೇರಿ ತಂದುಕೊಡಬೇಕು ಎಂದು ಭೀಷ್ಮಾಚಾರ್ಯರನ್ನು ಪ್ರಚೋದಿಸಲು ಯತ್ನಿಸುತ್ತಾನೆ.

ಅಂತೆಯೇ ಭೀಷ್ಮರು, ದುರ್ಯೋಧನನಿಗೆ ಅಭಯ ನೀಡಿ ಕಳಿಸುತ್ತಾರೆ. ನಾಳೆ ನಡೆಯುವ ಯುದ್ಧದಲ್ಲಿ ನಾನು ಉಳಿಯಬೇಕು, ಇಲ್ಲವೇ ಆ ಪಾಂಡವರು ಉಳಿಯಬೇಕು ಎಂದು ಪ್ರತಿಜ್ಞೆ ಮಾಡುತ್ತಾರೆ. ಕೊನೆಗೆ ಹಲವು ನಾಟಕೀಯ ತಿರುವುಗಳ ಬಳಿಕ ಭೀಷ್ಮರು ಅರ್ಜುನನ ಬಾಣಕ್ಕೆ ಬಲಿಯಾಗಿ ಉತ್ತರಾಯಣದಂದು ಪ್ರಾಣ ತ್ಯಾಗ ಮಾಡುವುದು ನಾಟಕದ ಕಥಾಹಂದರ.

ನಮ್ಮ ಕಾಲಕ್ಕೇ ನಾಟಕ ಅಂತ್ಯವಾಗಬಾರದು. ಯುವ ಕಲಾವಿದರನ್ನು ಸಷ್ಟಿಸಿ, ಅವರಿಂದ ಇನ್ನಷ್ಟು ರಂಗಸೇವೆ ಮಾಡಿಸಬೇಕೆಂದು ಪಣತೊಟ್ಟಿರುವ ಗೆಳೆಯರ ಬಳಗ ರಂಗತಂಡದ ಮುಖ್ಯಸ್ಥ ಎ.ಸಿ. ಚಂದ್ರಪ್ಪ, ಸುಮಾರು 30 ಸಾವಿರ ರೂ. ವೆಚ್ಚದಲ್ಲಿ ಮಹಾರಥಿ ಭೀಷ್ಮ ನಾಟಕವನ್ನು ಪ್ರದರ್ಶಿಸಿದರು. ನಾಟಕದ ಪೂರ್ಣ ವೆಚ್ಚವನ್ನು ಮುಖಂಡ ಎಸ್. ಶಿವಾನಂದ್ ಭರಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ