ಆ್ಯಪ್ನಗರ

ಕೆರೆಯೇ ಬಸ್‌ ನಿಲ್ದಾಣ; ಗಿಡಗಂಟಿ ಸಾಮ್ರಾಜ್ಯ!

ತುಂಗೆ ತಟದ ಶೃಂಗೇರಿ ತಾಲೂಕಿನಲ್ಲಿದೊಡ್ಡ ಕೆರೆಗಳಿಲ್ಲ. ಆದರೆ, ಲೆಕ್ಕದಲ್ಲಿರುವ 154 ಕೆರೆಗಳು ಸಾವಿರಾರು ಎಕರೆ ಜಮೀನಿಗೆ ಆಸರೆ. ಪಟ್ಟಣ ವಿಸ್ತರಣೆಗೆ ಕೆರೆಯಲ್ಲೇ ಬಸ್‌ ನಿಲ್ದಾಣ ನಿರ್ಮಿಸಿದರೆ, ಉಳುವೆ ಪಕ್ಷಿಧಾಮದ ಕೆರೆಯೂ ತೆರೆಗೆ ಸರಿಯುತ್ತಿದೆ. ಅಳಿದುಳಿದ ಕೆರೆಗಳನ್ನಾದರೂ ಸಂರಕ್ಷಿಸಿ ಅಭಿವೃದ್ಧಿಪಡಿಸಿ ಎಂಬುದು ಜನರ ಕೂಗು.

Vijaya Karnataka 24 Jan 2020, 5:00 am
ಕೆ.ಎಲ್‌.ಗೋಪಾಲಕೃಷ್ಣ, ಶೃಂಗೇರಿ
Vijaya Karnataka Web 23ARAGAP5_35


ಅಪ್ಪಟ ಮಲೆನಾಡಿನ ಶೃಂಗೇರಿ ತಾಲೂಕಿನಲ್ಲಿತುಂಗೆ ಹರಿದರೂ ಕೃಷಿಗೆ ಬಹುತೇಕ ನೆಚ್ಚಿಕೊಂಡಿರುವುದು ಕೆರೆಗಳನ್ನೆ. ತಾಲೂಕಿನಲ್ಲಿಸಾಕಷ್ಟು ಕೆರೆಗಳಿದ್ದರೂ ನಿರ್ವಹಣೆ ಕೊರತೆಯಿಂದ ಅವುಗಳಲ್ಲೆಲ್ಲಗಿಡಗಂಟಿಗಳದ್ದೇ ಸಾಮ್ರಾಜ್ಯ!

ತಾಲೂಕಿನ ಎರಡು ಹೋಬಳಿಗಳು, ಪಟ್ಟಣವೂ ಸೇರಿದಂತೆ ಲೆಕ್ಕದಲ್ಲಿ154 ಕೆರೆಗಳಿವೆ. ಆದರೆ, ಬಹಳಷ್ಟು ಕೆರೆಗಳ ಒಡಲು ಕಿರಿದಾಗುತ್ತ ಬಂದಿದೆ. ಉಳಿದ ಕೆರೆಯಲ್ಲೂಗಿಡಗಂಟಿಗಳು ತುಂಬಿಕೊಂಡಿದ್ದು, ನೀರು ಸದ್ಬಳಕೆ ಆಗುತ್ತಿಲ್ಲ. ಕೆರೆಗಳ ಸಮರ್ಪಕ ನಿರ್ವಹಣೆ ಮರೀಚಿಕೆ.

ಪುಟ್ಟದಾಗಿದ್ದ ಶೃಂಗೇರಿ ಪಟ್ಟಣದ ವಿಸ್ತರಣೆಗೆ ಕೆರೆಯನ್ನೇ ಮುಚ್ಚಿ ಬಸ್‌ ನಿಲ್ದಾಣ ಮತ್ತು ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ವಸತಿಗೃಹಗಳೂ ತಲೆ ಎತ್ತಿವೆ. ಇಲ್ಲೊಂದು ಕೆರೆ ಇತ್ತು ಎಂಬುದನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ, ಈ ಜಾಗ ಕೆರೆದಂಡೆ ಎಂದೇ ಗುರುತಿಸಿಕೊಂಡಿರುವುದರಿಂದ ಇಲ್ಲಿಕೆರೆ ಇದ್ದಿದ್ದಕ್ಕೆ ಹೆಸರೇ ಸಾಕ್ಷಿ ಹೇಳುತ್ತಿದೆ.

ಇದೇ ಸ್ಥಳದಲ್ಲಿರುವ ಆಂಜನೇಯಸ್ವಾಮಿ ದೇಗುಲವನ್ನೂ ಕೆರೆ ಆಂಜನೇಯಸ್ವಾಮಿ ದೇಗುಲ ಎಂದೇ ಕರೆಯಲಾಗುತ್ತದೆ. ವಿಶಾಲವಾಗಿದ್ದು, ಊರಿಗೆ ನೀರಿನ ಸೆಲೆಯಾಗಿದ್ದ ಕೆರೆಯನ್ನು ಮುಚ್ಚಿ ಬಸ್‌ ನಿಲ್ದಾಣ ನಿರ್ಮಿಸಿದ್ದರೂ ಜನರ ಬಾಯಲ್ಲಿಇಂದಿಗೂ ಕೆರೆ ಎಂಬ ಪದ ಚಾಲ್ತಿಯಲ್ಲಿದೆ.

ನೇಪಥ್ಯದತ್ತ ಪಕ್ಷಿಧಾಮ


ರಾಷ್ಟ್ರೀಯ ಹೆದ್ದಾರಿ 169ರ ಉಳುವೆ ಪಕ್ಷಿಧಾಮ ಕೂಡ ಅವಸಾನದ ಅಂಚಿಗೆ ತಲುಪುತ್ತಿದೆ. ಸಾವಿರಾರು ಕೊಕ್ಕರೆ, ನೀರು ಕಾಗೆಗಳಿಗೆ ಸಂತಾನೋತ್ಪತ್ತಿ ತಾಣವಾಗಿದ್ದ ಉಳುವೆ ಕೆರೆ ನೇಪಥ್ಯಕ್ಕೆ ಸರಿಯುತ್ತಿದೆ. ವಾಹನಗಳ ಸಂಚಾರ, ಕೆರೆ ಅಭಿವೃದ್ಧಿಗೆ ಮನಸ್ಸು ಮಾಡದಿರುವುದು, ವಿದ್ಯುತ್‌ ಮಾರ್ಗ ಮತ್ತಿತರ ಕಾರಣದಿಂದ ಕೆರೆಗೆ ಬರುವ ಪಕ್ಷಿಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ.

ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಿಗೆ ಗ್ರಾಮದ ಕಿರಗೋಡು ಕೆರೆ ಈಗ ಪಕ್ಷಿಗಳನ್ನು ಆಕರ್ಷಿಸುತ್ತಿದೆ. ಆದರೆ, ಕೆರೆ ಪುನಶ್ಚೇತನ ಕಾಣದ ಕಾರಣ ಗಿಡಗಂಟಿಗಳು ಮುಚ್ಚಿಕೊಂಡಿವೆ. ಇದೇ ಗಿಡಗಂಟಿಗಳನ್ನು ಆಶ್ರಯಿಸಿಕೊಂಡು ಬಹಳಷ್ಟು ಬೆಳ್ಳಕ್ಕಿಗಳು, ಇತರೆ ಪಕ್ಷಿಗಳು ಸಂತಾನೋತ್ಪತ್ತಿ ಮಾಡಿಕೊಳ್ಳುತ್ತಿವೆ. ಈ ಕೆರೆಯಲ್ಲಿಹೂಳು ತುಂಬಿದ್ದು, ಶುದ್ಧ ನೀರು ಇಲ್ಲವಾಗಿದೆ.

ಒತ್ತುವರಿ ಕಾಟ


ಶೃಂಗೇರಿ-ಆಗುಂಬೆ ನಡುವಿನ ರಾಜ್ಯ ಹೆದ್ದಾರಿಯ ನಲ್ಲೂರು ಕೆರೆ ಸಾಕಷ್ಟು ವಿಶಾಲವಾಗಿದೆ. ನೂರಾರು ವರ್ಷಗಳ ಇತಿಹಾಸವನ್ನೂ ಹೊಂದಿದ್ದು, ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುತ್ತದೆ. ಆದರೆ, ಆಸುಪಾಸು ಒತ್ತುವರಿಯಾಗಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಸಮೀಪದ ಹಳ್ಳಿಗಳಿಗೆ ಈ ಕೆರೆಯಿಂದಲೇ ನೀರು ಪೂರೈಕೆಯಾಗುತ್ತಿದೆ.

ತಾಲೂಕಿನಲ್ಲಿಬಹಳಷ್ಟು ಸಣ್ಣಪುಟ್ಟ ಕೆರೆಗಳಿದ್ದು, ಬಹುತೇಕ ಕೆರೆಗಳಲ್ಲಿಹೂಳು ತುಂಬಿಕೊಂಡಿದೆ. ಕೆರೆಗಳು ದುರಸ್ತಿ ಕಂಡು ಹತ್ತಾರು ವರ್ಷಗಳೇ ಕಳೆದಿವೆ. ಬಹಳಷ್ಟು ಕೆರೆಗಳ ದಂಡೆಗಳು ಒಡೆದುಹೋಗಿದ್ದು, ನೀರು ನಿಲ್ಲುತ್ತಿಲ್ಲ. ಸಣ್ಣಪುಟ್ಟ ಕೆರೆಗಳಲ್ಲೂಗಿಡಗಂಟಿಗಳು ಮುಚ್ಚಿಕೊಂಡಿದ್ದು, ಖಾಸಗಿಯಾಗಿ ರೈತರ ಜಮೀನಿಗೆ ಅಲ್ಪಸ್ವಲ್ಪ ನೀರು ಪೂರೈಸುತ್ತಿವೆ.

2018-19ನೇ ಸಾಲಿನಲ್ಲಿಧರೆಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹೊನ್ನವಳ್ಳಿ ಗದ್ದೆಬೈಲಿನ ಕೆರೆ 6.58 ಲಕ್ಷ ವೆಚ್ಚದಲ್ಲಿ, ಕೂತಗೋಡು ಗ್ರಾ.ಪಂ. ವ್ಯಾಪ್ತಿಯ ಕಲ್ಲಾಳಿ ಕೆರೆ 3.29 ಲಕ್ಷ ರೂ. ವೆಚ್ಚದಲ್ಲಿದುರಸ್ತಿಯಾಗಿದೆ. 2019-20ನೇ ಸಾಲಿನಲ್ಲಿಧರೆಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಚೇರ್‌ಗೋಡು ಕೆರೆಯನ್ನು 2.5 ಲಕ್ಷ ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ. ಹಗಡೂರು ಕೆಳಗಿನ ಕೆರೆ, ಮರ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಹೊಳಂದೂರು ತೋಟದ ಕೆರೆ ಅಭಿವೃದ್ಧಿಗೆ ಅನುದಾನ ಮೀಸಲಿದೆ.

ಅಭಿವೃದ್ಧಿ ಆಗಬೇಕು


ಮಲೆನಾಡು ಏರು ತಗ್ಗು ಪ್ರದೇಶ ಆಗಿರುವುದರಿಂದ ದೊಡ್ಡ ಕೆರೆಗಳ ಸಂಖ್ಯೆ ಕಡಿಮೆ. ಇರುವ ಕೆರೆಗಳನ್ನೇ ಸುಸ್ಥಿತಿಯಲ್ಲಿಡಲು ಸರಕಾರ ಹೆಚ್ಚು ಅನುದಾನ ನೀಡಬೇಕು. ಹೂಳು ತುಂಬಿ ಗಿಡಗಂಟಿಗಳು ಬೆಳೆಯುತ್ತಿದ್ದಂತೆ ಒತ್ತುವರಿ ಶುರುವಾಗುತ್ತದೆ. ಆಯಾ ಗ್ರಾ.ಪಂ. ವ್ಯಾಪ್ತಿಯ ಕೆರೆ ಗುರುತಿಸಿ ಸರಕಾರ ಅಭಿವೃದ್ಧಿಪಡಿಸಿದರೆ ಅಂತರ್ಜಲ ಹೆಚ್ಚುತ್ತದೆ. ಕುಡಿವ ನೀರು, ಜಮೀನಿಗೆ ನೀರಿನ ಕೊರತೆ ಇರುವುದಿಲ್ಲ.

-ಎಂ.ಪಿ.ಚಂದ್ರಹಾಸ, ಮಸಿಗೆ, ಶೃಂಗೇರಿ ತಾಲೂಕು

---

ಅಭಿವೃದ್ಧಿಗೆ ಕ್ರಮ

ಸರಕಾರ ಅನುದಾನ ನೀಡುತ್ತಿರುವುದನ್ನು ಉಪಯೋಗಿಸಿ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಅನುದಾನ ಬಳಸಿಕೊಂಡು 3 ಕೆರೆ ಅಭಿವೃದ್ಧಿಪಡಿಸಲಾಗಿದೆ. ಈ ವರ್ಷವೂ ಕೆರೆ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು.

-ಸೈಫುಲ್ಲಾ, ಜಿ.ಪಂ. ಎಂಜಿನಿಯರ್‌, ಶೃಂಗೇರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ