ಆ್ಯಪ್ನಗರ

ಬೆಂಕಿ ಅವಘಡ: ಗೇರುಗುಡ್ಡಕ್ಕೆ ಹಾನಿ

ಪಟ್ಟಣ ಸಮೀಪದ ಗೇರುಮರ ಗುಡ್ಡಕ್ಕೆ ಬೆಂಕಿ ತಗುಲಿ ಸುಮಾರು ನಾಲ್ಕು ಎಕರೆಗೂ ಹೆಚ್ಚು ಭೂಮಿ ಸುಟ್ಟಿರುವ ಘಟನೆ ಸೋಮವಾರ ನಡೆದಿದೆ.

Vijaya Karnataka 12 Feb 2019, 5:00 am
ಕಳಸ : ಪಟ್ಟಣ ಸಮೀಪದ ಗೇರುಮರ ಗುಡ್ಡಕ್ಕೆ ಬೆಂಕಿ ತಗುಲಿ ಸುಮಾರು ನಾಲ್ಕು ಎಕರೆಗೂ ಹೆಚ್ಚು ಭೂಮಿ ಸುಟ್ಟಿರುವ ಘಟನೆ ಸೋಮವಾರ ನಡೆದಿದೆ.
Vijaya Karnataka Web fire burns damages to geregauda
ಬೆಂಕಿ ಅವಘಡ: ಗೇರುಗುಡ್ಡಕ್ಕೆ ಹಾನಿ


ಗೇರು ಮರ ಸರ್ವೆ ನಂ. 325ರಲ್ಲಿ ಖಾಸಗಿ ಜಮೀನಿಗೆ ಮಧ್ಯಾಹ್ನ ಬೆಂಕಿ ತಗುಲಿದೆ. ಸ್ಥಳಿಯರು ಬೆಂಕಿ ಉರಿಯುತ್ತಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಆದರೆ ಸಾಕಷ್ಟು ಪ್ರಮಾಣದ ಹುಲ್ಲು ಹಾಗೂ ಒಣಗಿದ ಗಿಡಗಳು ಇದ್ದುದರಿಂದ ನೋಡನೋಡುತಿದ್ದಂತೆ ಬೆಂಕಿಯು ಇಡೀ ಗುಡ್ಡವನ್ನು ಆವರಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಸ್ಥಳಿಯರೂ ಕೈಜೋಡಿಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರು. ಅಷ್ಟರಲ್ಲಾಗಲೇ ಸುಮಾರು ನಾಲ್ಕು ಎಕರೆಗೂ ಹೆಚ್ಚು ಭೂಮಿ ಹೊತ್ತಿ ಉರಿಯಿತು. ಇದರಲ್ಲಿ ಅಕೇಶಿಯಾ, ಮ್ಯಾಂಜಿಯಾಮ್‌ ಗಿಡಗಳನ್ನು ಹಾಕಲಾಗಿದ್ದು ಸಂಪೂರ್ಣ ಸುಟ್ಟು ಹೋಗಿವೆ.

ಗುಡ್ಡದ ಆಸುಪಾಸಿನಲ್ಲಿ ಸಾಕಷ್ಟು ಮನೆಗಳು ಇದ್ದು, ಗ್ರಾಮಸ್ಥರು ಸಮಯಪ್ರಜ್ಞೆಯಿಂದ ಬೆಂಕಿಯು ಮನೆಗಳ ಕಡೆ ಬರದಂತೆ ನೋಡಿಕೊಂಡರು. ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೋ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ್‌, ಉಪ ತಹಸೀಲ್ದಾರ್‌ ಸುಧಾ, ವಿಎ ಪ್ರದೀಪ್‌ ಭೇಟಿ ನೀಡಿ ಪರಿಶೀಲಿಸಿದರು.

ಅಸಾಯಕರಾಗುವ ಸಿಬ್ಬಂದಿ: ಕಳಸ ಹೋಬಳಿ ಕೇಂದ್ರದಲ್ಲಿ ಸಾಕಷ್ಟು ಅರಣ್ಯ ಪ್ರದೇಶಗಳು, ಬೆಟ್ಟ ಗುಡ್ಡಗಳು ಇವೆ. ಇಲ್ಲಿ ಜನವರಿ ನಂತರದ ತಿಂಗಳುಗಳಲ್ಲಿ ಹುಲ್ಲು ಒಣಗಿರುವುದರಿಂದ ಅರಣ್ಯಕ್ಕೆ ಪದೇಪದೆ ಬೆಂಕಿ ಬೀಳುತ್ತಿರುತ್ತದೆ. ಸುದ್ದಿ ತಿಳಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಆದರೆ ಬೆಂಕಿ ನಂದಿಸಲು ತಮ್ಮ ಬಳಿ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೆ ಅಸಾಯಕರಾಗುತ್ತಾರೆ. ಸೊಪ್ಪುಗಳ ಕಟ್ಟು ಮಾಡಿ ಅದರಿಂದ ಬೆಂಕಿ ನಂದಿಸುವ ಕಾರ್ಯ ಮಾಡುತ್ತಾರೆ. ಇದರಿಂದ ಯಶಸ್ವಿಯಾಗದೆ ಕೊನೆಗೆ ಇಡೀ ಕಾಡೇ ಬೆಂಕಿಗಾಹುತಿಯಾಗುತ್ತಿರುತ್ತದೆ. ಬೆಂಕಿ ಅವಘಡ ಸಂಭವಿಸಿದಾಗ ಮಾತ್ರ ಅಗ್ನಿ ಶ್ಯಾಮಕ ಠಾಣೆಯನ್ನು ಕಳಸದಲ್ಲಿ ತೆರೆಯಬೇಕೆಂಬ ಒತ್ತಾಯ ಪದೇಪದೆ ಕೇಳಿ ಬರುತ್ತದೆ. ನಂತರದ ದಿನಗಳಲ್ಲಿ ಜನಪ್ರತಿನಿಧಿಗಳು ಈ ಬೇಡಿಕೆಯನ್ನು ಮರೆತು ಬಿಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ