ಆ್ಯಪ್ನಗರ

ಕೊಡಗಿನ ಒಂದು ಗ್ರಾಮ ದತ್ತು ಪಡೆದು ಅಭಿವೃದ್ಧಿ

ಮಹಾಮಳೆಯಿಂದ ನಲುಗಿರುವ ಕೊಡಗಿನ ಯಾವುದಾದರೂ ಒಂದು ಗ್ರಾಮವನ್ನು ದತ್ತು ಪಡೆದು 2 ಕೋಟಿಗೂ ಅಧಿಕ ಮೊತ್ತದಲ್ಲಿ ಪುನರ್‌ ನಿರ್ಮಾಣ ಮಾಡುವ ಮಹತ್ವದ ನಿರ್ಧಾರವನ್ನು ಕರ್ನಾಟಕ ಆರ‍್ಯವೈಶ್ಯ ಮಹಾಸಭಾ ಕೈಗೊಂಡಿದೆ.

Vijaya Karnataka 4 Sep 2018, 5:00 am
ಚಿಕ್ಕಮಗಳೂರು : ಮಹಾಮಳೆಯಿಂದ ನಲುಗಿರುವ ಕೊಡಗಿನ ಯಾವುದಾದರೂ ಒಂದು ಗ್ರಾಮವನ್ನು ದತ್ತು ಪಡೆದು 2 ಕೋಟಿಗೂ ಅಧಿಕ ಮೊತ್ತದಲ್ಲಿ ಪುನರ್‌ ನಿರ್ಮಾಣ ಮಾಡುವ ಮಹತ್ವದ ನಿರ್ಧಾರವನ್ನು ಕರ್ನಾಟಕ ಆರ‍್ಯವೈಶ್ಯ ಮಹಾಸಭಾ ಕೈಗೊಂಡಿದೆ.
Vijaya Karnataka Web development of a village adopted by kodagu
ಕೊಡಗಿನ ಒಂದು ಗ್ರಾಮ ದತ್ತು ಪಡೆದು ಅಭಿವೃದ್ಧಿ


ಸರಕಾರ ಆಯ್ಕೆ ಮಾಡಿಕೊಡುವ ಯಾವುದೇ ಒಂದು ಗ್ರಾಮವನ್ನು ಸಂಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಪುನರ್‌ ನಿರ್ಮಾಣ ಮಾಡಲು ಮಹಾಸಭಾ ನಿರ್ಧರಿಸಿದೆ. 6 ತಿಂಗಳೊಳಗೆ ಈ ಕಾರ‍್ಯ ಪೂರ್ಣಗೊಳಿಸಲಿದ್ದು, ಎಷ್ಟೇ ವೆಚ್ಚವಾದರೂ ಅದನ್ನು ಭರಿಸಲು ಸಮಾಜ ಬಾಂಧವರು ಕೈಜೋಡಿಸಲಿದ್ದಾರೆ ಎಂದು ಆರ‍್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ವೆಂಕಟೇಶ್‌, ಉಪಾಧ್ಯಕ್ಷ ದಿನೇಶ್‌ ಗುಪ್ತ, ಮುಖಂಡ ಸತೀಶ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರಿಣತ ಎಂಜಿನಿಯರ್‌ಗಳಿಂದ ತುರ್ತು ಅಗತ್ಯಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಲಾಗುವುದು. ಆದ್ಯತೆ ಮೇರೆಗೆ ಕಾರ‍್ಯಯೋಜನೆ ಸಿದ್ಧಪಡಿಸಿ 6 ತಿಂಗಳೊಳಗೆ ಗ್ರಾಮದ ನಿವಾಸಿಗಳ ನಿತ್ಯ ಜೀವನ ನಿರ್ವಹಣೆಗೆ ಅಗತ್ಯವಿರುವ ಪೂರ್ಣ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಆದರ್ಶ ಹಾಗೂ ಮಾದರಿಯಾಗಿ ಆ ಗ್ರಾಮವನ್ನು ರೂಪಿಸಲಾಗುವುದು ಎಂದರು.

ಸಂತ್ರಸ್ತರ ಮನೆಗಳ ದುರಸ್ತಿ, ನಿರ್ಮಾಣಕ್ಕೆ ಸಹಕಾರ, ವಿದ್ಯುತ್‌ ಇಲಾಖೆ ಸಹಕಾರದೊಂದಿಗೆ ಮನೆಗಳಿಗೆ ವಿದ್ಯುದ್ದೀಕರಣ, ಸ್ಥಳೀಯವಾಗಿ ಇರುವ ಹೊಳೆ, ನದಿ, ನೀರಿನ ಮೂಲ ಬಳಸಿಕೊಂಡು ಶುದ್ಧ ಹಾಗೂ ಶಾಶ್ವತ ಕುಡಿವ ನೀರಿನ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವ್ಯವಸ್ಥೆ, ಶಾಲೆ ಗ್ರಾಮದಿಂದ ಹೊರಗಿದ್ದರೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಶೌಚಾಲಯಗಳ ನಿರ್ಮಾಣ, ಶೌಚಾಲಯಗಳಿಗೆ ನೀರಿನ ವ್ಯವಸ್ಥೆ, ಅಡುಗೆಗೆ ಅಗತ್ಯವಿರುವ ಪಾತ್ರೆಗಳು, ಮನೆಗಳಿಗೆ ಕನಿಷ್ಠ ಪೀಠೋಪಕರಣಗಳು, ನಿವಾಸಿಗಳಿಗೆ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ, ಜಾನುವಾರುಗಳಿಗೆ ಆರೋಗ್ಯ ತಪಾಸಣೆ, ಮೇವಿನ ವ್ಯವಸ್ಥೆ, ಕೃಷಿ ಯಂತ್ರೋಪಕರಣ, ಪರಿಸರ ಸಂರಕ್ಷಣೆ, ಸಸ್ಯ ಸಂಕುಲದ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಆರ‍್ಯವೈಶ್ಯ ಪ್ರಮುಖರು, ಆರ‍್ಯವೈಶ್ಯ ಸಂಘ ಸಂಸ್ಥೆಗಳು ಆರ್ಥಿಕ ಸಂಗ್ರಹಣೆಗೆ ಕೈಜೋಡಿಸಲಿವೆ. ಈ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಆರ‍್ಯವೈಶ್ಯ ಮಹಾಸಭಾ ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ನಿರೀಕ್ಷೆ ಮಾಡುತ್ತಿಲ್ಲ. ಎಷ್ಟೇ ವೆಚ್ಚವಾದರೂ ಸಮಾಜ ಬಾಂಧವರೇ ಭರಿಸಲಿದ್ದಾರೆ. ಇದು ಇತರೆ ಸಂಘ ಸಂಸ್ಥೆಗಳಿಗೂ ಮಾದರಿಯಾಗಬೇಕು ಎಂಬ ಆಶಯ ನಮ್ಮದಾಗಿದೆ ಎಂದು ಹೇಳಿದರು.

ಆರ‍್ಯವೈಶ್ಯ ಮಹಾಸಭಾ ಮೈಸೂರು ವಿಭಾಗೀಯ ಕಾರ‍್ಯದರ್ಶಿ ಗೋಪಾಲಕೃಷ್ಣ, ಮುಖಂಡರಾದ ಸುರೇಂದ್ರನಾಥ್‌, ಸುರೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ