ಆ್ಯಪ್ನಗರ

ಎಲ್ಲೆಡೆ ಭೂ ಕುಸಿತ, ವಾಹನ, ಜನ ಸಂಚಾರಕ್ಕೆ ಅಡಚಣೆ

ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಗೆ ಮಲೆನಾಡ ಜನ ಆತಂಕಗೊಂಡಿದ್ದು, ಮನೆಯಿಂದ ಹೊರಗೆ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 8 Aug 2019, 5:00 am
ಜಯಪುರ: ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಗೆ ಮಲೆನಾಡ ಜನ ಆತಂಕಗೊಂಡಿದ್ದು, ಮನೆಯಿಂದ ಹೊರಗೆ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web CKM-07JPR1 (KAMALAMMA)


ತಾಲೂಕಿನ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವುಂಟಾಗಿದ್ದು, ಜಾನುವಾರುಗಳಿಗೂ ದಿಕ್ಕು ತೋಚದಂತಾಗಿದೆ. ಪಟ್ಟಣದಿಂದ ಬಾಳೆಹೊನ್ನೂರಿಗೆ ಸಾಗುವ ಹೆದ್ದಾರಿಯು ತಡೆಗೋಡೆಯನ್ನು ಸಮರ್ಪಕವಾಗಿ ನಿರ್ಮಾಣ ಮಾಡದೆ ಹಂತ ಹಂತವಾಗಿ ಕುಸಿಯುತ್ತಿದೆ. ಮಳೆ ಇದೇ ರೀತಿ ಮುಂದುವರಿದರೆ ಚಿಕ್ಕಮಗಳೂರು, ಶೃಂಗೇರಿ ಮಾರ್ಗ ಸಂಪೂರ್ಣ ಸ್ಥಗಿತಗೊಳ್ಳುವ ಸಂಭವ ಹೆಚ್ಚಿದೆ. ಹುಲ್ಲಿನಗದ್ದೆ ಮುಳುಗು ಸೇತುವೆಯ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ. ಸೇತುವೆಗೆ ಕೈಸಂಕ ನಿರ್ಮಿಸುವ ಜನ ಪ್ರತಿನಿಧಿಗಳ ಭರವಸೆ ಹುಸಿಯಾಗಿದ್ದು, ಆ ಭಾಗದ ಜನರು ಭಯ ಭೀತರಾಗಿದ್ದಾರೆ.

ಸಮೀಪದ ಹೇರೂರು, ಬಸರಿಕಟ್ಟೆ ಮಾರ್ಗದ ಹಾಡುಗಾರು ಸಮೀಪದ ಮುಖ್ಯ ರಸ್ತೆಯ ಮೇಲೆ ಬೃಹದಾಕಾರದ ಮರವೊಂದು ಉರುಳಿದ್ದು, ವಿದ್ಯುತ್‌ ಕಂಬವೂ ಧರೆಗೊರಗಿರುವುದರಿಂದ ಸುತ್ತಮುತ್ತಲೂ ವಿದ್ಯುತ್‌ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ನಕ್ಸಲ್‌ ಪೀಡಿತ ಪ್ರದೇಶ ಮೇಗೂರು ಗ್ರಾಮದ ಕಮಲಮ್ಮ ಅವರ ವಾಸದ ಮನೆ ಬಳಿ ಹಳ್ಳ ಉಕ್ಕಿ ಹರಿಯುತ್ತಿದ್ದು, ನೀರು ಮನೆಗೆ ನುಗ್ಗಿ ಅಪಾಯ ಸೃಷ್ಟಿಸಿದೆ. ಪಕ್ಕದ ಬಿಟ್ನಮಕ್ಕಿ ಗಿರಿಜನ ಕಾಲೋನಿಯ ಮಾರ್ಗದ ಕಿರು ಸೇತುವೆ ಕೊಚ್ಚಿ ನೀರು ಪಾಲಾಗಿದೆ. ಪರಿಣಾಮವಾಗಿ ಆಸುಪಾಸಿನಲ್ಲಿರುವ ಹನ್ನೊಂದು ಕುಟುಂಬಗಳು ಸಂಪರ್ಕ ಕಳೆದುಕೊಂಡಿವೆ.

ಅತ್ತಿಕೊಡಿಗೆ ಗ್ರಾ.ಪಂ. ವ್ಯಾಪ್ತಿಯ ಬೆತ್ತದ ಕೊಳಲು ಗ್ರಾಮದ ಚನ್ನೆಕಲ್ಲು ದೇವರಾಜ ಅವರ ವಾಸದ ಮನೆ ಹತ್ತಿರವಿದ್ದ ಗುಡ್ಡದ ಮಣ್ಣು ಜಾರಿದ್ದು, ಅಪಾರ ಹಾನಿಯಾಗಿದೆ. ಭೈರೇದೇವರು ಗ್ರಾಮದ ಎಂ. ರೋಡ್‌ ವಾಸಿ ಜಾನಿ ಡಿಸೋಜಾ ಅವರ ಮನೆ ಸಂಪೂರ್ಣ ಕುಸಿದಿದ್ದು, ಕುಟುಂಬ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.ಉಳಿದಂತೆ ಕೊಗ್ರೆ, ಬಿಳಾಲುಕೊಪ್ಪ, ಬಸರಿಕಟ್ಟೆ, ಸೀಗೋಡು, ಮಡುವಿನಕೆರೆ, ಎತ್ತಿನಟ್ಟಿ, ಅಗಳಗಂಡಿ ಮುಂತಾದ ಕಡೆಗಳಲ್ಲಿ ಮರಗಳು ಉರುಳಿವೆ. ಎಲ್ಲೆಡೆ ವಿದ್ಯುತ್‌ ಮಾರ್ಗದ ಮೇಲೆ ಮರ ಬಿದ್ದಿರುವುದರಿಂದ ಮೆಸ್ಕಾಂ ಸಿಬ್ಬಂದಿಗಳು ಜೀವದ ಹಂಗು ತೊರೆದು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ನಿರಂತರ ಮೂರು ದಿನಗಳ ಕಾಲ ತಾಲೂಕು ಆಡಳಿತ ರಜೆ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ