ಆ್ಯಪ್ನಗರ

ವದಂತಿ ನಂಬಿ ಅರ್ಜಿ ಭರ್ತಿಗೆ ಮುಗಿಬಿದ್ದರು..!

ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯಡಿ ಐದು ಪುಟವುಳ್ಳ ಅರ್ಜಿ ಭರ್ತಿ ಮಾಡಿ, ದಾಖಲೆ ಒದಗಿಸಿ ಪೋಸ್ಟ್‌ ಮಾಡಿದರೆ 30 ಸಾವಿರ ರೂ. ಬರುತ್ತದೆ ಎಂಬ ವದಂತಿ ನಂಬಿದ ಜನ ತಮ್ಮ ದೈನಂದಿನ ಕೆಲಸಗಳನ್ನು ಬದಿಗಿಟ್ಟು ಅರ್ಜಿ ಬರೆದುಕೊಡುವ ಅಂಗಡಿಗೆ ಮುಗಿಬಿದ್ದ ಬೆಳವಣಿಗೆ ಪಟ್ಟಣದಲ್ಲಿನಡೆದಿದೆ.

Vijaya Karnataka 2 Feb 2020, 5:00 am
ನರಸಿಂಹರಾಜಪುರ: ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯಡಿ ಐದು ಪುಟವುಳ್ಳ ಅರ್ಜಿ ಭರ್ತಿ ಮಾಡಿ, ದಾಖಲೆ ಒದಗಿಸಿ ಪೋಸ್ಟ್‌ ಮಾಡಿದರೆ 30 ಸಾವಿರ ರೂ. ಬರುತ್ತದೆ ಎಂಬ ವದಂತಿ ನಂಬಿದ ಜನ ತಮ್ಮ ದೈನಂದಿನ ಕೆಲಸಗಳನ್ನು ಬದಿಗಿಟ್ಟು ಅರ್ಜಿ ಬರೆದುಕೊಡುವ ಅಂಗಡಿಗೆ ಮುಗಿಬಿದ್ದ ಬೆಳವಣಿಗೆ ಪಟ್ಟಣದಲ್ಲಿನಡೆದಿದೆ.
Vijaya Karnataka Web believe the rumor and fill out the application
ವದಂತಿ ನಂಬಿ ಅರ್ಜಿ ಭರ್ತಿಗೆ ಮುಗಿಬಿದ್ದರು..!


ಅಂಗಡಿ ಮುಂದೆ ಜನರು ಮುಗಿಬಿದ್ದು ಅರ್ಜಿ ತುಂಬಿಸುತ್ತಿದ್ದುದನ್ನು ಶನಿವಾರ ಗಮನಿಸಿದ ಪೊಲೀಸರು, ಈ ರೀತಿ ಯಾವುದೇ ಪ್ರಕಟಣೆ ಹೊರಡಿಸಲಾಗಿಲ್ಲ. ಇದೊಂದು ಸುಳ್ಳು ಮಾಹಿತಿ ಎಂದು ತಿಳಿಹೇಳಿದರು. ಅಲ್ಲದೆ, ಅಂಗಡಿಯವನನ್ನು ಠಾಣೆಗೆ ಕರೆಸಿ ಸೂಕ್ತ ಬುದ್ಧಿ ಹೇಳಿ ಕಳಿಸಿದ್ದಾರೆ.

ಅರ್ಜಿ ತುಂಬಿಕೊಡುವವರ ಅಂಗಡಿ ಮುಂದೆ ಜನರು ಅದರಲ್ಲೂಹೆಚ್ಚಾಗಿ ಮಹಿಳೆಯರು ಮುಗಿಬಿದ್ದು ಹಣ ಖರ್ಚು ಮಾಡಿ, ಶಾಲೆಗಳಿಗೆ ದೌಡಾಯಿಸಿ ಮಕ್ಕಳ ದಾಖಲೆಗಳನ್ನು ಬರೆಸಿಕೊಂಡು ಬಂದು ಅರ್ಜಿಗೆ ಸೇರಿಸಿ, ನಮೂದಾಗಿರುವ ವಿಳಾಸಕ್ಕೆ ಪೋಸ್ಟ್‌ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಇದೇ ಪ್ರಕ್ರಿಯೆ ಮುಂದುವರಿದಿತ್ತು. ಸುಮಾರು 60ಕ್ಕೂ ಹೆಚ್ಚು ಜನರು ಅರ್ಜಿಗಳನ್ನು ಪೋಸ್ಟ್‌ ಮೂಲಕ ಕಳಿಸಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಮತ್ತುಷ್ಟು ವಾಪಿಸುತ್ತಲೇ ಶನಿವಾರ ಅರ್ಜಿ ಬರೆದು ಕೊಡುವವನ ಅಂಗಡಿಗೆ ದೌಡಾಯಿಸಿದ್ದರು. ಜನರನ್ನು ನಿಯಂತ್ರಿಸಲು ಸರದಿಯಲ್ಲಿನಿಲ್ಲಿಸಿ ಅರ್ಜಿ ಬರೆದು ಕೊಡಲಾಗುತ್ತಿತ್ತು.

ಯಾವ ಕಚೇರಿಯಲ್ಲಿಯೂ ಇದರ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ಈ ಅರ್ಜಿ ಎಲ್ಲಿಸಿಕ್ಕಿತು ಎನ್ನುವ ಬಗ್ಗೆಯೂ ಖಚಿತಪಡಿಸಿಕೊಳ್ಳದೆ ಜನರು ತಮ್ಮ ಕೆಲಸ ಬಿಟ್ಟು ಹಣ ಖರ್ಚು ಮಾಡಿಕೊಳ್ಳಲು ಮುಂದಾಗಿದ್ದರು. ಇದು ವದಂತಿ ಮಾತ್ರ. ನಿಮ್ಮ ಸಮಯ, ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತೀರ ಎಂದು ಯಾರಾದರೂ ಹೇಳಿದರೆ. ಹೋದರೆ ನೂರು ರೂ. ಹೋಗುತ್ತೆ, ಬಂದರೆ 30 ಸಾವಿರ ರೂ. ಬರುತ್ತೆ ಬಿಡಿ ಎಂಬ ಉತ್ತರ ನೀಡುತ್ತಿದ್ದರು.
...............
ವದಂತಿ ಮೂಲ
ಪಟ್ಟಣದ ಮಂಡಗದ್ದೆ ಸರ್ಕಲ್‌ಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಪತ್ರ ಬರಹಗಾರನಿಗೆ, ಈ ರೀತಿಯಲ್ಲಿಒಂದು ಅರ್ಜಿ ನಮೂನೆ ಇದೆ. ಇದನ್ನು ಭರ್ತಿ ಮಾಡಿ ಕಳಿಸಿದರೆ 30 ಸಾವಿರ ರೂ. ಬರುತ್ತದೆ ಎಂದು ಹೇಳಿ ಒಂದು ಪ್ರತಿಯನ್ನು ನೀಡಿದ್ದ ಎನ್ನಲಾಗಿದೆ. ಈ ಪತ್ರ ಬರಹಗಾರ ಅದನ್ನು ನಿಜವೆಂದೇ ಭಾವಿಸಿ ಅರ್ಜಿಗಳನ್ನು ಭರ್ತಿ ಮಾಡಿಕೊಡಲು ಪ್ರಾರಂಭಿಸಿದ್ದಎಂದು ತಿಳಿದುಬಂದಿದೆ.
------
ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆಯಡಿ ಸರಕಾರದಿಂದ ಯಾವುದೇ ಸುತ್ತೋಲೆಯಾಗಲಿ, ಆದೇಶವಾಗಲೀ ನಮ್ಮ ಇಲಾಖೆಗೆ ಬಂದಿಲ್ಲ. ಯಾರೋ ವದಂತಿ ಹಬ್ಬಿಸಿ ಜನರ ಹಣ, ಸಮಯ ಹಾಳು ಮಾಡಲು ಹೊರಟಿದ್ದಾರೆ. ಜನರು ಇಂತಹ ಸುದ್ದಿಗಳನ್ನು ನಂಬುವ ಮೊದಲು ಸಂಬಂಧಿತ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವುದು ಒಳ್ಳೆಯದು.
- ಧನಂಜಯ ಮೇದೂರು, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ, ನರಸಿಂಹರಾಜಪುರ.
---------
ಬೇಟಿ ಬಚಾವೊ, ಬೇಟಿ ಪಡಾವೊ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ಈ ರೀತಿ 100 ರೂಪಾಯಿ ಪಡೆದು ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಿದರೆ 30 ಸಾವಿರ ರೂ. ಬರುತ್ತದೆ ಎಂದು ಸುಳ್ಳು ಹೇಳಲಾಗಿದೆ. ಮುಂದಿನ ದಿನಗಳಲ್ಲಿಇದೇ ಜನ ಸರಕಾರ ತಮ್ಮ ಖಾತೆಗೆ 30 ಸಾವಿರ ರೂ. ಹಾಕಿಲ್ಲಎಂದು ದೂರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬಗ್ಗೆ ಕೂಲಂಕಷ ಪರಿಶೀಲನೆಯಾಗಬೇಕು.
- ಎಂ.ಎನ್‌.ನಾಗೇಶ್‌, ಸದಸ್ಯ, ತಾಲೂಕು ಪಂಚಾಯಿತಿ, ನರಸಿಂಹರಾಜಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ