ಆ್ಯಪ್ನಗರ

ಗುಪ್ತಶೆಟ್ಟಿಹಳ್ಳಿಗೆ ಐಜಿಪಿ ಭೇಟಿ: ಗ್ರಾಮಸ್ಥರ ಅಹವಾಲು ಸ್ವೀಕಾರ

ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಪ್ತ ಶೆಟ್ಟಿಹಳ್ಳಿಗೆ ದಕ್ಷಿಣ ವಲಯದ ಐಜಿಪಿ ಅರುಣ್‌ ಚಕ್ರವರ್ತಿ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.

Vijaya Karnataka 8 Jan 2019, 5:00 am
ಆಲ್ದೂರು : ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಪ್ತ ಶೆಟ್ಟಿಹಳ್ಳಿಗೆ ದಕ್ಷಿಣ ವಲಯದ ಐಜಿಪಿ ಅರುಣ್‌ ಚಕ್ರವರ್ತಿ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
Vijaya Karnataka Web CKM-7aldur1a


ಶೃಂಗೇರಿಯಿಂದ ಆಲ್ದೂರಿಗೆ ಆಗಮಿಸಿದ ಐಜಿಪಿ, ಬಳಿಕ ಗುಪ್ತಶೆಟ್ಟಿಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಜತೆ ಮಾತನಾಡಿದರು. ಈ ಸಂದರ್ಭ ಗ್ರಾಮಸ್ಥ ಉಮೇಶ್‌, ತಮ್ಮ ಗ್ರಾಮದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ನಿರಾಶ್ರಿತರಾಗಿದ್ದ ನಮಗೆ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಮಧುಕರ್‌ ಶೆಟ್ಟಿ ಜಾಗವನ್ನು ಕೊಡಿಸಿದರು. ಈ ಜಾಗದಲ್ಲೇ ಸೂರು ಕಟ್ಟಿಕೊಂಡಿದ್ದು ಸರಕಾರ ಇಲ್ಲಿಯವರೆಗೂ ನಮಗೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. 2006ರಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು 64 ದಿನ ಹೋರಾಟ ನಡೆಸಿದ ಫಲವಾಗಿ ಒಂದು ಮಣ್ಣು ರಸ್ತೆಯಾಗಿದೆ. ಕುಡಿಯುವ ನೀರಿಗೆ ಹಳ್ಳದಿಂದ ಒಂದು ಪೈಪ್‌ ಹಾಕಿಕೊಟ್ಟಿದ್ದಾರೆ, ಅಷ್ಟೇ. ನ್ಯಾಯಾಲಯದಿಂದ ತಡೆಯಾಜ್ಞೆ ಬಂದ ಕಾರಣ ರಸ್ತೆ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಗ್ರಾಮಸ್ಥರು ಹಣ ಒಟ್ಟುಗೂಡಿಸಿ ಜೆಸಿಬಿಯಿಂದ ರಸ್ತೆ ಮಾಡಿಕೊಂಡಿದ್ದೇವೆ. ಮಳೆಗಾಲದಲ್ಲಿ ರಸ್ತೆ ಕೊಚ್ಚಿಹೋಗುತ್ತದೆ. ವಾಹನಗಳು ಸಂಚರಿಸಲು ಸಾಧ್ಯವಿಲ್ಲ ಗರ್ಭಿಣಿಯರು, ಕಾಯಿಲೆಯವರನ್ನು ನಾವು ಜೋಲಿಯಲ್ಲಿ ಹೊತ್ತುಕೊಂಡು ಹೋಗಬೇಕು. ಮತ್ತೆ ನಾವೇ ಅದನ್ನು ದುರಸ್ತಿ ಮಾಡಿಕೊಳ್ಳಬೇಕು. 32 ಕುಟುಂಬಗಳಲ್ಲಿ ಸದ್ಯ 17 ಕುಟುಂಬಗಳು ಮಾತ್ರ ಇಲ್ಲಿ ವಾಸವಾಗಿವೆ. ಇಲ್ಲಿ ಮೂಲ ಸೌಕರ್ಯಗಳಿಲ್ಲದ ಕಾರಣ ಬೇರೆ ಕಡೆ ವಾಸವಿದ್ದು, ಇಲ್ಲಿ ಬಂದು ತೋಟದ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಸಮಸ್ಯೆಯನ್ನು ಗಮನಕ್ಕೆ ತಂದರು.

ಗುಪ್ತಶೆಟ್ಟಿಹಳ್ಳಿ ಗ್ರಾಮ ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ, ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರು ಯಾರು? ಸ್ಥಳೀಯ ಶಾಸಕರು ಯಾರು, ಅವರು ಇಲ್ಲಿಗೆ ಭೇಟಿ ನೀಡಿದ್ದಾರೆಯೇ? ಎಂದು ಐಜಿಪಿ ಪ್ರಶ್ನಿಸಿದರು. ಮಾಜಿ ಶಾಸಕ ನಿಂಗಯ್ಯ ಅವರ ಪುತ್ರ ನಿಖಿಲ್‌ ಚಕ್ರವರ್ತಿ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರು ಎಂದು ಗ್ರಾಮಸ್ಥರು ತಿಳಿಸಿದಾಗ ನಿಂಗಯ್ಯ ಅವರ ಮಗನಾ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಗ್ರಾಮಕ್ಕೆ ತುರ್ತಾಗಿ ಕುಡಿಯುವ ನೀರು, ರಸ್ತೆ, ವಿದ್ಯುತ್‌ ಸಂಪರ್ಕ ಆಗಬೇಕಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಮೂಟೆಗಟ್ಟಲೆ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ನಟೇಶ್‌ ಆಸಹಾಯಕತೆ ವ್ಯಕ್ತಪಡಿಸಿದರು. ಗ್ರಾಮದ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಗಮನ ಹರಿಸುತ್ತೇನೆ. ಮತ್ತೊಮ್ಮೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳಿ ಐಜಿಪಿ ಅಲ್ಲಿಂದ ಹೊರಟಾಗ ಗ್ರಾಮಸ್ಥರ ಮುಖದಲ್ಲಿ ಭರವಸೆಯ ಬೆಳಕು ಇಣುಕಿತ್ತು.

ಈ ಸಂದರ್ಭದಲ್ಲಿ ಎಸ್‌ಪಿ ಹರೀಶ್‌ ಪಾಂಡೆ, ಸಿಪಿಐ ಸಲೀಂ ಅಬ್ಬಾಸ್‌, ಪಿಎಸ್‌ಐ ರಾಘವೇಂದ್ರ, ಬೀಟ್‌ ಪೋಲೀಸ್‌ ಅಧಿಕಾರಿ ಸ್ವಾಮಿ, ಗ್ರಾಮಸ್ಥರಾದ ಉಮೇಶ್‌, ಮಂಜುನಾಥ್‌, ಈಶ್ವರ್‌, ಭವಾನಿ, ರಾಜೇಶ್‌ ಕ್ಯಾಜಿಗೆಹಳ್ಳಿ ಮತ್ತಿತರರಿದ್ದರು.

ಸುದ್ದಿ ಕೇಳಿ ಮರಳಿ ಬಂದರು
ಮೃತ ಪೊಲೀಸ್‌ ಅಧಿಕಾರಿ ಮಧುಕರ ಶೆಟ್ಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆಂದು ಚಿಕ್ಕಮಗಳೂರಿಗೆ ಸೋಮವಾರ ತೆರಳುತ್ತಿದ್ದ ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರು, ವಿವಿಧ ಸಂಘಟನೆಯವರು ತಮ್ಮ ಗ್ರಾಮಕ್ಕೆ ಹಿರಿಯ ಪೊಲೀಸ್‌ ಅಧಿಕಾರಿ ಭೇಟಿ ನೀಡುತ್ತಾರೆ ಎಂಬ ಮಾಹಿತಿ ತಿಳಿದು ಒಂದು ಪಿಕ್‌ಅಪ್‌ ವಾಹನದಲ್ಲಿ ಮರಳಿದ್ದರು.

ಗುಂಡಿಯಲ್ಲಿ ಸಿಕ್ಕಿಕೊಂಡ ಜೀಪ್‌
ಗುಪ್ತಶೆಟ್ಟಿಹಳ್ಳಿ ಗ್ರಾಮದ ಗುಂಡಿ ಬಿದ್ದ ರಸ್ತೆಯಲ್ಲಿ ಐಜಿಪಿಯವರ ವಾಹನ ತೆರಳಲು ಸಾಧ್ಯವಾಗದ ಕಾರಣ ಬೆಂಗಾವಲು ವಾಹನದಲ್ಲಿ ಗ್ರಾಮಕ್ಕೆ ತಲುಪಿದರು. ಹಿಂದಿರುಗಿ ಬರುವಾಗ ಮತ್ತೆ ರಸ್ತೆ ಗುಂಡಿಯಲ್ಲಿ ಆಲ್ದೂರು ಪೋಲೀಸ್‌ ಜೀಪ್‌ ಸಿಕ್ಕಿಹಾಕಿಕೊಂಡು ಮುಂದೆ ಸಾಗದಂತಾಯಿತು. ನಂತರ ಗ್ರಾಮಸ್ಥರೇ ತಮ್ಮ ಪಿಕ್‌ಅಪ್‌ ವಾಹನದಲ್ಲಿ ಅವರ ಜೀಪನ್ನು ಎಳೆದು ಮುಂದೆ ಸಾಗಲು ಸಹಾಯ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ