ಆ್ಯಪ್ನಗರ

ಧರ್ಮಾನುಷ್ಠಾನದಿಂದ ಜನ್ಮ ಸಾರ್ಥಕ

ಮನುಷ್ಯ ಜೀವನವೇ ಅತ್ಯಂತ ಶ್ರೇಷ್ಠವಾಗಿದ್ದು,ಜನ್ಮ ಸಾರ್ಥಕವಾಗಬೇಕಾದರೆ ಧರ್ಮಾನುಷ್ಠಾನ ಮಾಡಬೇಕು ಎಂದು ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

Vijaya Karnataka 15 Sep 2018, 5:00 am
ಶೃಂಗೇರಿ : ಮನುಷ್ಯ ಜೀವನವೇ ಅತ್ಯಂತ ಶ್ರೇಷ್ಠವಾಗಿದ್ದು,ಜನ್ಮ ಸಾರ್ಥಕವಾಗಬೇಕಾದರೆ ಧರ್ಮಾನುಷ್ಠಾನ ಮಾಡಬೇಕು ಎಂದು ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
Vijaya Karnataka Web CKM-14SRI7


ಶ್ರೀ ಮಠದ ಗುರುಭವನದಲ್ಲಿ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಶುಕ್ರವಾರ ಆಯೋಜಿಸಿದ್ದ ಗುರುದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಮನುಷ್ಯ ಜನ್ಮ ದುರ್ಲಭವಾದದು ಹಾಗೂ ಅತ್ಯಂತ ಶ್ರೇಷ್ಠವಾದದು.ಉಳಿದ ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸವೆಂದರೆ ಆಹಾರ,ನಿದ್ರೆ ಸಾಮಾನ್ಯವಾಗಿದೆ.ಆದರೆ ಮನುಷ್ಯರಿಗೆ ಶ್ರೇಷ್ಠತ್ವ ಎಂದರೆ ಧರ್ಮಾನುಷ್ಠಾನ ಮಾಡುವುದಾಗಿದೆ.ದುಃಖ ಬರಬಾರದು ಎಂದರೆ ಅಧರ್ಮ ಬಿಡಬೇಕು.ಧರ್ಮಾನುಷ್ಠಾನ ಮಾಡಿ ತನ್ನ ಜೀವನದಲ್ಲಿ ಉತ್ತಮವಾದ ಮಾರ್ಗ ಪಡೆದುಕೊಳ್ಳಬಹುದಾಗಿದೆ.ಪ್ರಾಣಿಗಳಿಗೆ ನಮ್ಮಂತೆ ಯಜ್ಞ,ಯಾಗಾದಿ,ಜಪ,ತಪ ಮಾಡಲು ಸಾಧ್ಯವಿಲ್ಲ.ಬ್ರಾಹ್ಮಣರಾದವರು ಪ್ರತಿ ದಿನವೂ ಗಾಯತ್ರಿಮಂತ್ರ ಜಪ,ಸಂಧ್ಯಾವಂದನೆ ಮಾಡುವುದು ಪ್ರಥಮ ಕರ್ತವ್ಯವಾಗಿದೆ.ನಮಗೆ ದೊರಕಿರುವ ಶರೀರವನ್ನು ಪೋಷಣೆ ಮಾಡುವುದು ಮುಖ್ಯವಾಗಿದ್ದರೂ,ಇದರೊಂದಿಗೆ ಶರೀರಕ್ಕೆ ಕಾಠೀಣ್ಯ ನೀಡಿ,ಧರ್ಮಾನುಷ್ಠಾನ ಮಾಡಬೇಕು.ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮವೇ ಆಗಿದೆ.ಅದರಂತೆ ಗುರುದರ್ಶನ ಹಾಗೂ ಭಗವಂತನ ಸೇವೆ ಮಾಡುವುದು ಧರ್ಮಾಚರಣೆ ಆಗುತ್ತದೆ.ಮನಸ್ಸು,ವಾಕ್‌ ಶರೀರ ಮೂರು ಸಾಧನಗಳು ಧರ್ಮಾನುಷ್ಠನಕ್ಕಾಗಿ ವಿನಿಯೋಗ ಮಾಡಿದರೆ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು.

ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಗುಡ್ಡೆತೋಟ ಗೋಪಾಲಕೃಷ್ಣ ಮಾತನಾಡಿ,ಜಗದ್ಗುರುಗಳ ಆದೇಶದಂತೆ ಶ್ರೀ ಮಠದ ಶಿಷ್ಯರಾಗಿ ಶ್ರೀ ಶಂಕರಜಯಂತಿ ಆಚರಣೆ,ಶಂಕರ ಅಷ್ಟೊತ್ತರ ಶತನಾಮವಳಿ,ಭಗವದ್ಗೀತೆ ಪಠಣ, ಶ್ರೀಮಠದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಕರ್ತವ್ಯ ಸಲ್ಲಿಸಲಾಗುತ್ತಿದೆ.ಸಂಘಟನೆ ಹಾಗೂ ಮುಂದಿನ ಪೀಳಿಗೆಯು ಸಂಸ್ಕಾರವನ್ನು ಬೆಳಸಿಕೊಳ್ಳುವ ದೃಷ್ಠಿಯಿಂದ ಯುವ ಘಟಕವನ್ನು ಸ್ಥಾಪಿಸಲಾಗಿದೆ. ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಉಪನ್ಯಾಸ,ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಇದಕ್ಕೂ ಮೊದಲು ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಗೆ ಮಹಾಸಭಾದ ವತಿಯಿಂದ ಭಿಕ್ಷಾವಂದನೆ,ಪಾದಪೂಜೆ, ಫಲ,ಪುಷ್ಪ,ವಸ್ತ್ರ ಕಾಣಿಕೆ,ಗುರು ಕಾಣಿಕೆ ಸಮರ್ಪಿಸಲಾಯಿತು.ಮಹಾಸಭಾದ ಪದಾಧಿಕಾರಿಗಳಾದ ಹೆಬ್ಬಿಗೆ ಚಂದ್ರಶೇಖರ್‌,ದೀಪಕ್‌ ಹುಲ್ಕುಳಿ,ತಲವಾನೆ ಪ್ರಕಾಶ್‌,ಅಡೇಕಂಡಿ ಲಕ್ಷ್ಮೀನಾರಾಯಣ,ಹಿರೇಹಳ್ಳಿ ಶಿವಶಂಕರ್‌ ಹಾಗೂ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಸಮಾಜ ಬಂಧುಗಳು ಜಗದ್ಗುರುಗಳ ಆಶೀರ್ವಾದ ಪಡೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ