ಆ್ಯಪ್ನಗರ

ಸಂತ್ರಸ್ತರಿಗೆ ನೆರವು ಕೊಡಿಸಲು ಕ್ರಮ: ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಈ ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸೋಮವಾರ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

Vijaya Karnataka 20 Aug 2019, 5:00 am
ಕಳಸ (ಚಿಕ್ಕಮಗಳೂರು) : ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಈ ಭಾಗದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಸೋಮವಾರ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
Vijaya Karnataka Web CKM-19kls2


ಅತಿ ಹೆಚ್ಚು ಹಾನಿಗೊಳಗಾದ ಭೂದಿಗುಂಡಿ ಪ್ರದೇಶಕ್ಕೆ ಭೇಟಿ ನೀಡಿದಾಗ ಸಂಕಷ್ಟಕ್ಕೊಳಕ್ಕಾದ ಕುಟುಂಬಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.

ಅಲ್ಪ ಸ್ವಲ್ಪ ಜಮೀನು ಮಾಡಿಕೊಂಡು ಮನೆ ಮಾಡಿ ನೆಮ್ಮದಿಯ ಜೀವನ ನಡೆಸುತ್ತಿದ್ದೆವು. ಆದರೆ ಆ ದೇವರಿಗೆ ನಮ್ಮ ನೆಮ್ಮದಿ ಇಷ್ಟವಾಗಿಲ್ವೋ ಏನೊ. ಕ್ಷ ಣ ಮಾತ್ರದಲ್ಲಿ ನಮ್ಮ ಬದುಕೇ ಸರ್ವನಾಶವಾಗಿದೆ. ಎಲ್ಲರೂ ಮನೆ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಇರಲು ಮನೆಯಿಲ್ಲ, ತಿನ್ನಲು ಊಟವಿಲ್ಲ, ಕುಡಿಯಲು ನೀರಿಲ್ಲ, ಕೂಲಿ ಮಾಡೋಕೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಈ ಭಾಗ ಅಂದರೆ ಭೂದಿಗುಂಡಿ, ಚನ್ನಡ್ಲು, ಮಲ್ಲೇಶನಗುಡ್ಡ ವಾಸ ಮಾಡಲು ಯೋಗ್ಯವಾದ ಸ್ಥಳವೇ ಅಲ್ಲ. ನಮಗೆ ವಾಸ ಮಾಡಲು ಬೇರೆ ಭೂಮಿಯನ್ನು ನೀಡುವ ವ್ಯವಸ್ಥೆಯಾಗಬೇಕು. ಭೂಮಿ ನೀಡಿ ಮನೆ ಕಟ್ಟಿಕೊಟ್ಟರೆ ನಾವು ಹೇಗಾದರೂ ಜೀವನ ಸಾಗಿಸುತ್ತೇವೆ ಎಂದು ನಿರಾಶ್ರಿತರು ಕೇಳಿಕೊಂಡರು.

ಮನೆ ಕುಸಿತಗೊಂಡು ಅದರಡಿ ಬಿದ್ದು ಮೃತಪಟ್ಟ ಸಂತೋಷ್‌ ಅವರ ತಾಯಿಯನ್ನು ಸಂತೈಯಿಸಿದ ಕುಮಾರಸ್ವಾಮಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಮೃತರಾದವರ ಕುಟುಂಬಗಳಿಗೆ ಸರಕಾರದಿಂದ ಏನು ಸವಲತ್ತುಗಳು ಸಿಗಬೇಕೋ ಅದೆಲ್ಲ ಸಿಗುವಂತೆ ಸರಕಾರದ ಗಮನಕ್ಕೆ ತರುತ್ತೇನೆ. ನೆರೆಪೀಡಿತ ಎಲ್ಲ ಪ್ರದೇಶಗಳಿಗೂ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಆಗಿರುವ ಅನಾಹುತಗಳ ಬಗ್ಗೆ ಸಂಪೂರ್ಣ ವರದಿಯನ್ನು ನಮ್ಮ ಕಡೆಯಿಂದ ತಯಾರಿಸಿ ಸೂಕ್ತವಾದ ಪರ್ಯಾಯ ವ್ಯವಸ್ಥೆ ಮತ್ತು ಪರಿಹಾರಗಳನ್ನು ನೀಡುವ ಬಗ್ಗೆ ಸರಕಾರದ ಮುಂದಿಡುತ್ತೇನೆ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಶ್ರೀಕ್ಷೇತ್ರ ಹೊರನಾಡಿಗೆ ಭೇಟಿ ನೀಡಿ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಳಸ ತಾಲೂಕಾದ್ಯಂತ ಆದ ಪ್ರವಾಹ, ಅದರಿಂದ ಆಗಿರುವ ಹಾನಿಯ ಬಗ್ಗೆ ಸ್ಥಳದಲ್ಲಿದ್ದ ಮುಖಂಡರು ಮಾಜಿ ಮುಖ್ಯಮಂತ್ರಿಯವರ ಗಮನಸೆಳೆದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಮುಖಂಡರಾದ ಸ.ರಾ.ಮಹೇಶ್‌, ಬೋಜೇಗೌಡ, ಧರ್ಮೇಗೌಡ, ಮಾಜಿ ಶಾಸಕ ಬಿ.ಬಿ.ನಿಂಗಯ್ಯ, ಜೆಡಿಎಸ್‌ ಜಿಲ್ಲಾಧ್ಯಕ್ಷ ಅಜಿತ್‌ ರಂಜನ್‌ ಕುಮಾರ್‌, ತಾ.ಪಂ ಸದಸ್ಯ ಮಹಮ್ಮದ್‌ ರಫೀಕ್‌, ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ, ಮುಖಂಡರಾದ ಮಂಜಪ್ಪಯ್ಯ, ರವಿ ರೈ, ಆಶಾಲತ ಜೈನ್‌, ಪ್ರಸಾದ್‌ ಬಲಿಗೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ