ಆ್ಯಪ್ನಗರ

ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಣೆ

ಶಾಂತಿ ಧೂತ ಏಸುಕ್ರಿಸ್ತರ ಜನ್ಮದಿನದ ಅಂಗವಾಗಿ ಕ್ರೈಸ್ತ ಸಮುದಾಯದವರು ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

Vijaya Karnataka 26 Dec 2018, 5:00 am
ಚಿಕ್ಕಮಗಳೂರು : ಶಾಂತಿ ಧೂತ ಏಸುಕ್ರಿಸ್ತರ ಜನ್ಮದಿನದ ಅಂಗವಾಗಿ ಕ್ರೈಸ್ತ ಸಮುದಾಯದವರು ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
Vijaya Karnataka Web CKM-25rudrap8


ನಗರದ ವಿವಿಧ ಚರ್ಚ್‌ಗಳಿಗೆ ಸೋಮವಾರ ರಾತ್ರಿಯಿಂದಲೇ ಆಗಮಿಸಿದ ಸಹಸ್ರಾರು ಭಕ್ತರು ತಮ್ಮ ಆರಾಧ್ಯ ದೈವನಿಗೆ ಎರಡು ದಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಹೃದಯ ಭಾಗದಲ್ಲಿರುವ ಪ್ರಧಾನ ಕ್ರೈಸ್ತ ದೇವಾಲಯಕ್ಕೆ ಸೋಮವಾರ ಮಧ್ಯರಾತ್ರಿಯಿಂದಲೇ ಜನಜಾತ್ರೆ ಹರಿದುಬಂತು. ರಾತ್ರಿ 12 ಗಂಟೆಗೆ ಸಮುದಾಯದ ಭಕ್ತರು ಸಾಮೂಹಿಕ ಪ್ರಾಥನೆ ಸಲ್ಲಿಸುವ ಮೂಲಕ ಏಸುಕ್ರಿಸ್ತರ ಜನ್ಮ ದಿನವನ್ನು ಸಂತಸದಿಂದ ಬರಮಾಡಿಕೊಂಡರು. ಮಂಗಳವಾರ ಕೂಡ ದಿನವಿಡೀ ಚರ್ಚ್‌ಗೆ ಆಗಮಿಸಿದ ಭಕ್ತರು ತಮ್ಮ ಭಕ್ತಿ ಭಾವ ತೋರಿದರು. ಪ್ರಧಾನ ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಏಸು ಕ್ರಿಸ್ತರ ಜೀವನ ವೃತ್ತಾಂತ ಬಿಂಬಿಸುವ ಗೋಂದಲಿ ನೋಡುಗರನ್ನು ನಿಬ್ಬೆರಗಾಗಿಸುವಂತಿತ್ತು. ಕ್ರಿಸ್ತ ಹುಟ್ಟಿದ ದನದ ಕೊಟ್ಟಿಗೆ, ವ್ಯವಸಾಯದ ಗದ್ದೆಗಳು, ಜುಳುಜುಳು ಹರಿಯುವ ಕಿರು ಹಳ್ಳಗಳು, ಚಿಕ್ಕಚಿಕ್ಕ ಸುಂದರ ಗುಡಾರಗಳು, ಮೇರಿ ಮಾತೆಯ ಮಡಿಲಲ್ಲಿರುವ ಬಾಲಯೇಸು.. ಹೀಗೆ ಒಂದು ಗ್ರಾಮದ ವೃತ್ತಾಂತ ಹಾಗೂ ಏಸುವಿನ ಜೀವನವನ್ನು ಬಿಂಬಿಸುವ ಚಿತ್ರಗಳು ಆಕರ್ಷಕವಾಗಿದ್ದವು. ಕ್ರೈಸ್ತರಲ್ಲದೆ ಹಿಂದೂಗಳು, ಮುಸಲ್ಮಾನರು ಕೂಡ ಚರ್ಚ್‌ ಆವರಣಕ್ಕೆ ಬಂದು ಅತ್ಯಾಕರ್ಷಕ ಗೋಂದಲಿಯನ್ನು ನೋಡಿ ಆನಂದಿಸಿದರು.

ಮನೆಮನೆಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯದವರು ಕೇಕ್‌ ವಿನಿಮಯಮಾಡಿಕೊಂಡು ಪರಸ್ಪರ ಶುಭಾಶಯ ಕೋರುತ್ತಿದ್ದ ದೃಶ್ಯ ಕಾಣಬಹುದಿತ್ತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ