ಆ್ಯಪ್ನಗರ

ಪ್ರವಾಹ ಪರಿಹಾರಕ್ಕೆ ಜಿಲ್ಲಾಡಳಿತದ ಶ್ರಮ

ಪ್ರವಾಹ ಮತ್ತು ಗುಡ್ಡ ಕುಸಿತದಿಂದ ನಲುಗಿರುವ ಜಿಲ್ಲೆಯ ಮಲೆನಾಡು ಭಾಗದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ತಿಳಿಸಿದರು.

Vijaya Karnataka 11 Aug 2019, 5:00 am
ಚಿಕ್ಕಮಗಳೂರು : ಪ್ರವಾಹ ಮತ್ತು ಗುಡ್ಡ ಕುಸಿತದಿಂದ ನಲುಗಿರುವ ಜಿಲ್ಲೆಯ ಮಲೆನಾಡು ಭಾಗದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ತಿಳಿಸಿದರು.
Vijaya Karnataka Web CKM-10ARAGAP1


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ರಸ್ತೆ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕಿರುವ ಚನ್ನಹಡ್ಲು, ದುರ್ಗದಹಳ್ಳಿ, ಬಲಿಗೆ, ಸುಂಕಸಾಲೆ, ಇಡಕಣಿ, ಹಿರೇಬೈಲು, ಮಲ್ಲೇಶನಗುಡ್ಡ ಭಾಗದ ಜನರನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ರಜೆಯಲ್ಲಿದ್ದ ಜಿಲ್ಲಾಧಿಕಾರಿ ಶನಿವಾರ ಬೆಳಗ್ಗೆಯೇ ಆಗಮಿಸಿ ಮೂಡಿಗೆರೆ ತಾಲೂಕಿನ ಪ್ರವಾಹ ಪೀಡಿತ ಪ್ರದೇಶದ ರಕ್ಷಣಾ ಕಾರಾರ‍ಯಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಎನ್‌ಡಿಆರ್‌ಎಫ್‌ ತಂಡ ಕಳಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ 4 ಕಾಳಜಿ ಕೇಂದ್ರಗಳನ್ನು ತೆರೆದು ಅಪಾಯದಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಆ.1 ರಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಶುಕ್ರವಾರ 5 ನಿಮಿಷವೂ ಬಿಡುವಿಲ್ಲದೆ ಮಳೆಯಾಗಿದೆ. ಇದರಿಂದ ಧರೆ ಕುಸಿತ, ಗುಡ್ಡ ಕುಸಿತ, ಮರಗಳು, ವಿದ್ಯುತ್‌ ಕಂಬಗಳು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ತುಂಗ, ಭದ್ರಾ, ಹೇಮಾವತಿ ನದಿ ಪ್ರವಾಹ ರಸ್ತೆಗಳಿಗೆ ಬಂದಿದ್ದು, ರಕ್ಷಣಾ ಕಾರಾರ‍ಯಚರಣೆಗೆ ಅಡ್ಡಿಯಾಗಿದೆ ಎಂದರು.

ಎಲ್ಲೆಲ್ಲಿ ಭೂ ಕುಸಿತ? : ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆ, ಹಳವಳ್ಳಿ-ಹೊರನಾಡು ರಸ್ತೆ, ಸುಂಕಸಾಲೆ ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳು, ಕೊಟ್ಟಿಗೆಹಾರ-ಕಳಸ ರಸ್ತೆ, ತತ್ಕೊಳ, ಕುಂದೂರು ರಸ್ತೆ, ದುರ್ಗದಹಳ್ಳಿ, ಚನ್ನಹಡ್ಲು-ಹಿರೇಬೈಲು, ಮಲ್ಲೇಶನಗುಡ್ಡ ರಸ್ತೆಗಳಲ್ಲಿ ಭೂಕುಸಿತ ಆಗುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಭೂ ಕುಸಿತದಿಂದ ಜನರಿಗೆ ತೊಂದರೆಯಾಗಿದೆ. ವಾಯು ಮಾರ್ಗದಲ್ಲಿ ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ ಸಹಕಾರ ಕೋರಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ರಸ್ತೆಗಳಿಗೆ ಬಿದ್ದಿರುವ ಅಪಾರ ಪ್ರಮಾಣದ ಕಲ್ಲುಮಣ್ಣನ್ನು ಜೆಸಿಬಿಗಳನ್ನು ಬಳಸಿ ತೆರವು ಮಾಡಲಾಗುತ್ತಿದೆ. ರಕ್ಷಣಾ ಕಾರ‍್ಯಕ್ಕೆ ದೋಣಿಗಳು, ಲೈಫ್‌ಜಾಕೆಟ್‌, ಪ್ರಥಮ ಚಿಕಿತ್ಸೆ ಕಿಟ್‌ ಮತ್ತಿತರ ಅಗತ್ಯ ಸಲಕರಣೆ ನೀಡಲಾಗಿದೆ. ಅಗ್ನಿಶಾಮಕ, ಪೊಲೀಸ್‌, ಗೃಹರಕ್ಷಕ ದಳ ಸಿಬ್ಬಂದಿ ರಕ್ಷಣಾ ಕಾರ‍್ಯದಲ್ಲಿ ಶ್ರಮಿಸುತ್ತಿದ್ದಾರೆ. ಜಿಲ್ಲೆ ಮತ್ತು ಎಲ್ಲ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲ ಇಲಾಖೆ ನೌಕರರು, ಕಚೇರಿ ಮುಖ್ಯಸ್ಥರು ರಜಾ ದಿನಗಳಲ್ಲೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿ ನಿರ್ವಹಿಸಲು ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸೂಚಿಸಲಾಗಿದೆ. ಶನಿವಾರ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ರಕ್ಷಣಾ ಕಾರಾರ‍ಯಚರಣೆ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಕಾಳಜಿ ಕೇಂದ್ರಗಳು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ತರುವೆಯ ಮುರಾರ್ಜಿ ವಸತಿ ಶಾಲೆ, ಹಿರೇಬೈಳಿನ ಗಣಪತಿ ಸಮುದಾಯ ಭವನ, ಸರಕಾರಿ ಪ್ರಾಥಮಿಕ ಶಾಲೆ, ಗೋಣಿಬೀಡಿನಲ್ಲಿ ಮೆಟ್ರಿಕ್‌ ಪೂರ್ವ ವಸತಿ ಶಾಲೆ, ನರಸಿಂಹರಾಜಪುರದಲ್ಲಿ ಬಾಳೆಹೊನ್ನೂರಿನ ಚರ್ಚ್‌ಹಾಲ್‌ ಮತ್ತು ಸರಕಾರಿ ಪ್ರೌಢಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಟ್ಟಿರುವುದರಿಂದ ಸೋಂಪುರ ಸುತ್ತಮುತ್ತಲಿನ ಗ್ರಾಮಸ್ಥರಿಗೆ ರಂಗೇನಹಳ್ಳಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಿಗೆ ಬೆಡ್‌ಶೀಟ್‌, ಆಹಾರ ಪದಾರ್ಥಗಳು, ಮಕ್ಕಳಿಗೆ ಪ್ಯಾಂಪರ್ಸ್‌, ಸ್ವೆಟರ್‌, ಕುಡಿವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

ನೋಡಲ್‌ ಅಧಿಕಾರಿಗಳು : ಪ್ರವಾಹ ಮತ್ತು ಗುಡ್ಡಕುಸಿತದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಮಾಹಿತಿ ಪಡೆದು ಜನರನ್ನು ರಕ್ಷಿಸುವ ಸಲುವಾಗಿ ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳನ್ನು ಪ್ರತಿ ತಾಲೂಕಿಗೆ ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿಗೆ ರಾಜಗೋಪಾಲ್‌ (9480860001), ಮೂಡಿಗೆರೆ ತಾಲೂಕಿಗೆ ಮಲ್ಲಿಕಾರ್ಜುನ್‌ (9480843028), ಶೃಂಗೇರಿ ತಾಲೂಕಿಗೆ ಸೋಮಸುಂದರ್‌ (8277930890), ಕೊಪ್ಪ ತಾಲೂಕಿಗೆ ನಿಂಗರಾಜು (8197370342), ನರಸಿಂಹರಾಜಪುರ ತಾಲೂಕಿಗೆ ಸಂಜಯ್‌ (9448999222), ಕಡೂರು ತಾಲೂಕಿಗೆ ವಿಠಲ್‌ (9480860002) ಮತ್ತು ತರೀಕೆರೆ ತಾಲೂಕಿಗೆ ಕೃಷ್ಣಪ್ಪ (944894337).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ