ಆ್ಯಪ್ನಗರ

ಬಿಸಿಯೂಟ ದವಸದಲ್ಲಿ ಹುಳು: ಕ್ರಮಕ್ಕೆ ಆಗ್ರಹ

ತಾಲೂಕಿನ ಮಲ್ಲೇಶ್ವರದಲ್ಲಿ ಶಾಲೆಯ ಬಿಸಿಯೂಟ ತಯಾರಿಸುವ ದವಸ ಧಾನ್ಯದಲ್ಲಿ ಹುಳುವಿನ ಕಾಟ ಕಂಡುಬಂದಿದ್ದರಿಂದ ಮಕ್ಕಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಸದಸ್ಯರ ಮುಂದೆ ಸಮಸ್ಯೆ ಬಿಚ್ಚಿಟ್ಟರು.

Vijaya Karnataka 17 Jul 2018, 5:00 am
ಕಡೂರು : ತಾಲೂಕಿನ ಮಲ್ಲೇಶ್ವರದಲ್ಲಿ ಶಾಲೆಯ ಬಿಸಿಯೂಟ ತಯಾರಿಸುವ ದವಸ ಧಾನ್ಯದಲ್ಲಿ ಹುಳುವಿನ ಕಾಟ ಕಂಡುಬಂದಿದ್ದರಿಂದ ಮಕ್ಕಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಸದಸ್ಯರ ಮುಂದೆ ಸಮಸ್ಯೆ ಬಿಚ್ಚಿಟ್ಟರು.
Vijaya Karnataka Web demand for action
ಬಿಸಿಯೂಟ ದವಸದಲ್ಲಿ ಹುಳು: ಕ್ರಮಕ್ಕೆ ಆಗ್ರಹ


ಪಟ್ಟಣಕ್ಕೆ 2 ಕಿ.ಮೀ. ದೂರವಿರುವ ಮಲ್ಲೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 84 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ ಮಕ್ಕಳ ಬಿಸಿಯೂಟದ ಬೇಳೆ ಮತ್ತು ಅಕ್ಕಿಯಲ್ಲಿ ಹುಳುವಿನ ಬಾಧೆ ಹೆಚ್ಚಾಗಿದ್ದು, ಊಟ ಮಾಡುವುದು ಕಷ್ಟಕರವಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಸೋಮವಾರ ಬೆಳಗ್ಗೆ ತೆರಳಿದ ಮಕ್ಕಳು ಸದಸ್ಯ ಹಾಗೂ ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಶೂದ್ರ ಶ್ರೀನಿವಾಸ್‌ ಅವರಿಗೆ ಹುಳುವಿನಿಂದ ಕೂಡಿದ್ದ ಬೇಳೆ ತೋರಿಸಿ ಸಮಸ್ಯೆ ಪರಿಹರಿಸಿಕೊಡುವಂತೆ ಒತ್ತಾಯಿಸಿದರು.

ಕೂಡಲೇ ಶಾಲೆಗೆ ಭೇಟಿ ನೀಡಿದ ಶ್ರೀನಿವಾಸ್‌ ಮುಖ್ಯಶಿಕ್ಷಕ ಮಂಜುನಾಥನಾಯ್ಕ ಅವರಲ್ಲಿ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕರು, ಇಡೀ ತಾಲೂಕಿನ ಎಲ್ಲ ಶಾಲೆಗಳಿಗೆ ಇದೇ ರೀತಿಯ ಅಕ್ಕಿ, ಬೇಳೆ ಸರಬರಾಜಾಗಿದೆ. ಬಿಸಿಯೂಟ ಇಲಾಖೆ ಸರಬರಾಜು ಮಾಡಿರುವ ಧವಸ, ಧಾನ್ಯವನ್ನು ಆದಷ್ಟು ಜಾಗ್ರತೆ ವಹಿಸಿ ಸ್ವಚ್ಛಗೊಳಿಸಿ ಮಕ್ಕಳಿಗೆ ಊಟಕ್ಕೆ ಬಡಿಸಲಾಗುತ್ತದೆ. ಪರಿಸ್ಥಿತಿ ಕೈಮೀರಿದಾಗ ಚಿತ್ರಾನ್ನ, ಟೊಮೇಟೊ ಬಾತ್‌ ನಂತಹ ತಿಂಡಿ ಮಾಡಿ ಬಡಿಸಲಾಗುತ್ತಿದೆ ಎಂದರು.

ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರೊಂದಿಗೆ ಶ್ರೀನಿವಾಸ್‌ ಮಾತನಾಡಿ, ಬಿಸಿಯೂಟ ತಯಾರಿಕೆಗೆ ಧವಸ ಧಾನ್ಯ ಸರಬರಾಜು ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರನ್ನು ಈ ಕೂಡಲೇ ಅಧಿಕಾರಿಗಳು ಕರೆಸಿ ಶಿಸ್ತುಕ್ರಮ ಜರುಗಿಸಬೇಕು. ಎಲ್ಲ ಶಾಲೆಗಳಿಗೆ ಸರಬರಾಜಾಗಿರುವ ಅಕ್ಕಿ, ಬೇಳೆಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ