ಆ್ಯಪ್ನಗರ

ಋುಷ್ಯಶೃಂಗ ಸ್ವಾಮಿ ಸನ್ನಿಧಿಯಲ್ಲಿ ಪರ್ಜನ್ಯ ಜಪ

ದೇವರಲ್ಲಿ ಸಂಕಷ್ಟ ನಿವಾರಣೆಗೆ ಮೊರೆ ಹೋದರೆ ಕಷ್ಟವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬರ ನಿವಾರಣೆಗಾಗಿ ಕಿಗ್ಗಾ ಶ್ರೀ ಶಾಂತಸಮೇತ ಋುಷ್ಯಶೃಂಗಸ್ವಾಮಿಗೆ ಪರ್ಜನ್ಯಜಪ ಕೈಗೊಂಡಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Vijaya Karnataka 7 Jun 2019, 5:00 am
ಶೃಂಗೇರಿ : ದೇವರಲ್ಲಿ ಸಂಕಷ್ಟ ನಿವಾರಣೆಗೆ ಮೊರೆ ಹೋದರೆ ಕಷ್ಟವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬರ ನಿವಾರಣೆಗಾಗಿ ಕಿಗ್ಗಾ ಶ್ರೀ ಶಾಂತಸಮೇತ ಋುಷ್ಯಶೃಂಗಸ್ವಾಮಿಗೆ ಪರ್ಜನ್ಯಜಪ ಕೈಗೊಂಡಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.
Vijaya Karnataka Web CKM-6SRI1


ಸರಕಾರದ ಆದೇಶದಂತೆ ಕಿಗ್ಗಾದ ಶ್ರೀ ಋುಷ್ಯಶೃಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ, ರಾಜ್ಯದಲ್ಲಿ ಉತ್ತಮ ಮಳೆಗಾಗಿ ಗುರುವಾರ ಕೈಗೊಂಡ ಪರ್ಜನ್ಯ ಜಪ ಮತ್ತು ಹೋಮದ ನಂತರ ಮಾತನಾಡಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯದ ಎಲ್ಲ ಮುಜಾರಾಯಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಸಲಾಗುತ್ತಿದೆ. ಅದರಂತೆ ಕಿಗ್ಗಾ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ನನ್ನೊಂದಿಗೆ ಮುಜರಾಯಿ ಸಚಿವರು, ಸ್ಥಳಿಯ ಶಾಸಕರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾದರೆ ರೈತರು, ಹಸು ಕರುಗಳು ನೆಮ್ಮದಿಯಿಂದ ಇರಲು ಸಾಧ್ಯ. ಮಳೆಯಾದಾಗ ವಿದ್ಯುತ್‌ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೇ, ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಆಣೆಕಟ್ಟುಗಳಿಗೆ ನೀರು ಹರಿದಾಗ ಜಲ ಸಂಪನ್ಮೂಲದಿಂದ ಉತ್ಪತ್ತಿಯಾಗುವ ವಿದ್ಯುತ್‌ ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ಇದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ಉಳಿತಾಯವಾಗುತ್ತದೆ. ಉತ್ತಮ ಮಳೆಯಾದಾಗ ಅಂತರ್ಜಲವೂ ಹೆಚ್ಚಾಗಿ, ಮುಂಬರುವ ಬೇಸಿಗೆಗೂ ಅನುಕೂಲವಾಗುತ್ತದೆ ಎಂದರು.

ದೇವನೊಬ್ಬ ನಾಮ ಹಲವು. ಕಷ್ಟ ಬಂದಾಗ ದೇವರನ್ನು ಮೊರೆ ಹೋಗುವುದು ವಾಡಿಕೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಪ್ರತಿಫಲ ದೊರಕುತ್ತದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ನಂಬಿಕೆ ಇರುತ್ತದೆ. ರಾಜ್ಯ ದೇಶ, ಮಳೆ, ಬೆಳೆಯಿಂದ ಸಮೃದ್ಧಿಯಾಗಬೇಕು ಎಂದು ಬೇಡಿಕೊಂಡಿದ್ದೇವೆ. ಕಿಗ್ಗಾ ದೇಗುಲದ ಅಭಿವೃದ್ಧಿಗೆ ಈಗಾಗಲೇ 40 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಸ್ಥಳೀಯ ಶಾಸಕರ ಬೇಡಿಕೆಯಂತೆ 50 ಲಕ್ಷ ರೂ.ಅನುದಾನ ನೀಡುವ ಬಗ್ಗೆ ಪ್ರಕ್ರಿಯೆ ಚಾಲನೆಯಲ್ಲಿದೆ. ಪುರಾಣ ಪ್ರಸಿದ್ಧವಾದ ಈ ದೇವಸ್ಥಾನಕ್ಕೆ ಜಲ ಸಂಪನ್ಮೂಲ ಇಲಾಖೆಯಿಂದ ಪ್ರತಿ ವರ್ಷ ಅನುದಾನ ನೀಡಲಾಗುತ್ತದೆ. ದೇವಸ್ಥಾನ ಮಳೆಗಾಲದಲ್ಲಿ ಉಂಟಾಗುತ್ತಿರುವ ಸೋರಿಕೆ ತಡೆಯಲು ದೇಗುಲದ ಮೇಲ್ಭಾಗ ತಾಮ್ರದ ಹೊದಿಕೆ, ಹೊರ ಪ್ರಾಂಗಣದ ಅಭಿವೃದ್ಧಿ, ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುವುದು ಎಂದರು.

ಮೈತ್ರಿ ಸರಕಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬಾರದೆಂಬ ಆದೇಶದ ಹಿನ್ನೆಲೆಯಲ್ಲಿ ನಾನು ಮಾತನಾಡಲು ಬಯಸುವುದಿಲ್ಲ ಎಂದರು. ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್‌ ಮಾತನಾಡಿ, ರಾಜ್ಯದ ಸಾವಿರಾರು ಮುಜರಾಯಿ ದೇಗುಲಗಳಲ್ಲಿ ಇಂದು ಮಳೆಗಾಗಿ ವಿಶೇಷ ಪೂಜೆ ನಡೆದಿದೆ. ಮಳೆಯ ದೇವರೆಂದೇ ಹೆಸರು ಪಡೆದಿರುವ ಇಲ್ಲಿ ಹೋಮ, ಹವನ ನಡೆಸಿರುವುದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂಬ ಆಶಾಭಾವನೆ ಹೊಂದಿರುವುದಾಗಿ ತಿಳಿಸಿದರು.

ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಅಭಯಚಂದ್ರಜೈನ್‌, ಕಾಂಗ್ರೆಸ್‌ ಮುಖಂಡರಾದ ಮೀಗಾ ಸಚಿನ್‌, ಬಾಳೆಮನೆ ನಟರಾಜ್‌, ಲಕ್ಷ್ಮೀಶ, ಭಾಸ್ಕರನಾಯ್ಕ್‌, ಎಂ.ಎಚ್‌.ನಟರಾಜ್‌, ಮುಜರಾಯಿ ಇಲಾಖಾ ಆಯುಕ್ತೆ ಶೈಲಜಾ, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್‌ ಯತೀಶ್ಚಂದ್ರ, ಎಸಿ ಶಿವಕುಮಾರ್‌, ತಹಸೀಲ್ದಾರ್‌ ಪಟ್ಟರಾಜಗೌಡ, ಡಿವೈಎಸ್ಪಿ ಜಹಗೀರದಾರ್‌, ವೃತ್ತ ನಿರೀಕ್ಷ ಕ ಗಂಗಾಧರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಮೂಕಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ