Please enable javascript.ಅತ್ತ ಪರೀಕ್ಷೆಯು ಇಲ್ಲ, ಇತ್ತ ತರಬೇತಿಯು ಇಲ್ಲ ! - ಅತ್ತ ಪರೀಕ್ಷೆಯು ಇಲ್ಲ, ಇತ್ತ ತರಬೇತಿಯು ಇಲ್ಲ ! - Vijay Karnataka

ಅತ್ತ ಪರೀಕ್ಷೆಯು ಇಲ್ಲ, ಇತ್ತ ತರಬೇತಿಯು ಇಲ್ಲ !

ವಿಕ ಸುದ್ದಿಲೋಕ 16 Feb 2013, 12:49 am
Subscribe

ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ವಾರ್ಷಿಕ ಪರೀಕ್ಷಾ ಭಯ ತಗ್ಗಿಸುವ ತರಬೇತಿ ಕಾರ್ಯಕ್ರಮ ನಡೆಸುವ ಧಾವಂತದಲ್ಲಿ ಇಲಾಖೆಗೆ ಅತ್ತ ತರಬೇತಿಯನ್ನು ಕೊಡಲಾಗದೆ, ಇತ್ತ ಒಂದು ದಿನದ ಪ್ರಿಪರೇಟರಿ ಪರೀಕ್ಷೆಯನ್ನು ನಡೆಸಲಾಗದ ವಿಲಕ್ಷಣ ವಿದ್ಯಮಾನ ಇಲ್ಲಿ ನಡೆದಿದೆ.

ಅತ್ತ ಪರೀಕ್ಷೆಯು ಇಲ್ಲ, ಇತ್ತ ತರಬೇತಿಯು ಇಲ್ಲ !
ಶಂಗೇರಿ: ಹತ್ತನೇ ತರಗತಿ ವಿದ್ಯಾರ್ಥಿಗಳಲ್ಲಿ ವಾರ್ಷಿಕ ಪರೀಕ್ಷಾ ಭಯ ತಗ್ಗಿಸುವ ತರಬೇತಿ ಕಾರ್ಯಕ್ರಮ ನಡೆಸುವ ಧಾವಂತದಲ್ಲಿ ಇಲಾಖೆಗೆ ಅತ್ತ ತರಬೇತಿಯನ್ನು ಕೊಡಲಾಗದೆ, ಇತ್ತ ಒಂದು ದಿನದ ಪ್ರಿಪರೇಟರಿ ಪರೀಕ್ಷೆಯನ್ನು ನಡೆಸಲಾಗದ ವಿಲಕ್ಷಣ ವಿದ್ಯಮಾನ ಇಲ್ಲಿ ನಡೆದಿದೆ.

ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ತರಬೇತುದಾರ ಚೇತನ್‌ರಾಮ್ ಅವರಿಂದ ತಾಲೂಕಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಶಿಬಿರವನ್ನು ಪಟ್ಟಣದ ಸ.ಪ.ಪೂ. ಕಾಲೇಜಿನಲ್ಲಿ ಆಯೋಜಿಸಿರುವ ಸಂದೇಶವು ಇಲಾಖೆಯಿಂದ ಒಂದು ದಿನ ಮೊದಲು ಎಲ್ಲ ಶಾಲೆಗಳಿಗೆ ತಲುಪಿಸಲಾಗಿತ್ತು.

ಆದರೆ, ಅಂದೆ ಈ ತರಗತಿಗೆ ಎರಡನೇ ಪ್ರಿಪರೇಟರಿ ಪರೀಕ್ಷೆ ನಡೆಸಬೇಕಾಗಿತ್ತು. ಇಲಾಖೆಯ ಆದೇಶಕ್ಕೆ ಮಣಿದ ಅಧ್ಯಾಪಕರು ಅಂದು ತಮ್ಮ ವಿದ್ಯಾರ್ಥಿಗಳನ್ನು ಮುಂಜಾನೆಯೇ ತರಬೇತಿ ಕೇಂದ್ರಕ್ಕೆ ಕರೆ ತಂದಿದ್ದರು. ಇಲ್ಲಿ ಹೌ ಟು ಫೇಸ್ ಎಕ್ಸಾಮಿನೇಷನ್ಸ್, ಮಕ್ಕಳಲ್ಲಿ ಪರೀಕ್ಷಾ ಭಯ ಓಡಿಸಿ, ಆತ್ಮವಿಶ್ವಾಸವನ್ನು ಬೆಳೆಸುವುದು ಹೇಗೆ ಎಂಬ ಗಹನವಾದ ವಿಚಾರದಲ್ಲಿ ತರಬೇತಿ ಕೊಡಲಾಗುವುದೆಂದು ಹೇಳಲಾಗಿತ್ತು.

ಆದರೆ ನಿಗದಿತ ವೇಳೆಗೆ ಈ ತರಬೇತಿ ರದ್ದಾಗಿರುವುದಾಗಿ ಪ್ರಕಟಿಸಲಾಯಿತು. ತಾಲೂಕಿನ 11 ಶಾಲೆಗಳ ಪೆಕಿ 3 ಖಾಸಗಿ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆ ವಿದ್ಯಾರ್ಥಿಗಳು ಇಲ್ಲಿ ನೆರೆದಿದ್ದರು. ತರಬೇತಿ ರದ್ದಾಗಿದ್ದರಿಂದ ಅಧ್ಯಾಪಕ ಸಮೂಹಕ್ಕೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅತ್ತ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಅಂದರೆ ಪಠ್ಯಪುಸ್ತಕ ತಂದಿರಲಿಲ್ಲ. ಆ ದಿನದ ಪರೀಕ್ಷೆ ಮಾಡೋಣ ಎಂದರೆ ಸಮಯ ಇರಲಿಲ್ಲ. ರಜೆ ಘೋಷಿಸಲು ಅನುಮತಿ ಕೊಟ್ಟಿರಲಿಲ್ಲ.

ಕೆಲವು ಮಕ್ಕಳಿಗೆ ಅಕ್ಷರದಾಸೋಹ ಕಾರ್ಯಕರ್ತರು ತರಬೇತಿ ಕೊಡಲು ಮುಂದಾದರು. ಕೆಲವು ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಯಿತು. ದೂರದ ಶಾಲೆಯಿಂದ ಬಂದವರಿಗೆ ರಜೆ ಕೊಡಲಾಯಿತು. ಅಂತು ಒಂದು ದಿನ ನಷ್ಟವಾಯಿತು.

ಇನ್ನೊಂದೆಡೆ ತರಬೇತಿಗೆ ಬಾರದ ಶಾಲೆಗಳ ವಿದ್ಯಾರ್ಥಿಗಳಿಗೆ ಆ ದಿನದ ಪ್ರಿಪರೇಟರಿ ಪರೀಕ್ಷೆ ನಡೆಸಲಾಯಿತು. ಇದೀಗ ಪರೀಕ್ಷಾ ಭಯ ಹೊಡೆದೋಡಿಸುವ ಭರದಲ್ಲಿ ಉಳಿಕೆ ಮಕ್ಕಳು ಒಂದು ದಿನದ ಪರೀಕ್ಷೆಯನ್ನು ಕಳೆದುಕೊಂಡು ಪರೀಕ್ಷೆಯ ಗಂಭೀರತೆಯನ್ನೇ ಕೆಡಿಸಿಕೊಂಡಂತಾಗಿದೆ.

ಈ ಬಗ್ಗೆ ಪತ್ರಿಕೆ ಮಾಹಿತಿ ಕಲೆ ಹಾಕಿದಾಗ ಗೊತ್ತಾಗಿದ್ದು, ಹತ್ತನೇ ತರಗತಿಗೆ ಯಾವುದೇ ತರಬೇತಿ, ಪ್ರವಾಸ, ಸ್ಪರ್ಧೆ ಕಾರ್ಯಕ್ರಮಗಳಿದ್ದರೆ ಅವನ್ನು ಅಕ್ಟೋಬರ್ ಒಳಗೆ ನಡೆಸುವುದು ಕಡ್ಡಾಯ. ಜನವರಿ ನಂತರದ ಒಂದೊಂದು ದಿನವೂ ಅಮೂಲ್ಯದ್ದಾಗಿರುತ್ತದೆ. ಪ್ರಿಪರೇಟರಿ ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆಯಂತೆಯೇ ಬಲು ಗಂಭೀರದಿಂದ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಹಿತದಷ್ಟಿಯಿಂದ ಮುಂದೆ ಈ ರೀತಿ ಗೊಂದಲಕ್ಕೆ ಅವಕಾಶ ಆಗದಂತೆ ಎಚ್ಚರ ವಹಿಸುವುದು ಅಗತ್ಯ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ