ಆ್ಯಪ್ನಗರ

ಎಂಜಿನಿಯರ್‌ಗಳ ಬೆವರಿಳಿಸಿದ ರೈತರು

ಕೆರೆ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಪರಿಶೀಲನೆಗೆ ಬಂದಿದ್ದ ಎಂಜಿನಿಯರ್‌ಗಳನ್ನು ಸ್ಥಳೀಯ ರೈತರು ಹಾಗೂ ರೈತ ಸಂಘದ ಮುಖಂಡರು ಅಡ್ಡಗಟ್ಟಿ ಬೆವರಿಳಿಸಿದ ಘಟನೆ ತಾಲೂಕಿನ ಹಂಪಾಪುರದಲ್ಲಿ ಶನಿವಾರ ನಡೆದಿದೆ.

Vijaya Karnataka 21 Oct 2018, 5:00 am
ಚಿಕ್ಕಮಗಳೂರು : ಕೆರೆ ಕಾಮಗಾರಿಯಲ್ಲಿ ನಡೆದಿರುವ ಅಕ್ರಮದ ಪರಿಶೀಲನೆಗೆ ಬಂದಿದ್ದ ಎಂಜಿನಿಯರ್‌ಗಳನ್ನು ಸ್ಥಳೀಯ ರೈತರು ಹಾಗೂ ರೈತ ಸಂಘದ ಮುಖಂಡರು ಅಡ್ಡಗಟ್ಟಿ ಬೆವರಿಳಿಸಿದ ಘಟನೆ ತಾಲೂಕಿನ ಹಂಪಾಪುರದಲ್ಲಿ ಶನಿವಾರ ನಡೆದಿದೆ.
Vijaya Karnataka Web CKM-20ARAGAP5


ನಗರ ಹೊರವಲಯದ ಹಂಪಾಪುರದ ತೂಬುಗೆರೆಯ ಹೂಳು ತೆಗೆಯುವುದು ಸೇರಿದಂತೆ ವಿವಿಧ ಕೆಲಸಕ್ಕೆ 20 ಲಕ್ಷ ರೂ. ಬಿಡುಗಡೆಯಾಗಿತ್ತು. ಕಾಮಗಾರಿಯನ್ನೇ ಮಾಡದೆ ಬಿಲ್‌ ಸಿದ್ಧಪಡಿಸಿ ಹಣ ಪಾವತಿಸಲಾಗಿದೆ ಎಂದು ರೈತ ಸಂಘದ ಮುಖಂಡರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್‌ಗಳು ಶನಿವಾರ ಬೆಳಗ್ಗೆ ಕಾಮಗಾರಿ ಪರಿಶೀಲನೆ ನಡೆಸಲು ಹಂಪಾಪುರಕ್ಕೆ ಬಂದಿದ್ದರು. ಇಬ್ಬರೂ ಲೋಕಾಯುಕ್ತದವರಲ್ಲ ಎಂಬುದು ತಿಳಿಯುತ್ತಿದ್ದಂತೆ ರೈತ ಸಂಘದ ಮುಖಂಡರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಅಡ್ಡಗಟ್ಟಿದರು.

ಜಿಲ್ಲಾಧಿಕಾರಿ ಸೂಚನೆಯಂತೆ ತಾವು ಪರಿಶೀಲನೆಗೆ ಬಂದಿರುವುದಾಗಿ ಎಂಜಿನಿಯರ್‌ಗಳು ಸಮಜಾಯಿಷಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಜಿಲ್ಲಾಧಿಕಾರಿ ವಿರುದ್ಧವೇ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇವೆ. ಹೀಗಿರುವಾಗಿ ಜಿಲ್ಲಾಧಿಕಾರಿ ಹೇಗೆ ಕಾಮಗಾರಿ ಪರಿಶೀಲನೆ ನಡೆಸಲು ಸೂಚಿಸುತ್ತಾರೆ? ಲೋಕಾಯುಕ್ತರೇ ಇಲ್ಲಿಗೆ ಬಂದು ಕಾಮಗಾರಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾದ್ಯಂತ 244 ಕೆರೆಗಳ ಹೂಳು ತೆಗೆಯಲು ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಯಾವುದೇ ಕೆರೆಯ ಹೂಳು ತೆಗೆದಿಲ್ಲ. ಎಲ್ಲೆಡೆ ಹಣ ಲೂಟಿ ಮಾಡಲಾಗಿದೆ. ಈ ಕೆರೆಯಲ್ಲಿ ನೀರು ಖಾಲಿಯಾದಾಗ ರೈತರೇ ಹೂಳು ತೆಗೆದು ತಮ್ಮ ಜಮೀನಿಗೆ ಹಾಕಿಕೊಂಡಿದ್ದಾರೆ. ಅದರ ಫೋಟೊ ತೆಗೆದು ತಾವೇ ಕಾಮಗಾರಿ ಮಾಡಿರುವುದಾಗಿ ಬಿಲ್‌ ಮಾಡಿಸಿಕೊಳ್ಳಲಾಗಿದೆ ಎಂದು ದೂರಿದರು.

ಕಾಮಗಾರಿಯ ಮೊತ್ತ, ಯಾವ ಕೆಲಸ, ಗುತ್ತಿಗೆದಾರರ ಹೆಸರನ್ನೊಳಗೊಂಡ ನಾಮಫಲಕ ಹಾಕಬೇಕು. ಆದರೆ, ಇಲ್ಲಿ ಯಾವುದೇ ನಾಮಫಲಕ ಹಾಕಿಲ್ಲ. ತಕ್ಷಣ ನಾಮಫಲಕ ಹಾಕಬೇಕು. ಅದರಲ್ಲಿ ಕಾಮಗಾರಿಗಳ ಪಟ್ಟಿಯನ್ನೂ ಹಾಕಬೇಕು. ಆಗ ನಿಮ್ಮನ್ನು ನಾವು ಪ್ರಶ್ನಿಸಲು ಸಾಧ್ಯವಾಗುತ್ತದೆ. ನೀವು ಏನು ತನಿಖೆ ನಡೆಸುತ್ತೀರಿ ಎಂಬುದು ನಮಗೂ ತಿಳಿಯುತ್ತದೆ ಎಂದರು.

ಕಬ್ಬಿಣ, ಸಿಮೆಂಟ್‌ ಎಷ್ಟು ಬಳಕೆ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲು ಕಳಿಸಿದ್ದಾರೆ. ಹೂಳೆತ್ತಿರುವ ವಿಚಾರ ತಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದರು. ನೀವು ಯಾವ ಆಧಾರದಲ್ಲಿ ತನಿಖೆ ಮಾಡುತ್ತೀರಿ? ಲೋಕಾಯುಕ್ತರು ಬರುವವರೆಗೂ ನಿಮ್ಮನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಬೆಳಗ್ಗೆ 11ಕ್ಕೆ ಬಂದಿದ್ದ ಎಂಜಿನಿಯರ್‌ಗಳನ್ನು ಸಂಜೆ 4.30ರವರೆಗೂ ರೈತರು, ಗ್ರಾಮಸ್ಥರು ತಡೆದು ನಿಲ್ಲಿಸಿ ಮಾತಿನ ಚಕಮಕಿ ನಡೆಸುತ್ತಲೇ ಇದ್ದರು. ರೈತ ಮುಖಂಡರಾದ ಮಂಜುನಾಥಗೌಡ, ಎಂ.ಸಿ.ಬಸವರಾಜ್‌, ಕೆ.ಕೆ.ಕೃಷ್ಣೇಗೌಡ, ಚಂದ್ರೇಗೌಡ, ಲಕ್ಷ್ಮಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ