ಆ್ಯಪ್ನಗರ

ಭದ್ರೆಯ ಒಡಲು ಕಲ್ಮಶದ ಕಡಲು!

ದಶಕಗಳ ಕಾಲ ಕುದುರೆಮುಖದಲ್ಲಿ ನಡೆದ ಕಬ್ಬಿಣ ಅದಿರು ಗಣಿಗಾರಿಕೆ ಕಾರಣಕ್ಕೆ ಕಪ್ಪಾಗಿ ಹರಿದ ಭದ್ರಾ ನದಿ ಈಗಲೂ ಕಲ್ಮಶವನ್ನು ಒಡಲೊಳಗೆ ಹೊತ್ತುಕೊಂಡೇ ಹರಿಯುತ್ತಿದೆ.

Vijaya Karnataka 9 Jul 2019, 5:00 am
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿಹರಿಯುವ ತುಂಗಾ, ಭದ್ರಾ, ಹೇಮಾವತಿ ರಾಜ್ಯದ ಜೀವನದಿಗಳು. ಆದರೆ, ಗಣಿಗಾರಿಕೆ ಕಾರಣಕ್ಕೆ ದಶಕಗಳ ಕಾಲ ಕಪ್ಪಾಗಿ ಹರಿದ ಭದ್ರೆಗೆ ಈಗ ಕಲ್ಮಶದ ಕಾಟ. ಭದ್ರೆಯ ಒಡಲಿಗೆ ನೇರವಾಗಿ ಸೇರುತ್ತಿರುವ ತ್ಯಾಜ್ಯರಾಶಿ ಜನ, ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
Vijaya Karnataka Web CKM-8aragap1


ಚಿಕ್ಕಮಗಳೂರು : ದಶಕಗಳ ಕಾಲ ಕುದುರೆಮುಖದಲ್ಲಿ ನಡೆದ ಕಬ್ಬಿಣ ಅದಿರು ಗಣಿಗಾರಿಕೆ ಕಾರಣಕ್ಕೆ ಕಪ್ಪಾಗಿ ಹರಿದ ಭದ್ರಾ ನದಿ ಈಗಲೂ ಕಲ್ಮಶವನ್ನು ಒಡಲೊಳಗೆ ಹೊತ್ತುಕೊಂಡೇ ಹರಿಯುತ್ತಿದೆ.

ಗಣಿಗಾರಿಕೆ ನಿಂತಿದ್ದರೂ ಭದ್ರೆಯ ಒಡಲು ಇನ್ನೂ ಕಪ್ಪು ಬಣ್ಣದಿಂದ ಮುಕ್ತಿ ಪಡೆದಿಲ್ಲ. ಕಡಿದಾದ ಬೆಟ್ಟಗುಡ್ಡಗಳು, ಕಾಫಿತೋಟಗಳ ನಡುವೆ ಹರಿಯುವ ಭದ್ರೆ ಕೆಲವು ಕಡೆಗಳಲ್ಲಿ ಪಟ್ಟಣಗಳ ಆಸುಪಾಸಿನಲ್ಲೇ ಸಾಗುತ್ತದೆ. ಆದರೆ, ಈ ಪಟ್ಟಣಗಳೇ ಈಗ ಭದ್ರೆಯನ್ನು ಮತ್ತಷ್ಟು ಮಲಿನಗೊಳಿಸುತ್ತಿವೆ.

ಬಾಳೆಹೊನ್ನೂರು ಪಟ್ಟಣದ ತ್ಯಾಜ್ಯ, ಕೊಳಚೆ ನೀರು ರಾಜಕಾಲುವೆ ಮೂಲಕ ನೇರವಾಗಿ ಭದ್ರಾ ನದಿಗೆ ಸೇರುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಡೋಬಿಹಳ್ಳದ ಮೂಲಕ ಹರಿಯುವ ಈ ತ್ಯಾಜ್ಯ ಭದ್ರೆ ಯನ್ನು ಕಲುಷಿತಗೊಳಿಸುತ್ತಿದ್ದರೂ ಸಂಬಂಧಿಸಿದವರು ಕಣ್ಮುಚ್ಚಿ ಕುಳಿತಿರುವುದು ಅಚ್ಚರಿಗೆ ಕಾರಣವಾಗಿದೆ.

80 ವರ್ಷಕ್ಕೂ ಹಳೆಯದಾದ ಈ ರಾಜಕಾಲುವೆ ಬಸ್‌ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ನೀರು, ಹೋಟೆಲ್‌ಗಳು, ಅಂಗಡಿಗಳ ಕೊಳಕು ನೀರು, ಕಸಕಡ್ಡಿ, ಪ್ಲಾಸ್ಟಿಕ್‌ ಸೇರಿದಂತೆ ತ್ಯಾಜ್ಯವನ್ನು ಹೊತ್ತು ತಂದು ಭದ್ರೆಯ ಒಡಲಿಗೆ ಸುರಿಯುತ್ತಿದೆ.

ಸತ್ತಪ್ರಾಣಿ, ಕೋಳಿತ್ಯಾಜ್ಯ

ಪಟ್ಟಣದಿಂದ ತ್ಯಾಜ್ಯ ಒಂದೆಡೆ ಭದ್ರಾ ನದಿಗೆ ಸೇರುತ್ತಿದ್ದರೆ ಮತ್ತೊಂದೆಡೆ ಕೆಲವರು ಸತ್ತಪ್ರಾಣಿಗಳು, ಕೋಳಿತ್ಯಾಜ್ಯ, ಹಳೆಯ ಬಟ್ಟೆ, ಕಸಕಡ್ಡಿಗಳನ್ನು ಚೀಲದಲ್ಲಿ ತುಂಬಿಸಿ ಭದ್ರಾನದಿ ದಂಡೆಯಲ್ಲಿ ಎಸೆಯುತ್ತಿದ್ದಾರೆ. ಎಲ್ಲ ತ್ಯಾಜ್ಯ ನೇರವಾಗಿ ಭದ್ರಾ ನದಿಗೆ ಸೇರುತ್ತಿದ್ದು, ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಕುದುರೆಮುಖದ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಮಾಗುಂಡಿ ಮೂಲಕ ಬಾಳೆಹೊನ್ನೂರು ಬಳಿ ಹರಿಯುತ್ತದೆ. ನದಿಯ ಇಕ್ಕೆಲಗಳಲ್ಲಿ ಕೃಷಿಗೆ ನೀರು ಬಳಕೆಯಾಗುತ್ತಿದೆ. ಪ್ರಾಣಿ, ಪಕ್ಷಿಗಳಿಗೂ ಈ ನೀರು ಅನಿವಾರ‍್ಯ. ನದಿದಂಡೆಯ ಮೇಲೆ ಸಾವಿರಾರು ವಲಸೆ ಪಕ್ಷಿಗಳು ಆಶ್ರಯ ಕಂಡುಕೊಂಡು ಸಂತಾನೋತ್ಪತ್ತಿ ನಡೆಸುತ್ತವೆ. ಆದರೆ, ಭದ್ರೆಯ ಕಲ್ಮಶ ನೀರು ಇವುಗಳ ಮೇಲೂ ಹಾನಿ ಉಂಟು ಮಾಡುತ್ತಿದೆ.

ಪಟ್ಟಣದಲ್ಲಿರುವ ಸುಮಾರು 13 ಸಾವಿರ ಜನರಿಗೆ ಇದೇ ಭದ್ರಾ ನದಿಯಿಂದ ನೀರನ್ನು ಶುದ್ಧೀಕರಿಸದೆ ನೇರವಾಗಿ ಸರಬರಾಜು ಮಾಡಲಾಗುತ್ತಿದೆ. ಕೊಳಚೆ ನೀರು ಸೇರುತ್ತಿದ್ದರೂ ಅದನ್ನು ತಡೆದು ಭದ್ರೆಯ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಯಾರೊಬ್ಬರೂ ಗಮನಹರಿಸುತ್ತಿಲ್ಲ. ಇಂತಹ ಕೊಳಕು ನೀರಿನಿಂದ ಹಿಡಿಯುವ ಮೀನುಗಳು ಕೂಡ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆ ಇದೆ.

ಕಠಿಣ ಕ್ರಮ ಜರುಗಿಸಿ: ರಾಜಕಾಲುವೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಿ ಹರಿದುಬರುವ ಕಲ್ಮಶ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ವ್ಯವಸ್ಥೆ ಆಗಬೇಕು. ಭದ್ರಾ ನದಿ ದಂಡೆಯ ಮೇಲೆ ತ್ಯಾಜ್ಯ ಮತ್ತು ವಿಷಕಾರಿ ವಸ್ತುಗಳನ್ನು ಎಸೆಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯಲು ಪೂರೈಕೆಯಾಗುವ ನೀರಿಗೆ ಫಿಲ್ಟರ್‌ ಬೆಡ್‌ ಅಳವಡಿಸಲು ಶಾಸಕ ಟಿ.ಡಿ.ರಾಜೇಗೌಡ ಕ್ರಮ ಕೈಗೊಳ್ಳಬೇಕು.
-ಇಬ್ರಾಹಿಂ ಶಾಫಿ, ಗ್ರಾ.ಪಂ. ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ