ಆ್ಯಪ್ನಗರ

ಚಿಕ್ಕಮಗಳೂರಿನ ಪ್ರವಾಸಿ ತಾಣಗಳಲ್ಲಿ ಜನ ಪ್ರವಾಹ

ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಜನಪ್ರವಾಹವೇ ಹರಿದು ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಶ್ರೇಣಿಗೆ ಕಳೆದ ನಾಲ್ಕೈದು ದಿನಗಳಿಂದ ಸಹಸ್ರಾರು ಜನ ಭೇಟಿ ನೀಡುತ್ತಿದ್ದು, ಎಲ್ಲ ಹೋಂ ಸ್ಟೇ, ರೆಸಾರ್ಟ್‌, ವಸತಿಗೃಹ, ಹೋಟೆಲ್‌ಗಳು ತುಂಬಿ ತುಳುಕುತ್ತಿವೆ.

Vijaya Karnataka 21 Oct 2018, 5:00 am
ಚಿಕ್ಕಮಗಳೂರು : ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಿಗೆ ಜನಪ್ರವಾಹವೇ ಹರಿದು ಬಂದಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಶ್ರೇಣಿಗೆ ಕಳೆದ ನಾಲ್ಕೈದು ದಿನಗಳಿಂದ ಸಹಸ್ರಾರು ಜನ ಭೇಟಿ ನೀಡುತ್ತಿದ್ದು, ಎಲ್ಲ ಹೋಂ ಸ್ಟೇ, ರೆಸಾರ್ಟ್‌, ವಸತಿಗೃಹ, ಹೋಟೆಲ್‌ಗಳು ತುಂಬಿ ತುಳುಕುತ್ತಿವೆ.
Vijaya Karnataka Web CKM-20ARAGAP6


ಹೋಂ ಸ್ಟೇ, ರೆಸಾರ್ಟ್‌, ವಸತಿಗೃಹಗಳನ್ನು ಪ್ರವಾಸಿಗರು ಮೊದಲೇ ಕಾಯ್ದಿರಿಸಿಕೊಂಡಿದ್ದು, ದಿಢೀರ್‌ ಪ್ರವಾಸ ಬಂದವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆಯೇ ಇಲ್ಲವಾಗಿದೆ. ಇತರೆ ದಿನಗಳಲ್ಲಿ 600 ರಿಂದ 800ರೂ.ಗಳಿಗೆ ನೀಡುವ ಕೊಠಡಿಗಳನ್ನು ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ 1500 ರಿಂದ 3000 ರೂ.ಗಳವರೆಗೆ ದರ ವಿಧಿಸಿ ನೀಡುತ್ತಿರುವ ದೂರುಗಳು ಬಂದಿವೆ.

ಬೆಂಗಳೂರು, ಕೇರಳ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದು, ಗಿರಿಶ್ರೇಣಿ ಪ್ರವೇಶಿಸುವ ಕೈಮರ ಚೆಕ್‌ಪೋಸ್ಟ್‌ನಿಂದಲೇ ಟ್ರಾಫಿಕ್‌ ಜಾಮ್‌ ಆಗಿ ವಾಹನಗಳು ಇರುವೆ ಸಾಲಿನಂತೆ ಸಂಚರಿಸುತ್ತಿವೆ. ನಗರದ ಐ.ಜಿ.ರಸ್ತೆ, ರತ್ನಗಿರಿ ರಸ್ತೆಯ ಎಲ್ಲೆಡೆ ಪ್ರವಾಸಿ ವಾಹನಗಳು ಕಂಡುಬರುತ್ತಿವೆ.

ಶಾಲಾ ಮಕ್ಕಳಿಗೆ ದಸರಾ ರಜೆ ಇರುವಾಗಲೇ ಸರಕಾರಿ ನೌಕರರಿಗೆ ಸಾಲು ಸಾಲು ರಜೆ ಸಿಕ್ಕಿರುವುದರಿಂದ ಪ್ರವಾಸಿ ತಾಣಗಳಿಗೆ ಜನ ಮುಗಿಬಿದ್ದಿದ್ದಾರೆ. ಕೊಡಗಿನಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿ ಸಂಭವಿಸಿರುವುದರಿಂದ ಆ ಜಿಲ್ಲೆಗೆ ತೆರಳುವ ಪ್ರವಾಸಿಗರು ಕೂಡ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಅ.17ರಿಂದಲೇ ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿದ್ದು, ಅ.18ರಿಂದ 21ರವರೆಗೆ ಎಲ್ಲ ರೆಸಾರ್ಟ್‌, ವಸತಿಗೃಹಗಳು, ಹೋಂ ಸ್ಟೇಗಳು ಭರ್ತಿಯಾಗಿವೆ. ಸಣ್ಣಪುಟ್ಟ ಹೋಟೆಲ್‌ಗಳಲ್ಲೂ ಜನಜಂಗುಳಿ ಇದ್ದು, ಊಟ, ತಿಂಡಿ, ಕಾಫಿಗೆ ಗಂಟೆಗಟ್ಟಲೆ ಕಾಯುವ ದೃಶ್ಯ ಕಂಡುಬರುತ್ತಿದೆ.

ನೂರಾರು ಪ್ರವಾಸಿಗರು ಪಕ್ಕದ ಬೇಲೂರು, ಹಾಸನದಲ್ಲಿ ವಾಸ್ತವ್ಯ ಮಾಡಿ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿಯಂತಹ ಗಿರಿಶ್ರೇಣಿಗಳಿಗೆ ಪ್ರವಾಸಿಗರು ಮೊದಲ ಆದ್ಯತೆ ನೀಡಿದ್ದರೆ, ದೇವಾಲಯಗಳಿಗೆ ನಂತರದ ಪ್ರಾಶಸ್ತ್ಯ ನೀಡಿದ್ದಾರೆ.

ಕುರಂಜಿಗಾಗಿ ಹುಡುಕಾಟ

12 ವರ್ಷಗಳಿಗೊಮ್ಮೆ ಅರಳುವ ನೀಲಿಕುರಂಜಿ ಹೂವುಗಳು ಈ ಬಾರಿ ಅರಳುತ್ತವೆ. ಈಗಿನ್ನೂ ಅಲ್ಲಲ್ಲಿ ಒಂದೊಂದು ಹೂವುಗಳು ಕಾಣಿಸಿಕೊಳ್ಳುತ್ತಿದ್ದು, ಅಕ್ಟೋಬರ್‌ ಕೊನೆ ಅಥವಾ ನವೆಂಬರ್‌ ಮೊದಲ ವಾರದಲ್ಲಿ ಒಂದಷ್ಟು ಹೂವುಗಳು ಅರಳುವ ಸಾಧ್ಯತೆ ಇದೆ. ಆದರೆ, ಪ್ರವಾಸೋದ್ಯಮ ಇಲಾಖೆಯ ಬ್ಯಾನರ್‌ ಹಾಗೂ ಮುನ್ನಾರ್‌ನಲ್ಲಿ ಅರಳಿದ್ದ ನೀಲಿಕುರಂಜಿಯ ಫೋಟೊಗಳನ್ನು ಬಳಸಿ ನೀಲಿಕುರಂಜಿ ವೈಭವ ಸವಿಯಲು ಬನ್ನಿ ಎಂದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದನ್ನು ನಂಬಿಕೊಂಡು ಸಾವಿರಾರು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಗಿರಿಯ ಯಾವುದೇ ಭಾಗಕ್ಕೆ ಹೋದರೂ ನೀಲಿಕುರಂಜಿ ದರ್ಶನವಿಲ್ಲದೆ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ತಮ್ಮ ಲಾಭಕ್ಕಾಗಿ ಕೆಲವು ಹೋಂ ಸ್ಟೇ, ರೆಸಾರ್ಟ್‌, ಹೋಟೆಲ್‌ನವರು ಕುರಂಜಿ ಹೂವುಗಳ ಹಳೆಯ ಫೋಟೊಗಳನ್ನು ಬಳಸಿ ಪ್ರವಾಸಿಗರ ದಿಕ್ಕು ತಪ್ಪಿಸುತ್ತಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ