ಆ್ಯಪ್ನಗರ

ಮೀಸಲಾತಿ ಹೆಚ್ಚಳಕ್ಕೆ ಆಹೋರಾತ್ರಿ ಧರಣಿಗೆ ನಿರ್ಧಾರ

ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಜೂ.19ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕರೆದಿರುವ ಸಭೆ ವಿಫಲವಾದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಹೋರಾತ್ರಿ ಧರಣಿ ನಡೆಸುವುದಾಗಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಎಚ್ಚರಿಸಿದೆ.

Vijaya Karnataka 19 Jun 2019, 5:00 am
ಚಿಕ್ಕಮಗಳೂರು : ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಜೂ.19ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕರೆದಿರುವ ಸಭೆ ವಿಫಲವಾದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಹೋರಾತ್ರಿ ಧರಣಿ ನಡೆಸುವುದಾಗಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಎಚ್ಚರಿಸಿದೆ.
Vijaya Karnataka Web CKM-18RUDRAP1


ಸಂಘದ ಅಧ್ಯಕ್ಷ ಜಿ.ಕೆ.ಭೀಮಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2011ರ ಗಣತಿ ಪ್ರಕಾರ ಪರಿಶಿಷ್ಟ ವರ್ಗದ ಜನಸಂಖ್ಯೆ 42.48 ಲಕ್ಷ ಇದೆ. ಗಣತಿ ನಡೆದು 8 ವರ್ಷವಾಗಿರುವುದರಿಂದ ಶೇ.7ರಷ್ಟು ಜನಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಪ್ರಸ್ತುತ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇದರಿಂದ ಈ ವರ್ಗಕ್ಕೆ ಅನೇಕ ದಶಕದಿಂದ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.7ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.

ಕೆಲ ಮುಂದುವರಿದ ವರ್ಗದವರು ಪರಿಶಿಷ್ಟ ಪಂಗಡ ಎಂದು ನಕಲಿ ಜಾತಿ ಪ್ರಮಾಣಪತ್ರ ಪಡೆದು ನಮ್ಮ ಸವಲತ್ತನ್ನು ಕಬಳಿಸುತ್ತಿದ್ದಾರೆ. ತರೀಕೆರೆಯಲ್ಲಿ ಇದೇ ರೀತಿ ಒಂದು ಕುಟುಂಬ ಸುಳ್ಳು ಜಾತಿ ಪತ್ರ ನೀಡಿ ಅನೇಕ ಸರಕಾರಿ ಹುದ್ದೆಯನ್ನು ಅನುಭವಿಸಿದೆ. ಇದೀಗ ಜಿಲ್ಲಾಧಿಕಾರಿಗಳು ಅವರ ಜಾತಿ ಪ್ರಮಾಣಪತ್ರವನ್ನು ನಿಷೇಧಿಸಿ ಆದೇಶಿಸಿದ್ದಾರೆ. ಇದೇ ರೀತಿ ರಾಜ್ಯದಲ್ಲಿ 20 ಸಾವಿರ ಸುಳ್ಳು ಜಾತಿ ಪತ್ರ ನೀಡಿರುವ ಪ್ರಕರಣಗಳು ಇವೆ ಎಂದು ಸಮೀಕ್ಷೆಯೊಂದು ಹೇಳಿದೆ ಎಂದರು.

ರಾಜ್ಯದಲ್ಲಿ 50 ಬುಡಕಟ್ಟು ಗುಂಪುಗಳನ್ನು ಪರಿಶಿಷ್ಟ ವರ್ಗವೆಂದು ಅಧಿಸೂಚಿಸಿಲಾಗಿದೆ. ಪ್ರತಿ ಬುಡಕಟ್ಟು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಹೊಂದಿದೆ. ಕೃಷಿಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ, ಪೌಷ್ಠಿಕತೆ ಮತ್ತಿತರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ತೆರೆಯುವಂತೆ ಆಗ್ರಹಿಸಲಾಗುವುದು ಎಂದರು.

ಕಾರ್ಯದರ್ಶಿ ಕೃಷ್ಣಪ್ಪ, ನಂದೀಶ್‌ ಮದಕರಿ, ಧರ್ಮರಾಜ್‌, ಪ್ರಸನ್ನನಾಯಕ್‌, ದಯಾನಂದ, ಬಲರಾಮ್‌ನಾಯಕ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ