ಆ್ಯಪ್ನಗರ

ಅಕಾಲಿಕ ಮಳೆ ತಂದ ಆಪತ್ತು

ಕಾಫಿ ನಾಡಿನಲ್ಲಿ ಈ ಬಾರಿ ಪೆಬ್ರವರಿ ತಿಂಗಳ ಆರಂಭದಲ್ಲಿ ಸುರಿದ ದಿಢಿರ್‌ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಹೂ ಅರಳಿದೆ. ಆದರೆ ಅಕಾಲಿಕ ಮಳೆಗೆ ಹೂವಾಗಿರುವ ಕಾಫಿಗೆ ಮತ್ತೆ ಮಳೆಯ ಅವಶ್ಯಕತೆ ಇದ್ದು ಮಳೆ ದೂರವಾಗಿರುವುದರಿಂದ ದಿನ ಕಳೆದಂತೆ ಆತಂಕ ಮನೆ ಮಾಡುತ್ತಿದೆ.

Vijaya Karnataka 25 Feb 2019, 5:00 am
ಆಲ್ದೂರು : ಕಾಫಿ ನಾಡಿನಲ್ಲಿ ಈ ಬಾರಿ ಪೆಬ್ರವರಿ ತಿಂಗಳ ಆರಂಭದಲ್ಲಿ ಸುರಿದ ದಿಢಿರ್‌ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ ಹೂ ಅರಳಿದೆ. ಆದರೆ ಅಕಾಲಿಕ ಮಳೆಗೆ ಹೂವಾಗಿರುವ ಕಾಫಿಗೆ ಮತ್ತೆ ಮಳೆಯ ಅವಶ್ಯಕತೆ ಇದ್ದು ಮಳೆ ದೂರವಾಗಿರುವುದರಿಂದ ದಿನ ಕಳೆದಂತೆ ಆತಂಕ ಮನೆ ಮಾಡುತ್ತಿದೆ.
Vijaya Karnataka Web CKM-24€aldur2


ಕಳೆದ ವರ್ಷ ಏಪ್ರಿಲ್‌ ಮೊದಲ ವಾರದಲ್ಲಿ ಮಳೆ ಬಿದ್ದಿತ್ತು. ಈ ಮಳೆ ಕಾಫಿ ಬೆಳೆಗೆ ಅನುಕೂಲವಾಗಿತ್ತು. ಬೆಳೆಗಾರರು ಈ ವರ್ಷ ಉತ್ತಮ ಇಳುವರಿ ಪಡೆದಿದ್ದರು. ಆದರೆ ಈ ಬಾರಿ ವಾಡಿಕೆಗಿಂತ ಎರಡು ತಿಂಗಳ ಮುಂಚಿತವಾಗಿ ಮಳೆ ಸುರಿದಿದೆ. ಕಾಫಿ ಕೊಯ್ಲು ಇನ್ನೂ ಬಾಕಿ ಇರುವಾಗಲೇ ಕಾಫಿ ಹೂವಾಗಿದ್ದು ಬೆಳೆಗಾರರಿಗೆ ತಲೆ ನೋವಾಗಿ ಪರಿಣಮಿಸಿದೆ . ಫೆ. ತಿಂಗಳಲ್ಲಿ ಸುರಿದ ಮಳೆಗೆ ಒಂದು ಸುತ್ತು ಕಾಫಿ ಹೂ ಅರಳಿ ಕಾಫಿ ಹೂ ಆಗಿದೆ. ಕಾಫಿ ಕಾಯಿಗಟ್ಟಲು ಆರಂಭಿಸಿದ್ದು ಈ ಹಂತದಲ್ಲಿ ಕಾಫಿ ಮಳೆಯ ಅವಶ್ಯಕತೆ ಇದೆ. ಆದರೆ ಮತ್ತೆ ಮಳೆಯಾಗದ ಕಾರಣ ಅರಳಲು ಗಿಡದಲ್ಲಿ ಉಳಿದ ಮೊಗ್ಗುಗಳು ಹಳದಿಯಾಗಿ ನೆಲ ಕಚ್ಚುತ್ತಿವೆ.

ಈ ಬಾರಿ ಬೇಗ ಮಳೆಯಾಗಿರುವುದರಿಂದ ಅಕ್ಟೋಬರ್‌ ತಿಂಗಳಲ್ಲೇ ಕಾಫಿ ಕಟಾವಿಗೆ ಬರುತ್ತದೆ. ಆ ಸಮಯದಲ್ಲಿ ಮಳೆಗಾಲ ಇನ್ನು ಮುಗಿದಿರುವುದಿಲ್ಲ.ಮತ್ತೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ. ಫೆ. ತಿಂಗಳಲ್ಲಿ ಕಂಡು ಕೇಳರಿಯಾದ ಚಳಿಗೆ ಕಾಫಿ ಗಿಡಗಳು ಮಂಕಾಗಿ ಲವಲವಿಕೆಯಿಂದ ಕೂಡಿರಲಿಲ್ಲ .ಅತಿಯಾದ ಚಳಿಯೂ ಕಾಫಿ ತೋಟಗಳಿಗೆ ಹಿತಕರವಲ್ಲ. ಸಮನಾದ ಹವಮಾನವಿದ್ದರೆ ಮಾತ್ರ ಕಾಫಿ ತೋಟಗಳು ಸಮೃದ್ಧಿಯಾಗಿರುತ್ತವೆ.ಕಾಫಿ ಗಿಡಗಳು ಬಿಸಿಲ ಝಳಕ್ಕೆ ಬಾಡಿ ಮಳೆ ಬಿದ್ದು ಮತ್ತೆ ಹಸಿರಾಗಿ ಹೂ ಅರಳಬೇಕು.ಕಾಫಿ ಗಿಡಗಳಿಗೆ ಬಿಸಿಲು ಬಿದ್ದಾಗ ಆ ಶಾಖಕ್ಕೆ ಮಾತ್ರ ಗಿಡಗಳಲ್ಲಿ ಮೊಗ್ಗು ಬರಲು ಪ್ರಾರಂಭಿಸುತ್ತವೆ .ಈ ಬಾರಿ ಅತಿಯಾದ ಚಳಿಯಿಂದ ಕಾಫಿ ಗಿಡಗಳು ಬಾಡಿರಲಿಲ್ಲ.ಸಮೃದ್ಧಿಯಾಗಿ ಮೊಗ್ಗುಗಳು ಬಂದಿರಲಿಲ್ಲ. ಈ ಬಾರಿ ಸುರಿದ ಅಕಾಲಿಕ ಮಳೆಯಿಂದಾಗಿ ಮೊಗ್ಗುಗಳನ್ನು ಬಲವಂತವಾಗಿ ಅರಳಿಸಿದಂತಾಗಿದೆ.ಮತ್ತೆ ಮಳೆ ಬೀಳದ ಕಾರಣ ಅರಳಲು ಬಾಕಿಯಿರುವ ಮೊಗ್ಗುಗಳು ನೆಲ ಕಚ್ಚುತ್ತಿವೆ.ಕಾಫಿ ತೋಟಗಳಿಗೆ ಏಪ್ರಿಲ್‌ನಲ್ಲಿ ಮಳೆಯ ಅವಶ್ಯಕತೆ ಇದೆ.ಈ ಅವಧಿಯಲ್ಲಿ ಬೀಳುವ ಮಳೆಗೆ ಹೂವಿನ ಮಳೆ ಎನ್ನುತ್ತಾರೆ. ಈ ಬಾರಿ ಎರಡು ತಿಂಗಳ ಮುಂಚಿತವಾಗಿ ಮಳೆ ಬಂದಿದೆ. ಈ ಮಳೆ ರೋಬಾಸ್ಟಾ ಕಾಫಿ ತೋಟಗಳಿಗೆ ಅನುಕೂಲವಾಗಿದೆ.ಆದರೆ ಅರೇಬಿಕಾ ಕಾಫಿ ತೋಟಗಳಿಗೆ ಬಾರಿ ಪೆಟ್ಟು ಕೊಟ್ಟಿದೆ.ಕಾಫಿ ಧಾರಣೆಯೂ ಕಡಿಮೆಯಾಗಿದೆ.ಅಕಾಲಿಕ ಮಳೆಯಿಂದ ಮತ್ತೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾರೆಮನೆ ಗ್ರಾಮದ ಕಾಫಿ ಬೆಳೆಗಾರ ಸೋಮನಾಥ್‌ ಸಮಸ್ಯೆಯನ್ನು ತೆರೆದಿಟ್ಟರು.

ಪ್ರಸ್ತುತ ದಿನಗಳಲ್ಲಿ ಕಾಫಿ ಧಾರಣೆ ಕುಸಿತ ,ಹವಮಾನ ವೈಪರಿತ್ಯದಿಂದಾಗಿ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ. ಇದರಿಂದಾಗಿ ಕಾಫಿ ಉದ್ದಿಮೆ ದಿನ ಕಳೆದಂತೆ ಸಂಕಷ್ಟದ ಉದ್ದಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಕಾಫಿ ನಾಡು ಎಂದು ಖ್ಯಾತಿ ಪಡೆದಿರುವ ಮಲೆನಾಡಿನಲ್ಲಿ ಕಾಫಿ ಉದ್ಯಮದಿಂದ ಬೆಳೆಗಾರರು ವಿಮುಖರಾದರೂ ಆಶ್ಚರ್ಯವಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ