ಆ್ಯಪ್ನಗರ

ಚಿಕ್ಕಮಗಳೂರು ಯಶವಂತಪುರ ರೈಲು ಸ್ಥಗಿತ

ಬಹು ನಿರೀಕ್ಷಿತ ಚಿಕ್ಕಮಗಳೂರು-ಕಡೂರು ರೈಲು ಮಾರ್ಗ, ಇಲಾಖೆಯ ತೀವ್ರ ಅಸಡ್ಡೆಗೆ ತುತ್ತಾಗಿದ್ದು, ಇರುವ ಎರಡು ರೈಲಿನಲ್ಲಿ ಒಂದನ್ನು ಇಲಾಖೆ ಕಿತ್ತುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Vijaya Karnataka 29 Nov 2018, 5:00 am
ಕಡೂರು : ಬಹು ನಿರೀಕ್ಷಿತ ಚಿಕ್ಕಮಗಳೂರು-ಕಡೂರು ರೈಲು ಮಾರ್ಗ, ಇಲಾಖೆಯ ತೀವ್ರ ಅಸಡ್ಡೆಗೆ ತುತ್ತಾಗಿದ್ದು, ಇರುವ ಎರಡು ರೈಲಿನಲ್ಲಿ ಒಂದನ್ನು ಇಲಾಖೆ ಕಿತ್ತುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
Vijaya Karnataka Web chikmagalur yeshwanthpur train breakdown
ಚಿಕ್ಕಮಗಳೂರು ಯಶವಂತಪುರ ರೈಲು ಸ್ಥಗಿತ


ಚಿಕ್ಕಮಗಳೂರಿನಿಂದ ಯಶವಂತಪುರಕ್ಕೆ ನಿತ್ಯ ಸಂಚರಿಸುತ್ತಿದ್ದ ಗಾಡಿ ಸಂಖ್ಯೆ 56277/278ನ್ನು ಇಲಾಖೆ ಕಳೆದ ಒಂದು ವಾರದಿಂದ ಏಕಾಏಕಿ ನಿಲ್ಲಿಸಿದ್ದು, ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹಾಗೂ ಮಾರ್ಗದ ಮಧ್ಯೆ ಬರುವ ಇತರ ಊರುಗಳಿಗೆ ತೆರಳಲು ಅವಲಂಬಿಸಿದ್ದ ಪ್ರಯಾಣಿಕರು ಈಗ ಪರದಾಡುವಂತಾಗಿದೆ.

ರೈಲ್ವೆ ಇಲಾಖೆ ಮೂಲದ ಪ್ರಕಾರ ನ.21ರಿಂದ ಈ ರೈಲನ್ನು ಚಿಕ್ಕಮಗಳೂರಿನಿಂದ ಕಡೂರುವರೆಗೆ ಓಡಿಸಲಾಗುತ್ತಿದೆ. ನಂತರ ಖಾಲಿ ರೈಲನ್ನು ಬೀರೂರುವರೆಗೆ ಕೊಂಡೊಯ್ದು ಅಲ್ಲಿ ಸಂಜೆಯವರೆಗೆ ಟ್ರಾಕ್‌ನಲ್ಲಿ ನಿಲ್ಲಿಸಲಾಗುತ್ತಿದೆ. ರಾತ್ರಿ ಪುನಃ 8 ಗಂಟೆಗೆ ಚಿಕ್ಕಮಗಳೂರು ಕಡೆಗೆ ಈ ರೈಲನ್ನು ಓಡಿಸುತ್ತಿರುವ ಮಾಹಿತಿ ಲಭ್ಯವಾಗಿದೆ.

ಇದರಿಂದ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ನಿತ್ಯ ಪ್ರಯಾಣಿಸುತ್ತಿದ್ದ ಜನರಿಗೆ ತೊಂದರೆಯಾಗಿದೆ. ಅಲ್ಲದೆ ಇಲಾಖೆಯ ಆದಾಯಕ್ಕೂ ಕುತ್ತಾಗಿದೆ. ಜತೆಗೆ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರಿಂದ ಅಡಿಗಲ್ಲು ಹಾಕಿಸಿಕೊಂಡು 33 ವರ್ಷದ ಕಾಮಗಾರಿ ಬಳಿಕ ಆರಂಭವಾದ ಚಿಕ್ಕಮಗಳೂರು-ಕಡೂರು ಮಾರ್ಗದಲ್ಲಿ ಇದ್ದ ಎರಡು ರೈಲಿನಲ್ಲಿ ಒಂದು ನಿಂತಿರುವುದು ದುದೈರ್‍ವದ ಸಂಗತಿಯಾಗಿದೆ.

ಸದ್ಯ ಚಿಕ್ಕಮಗಳೂರು-ಶಿವಮೊಗ್ಗ ಗಾಡಿ ಸಂಖ್ಯೆ 56271/272 ರೈಲು ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮುಂದಿನ ದಿನದಲ್ಲಿ ಈ ರೈಲು ಗಾಡಿಯೂ ನಿಂತರೆ ಏನು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಅರಸಿಕೆರೆಯಿಂದ ತುಮಕೂರು ವರೆಗೆ ಜೋಡಿ ಮಾರ್ಗ ನಿರ್ಮಾಣವಾಗುತ್ತಿರುವುದರಿಂದ ಈ ಚಿಕ್ಕಮಗಳೂರು-ಯಶವಂತಪುರ ರೈಲಿಗೆ ಮಾರ್ಗ ಸಮಸ್ಯೆಯಾಗಿದೆ. ಅದಕ್ಕಾಗಿ ಕಡೂರುವರೆಗೆ ಓಡಿಸಲಾಗುತ್ತಿದೆ ಎನ್ನುವುದು ರೈಲು ನಿಲ್ದಾಣ ಅಧಿಕಾರಿಗಳ ಹೇಳಿಕೆ.

ಒಟ್ಟಿನಲ್ಲಿ ಕಡೂರು-ಚಿಕ್ಕಮಗಳೂರು ಮಾರ್ಗ ಒಂದು ರೀತಿಯ ಶಾಪಗ್ರಸ್ತ ಮಾರ್ಗವಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ಮಾರ್ಗದಲ್ಲಿ ಇನ್ನಷ್ಟು ಹೊಸ ರೈಲುಗಳು ಬರುವ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ತೀವ್ರ ನಿರಾಸೆ ತಂದಿದೆ. ಪ್ರಯಾಣಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಬೀದಿಗಿಳಿದು ಪ್ರತಿಭಟಿಸುವ ದಿನಗಳು ದೂರವಿಲ್ಲ ಎಂಬುದು ಹಲವು ಪ್ರಯಾಣಿರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ