ಆ್ಯಪ್ನಗರ

ವಾಸ್ತುಭೀತಿಗೆ ಗಣೇಶ ದೇಗುಲ ಕಟ್ಟಿದ ಪೊಲೀಸರು!

ವಾಸ್ತು ದೋಷದ ಭೀತಿಯಿಂದ ದೊಡ್ಡ ದೊಡ್ಡ ಕಟ್ಟಡಗಳನ್ನೇ ಒಡೆದು ಹಾಕಿದ, ಚೆಂದವಾಗಿ ಕಟ್ಟಿದ ಮನೆಯನ್ನೇ ವಿರೂಪಗೊಳಿಸಿದ, ಕಟ್ಟಡಗಳ ದಿಕ್ಕುದೆಸೆಯನ್ನೇ ಬದಲಿಸಿದ ನಿದರ್ಶನಗಳು ಸಾಕಷ್ಟಿವೆ.

Vijaya Karnataka 30 Jan 2019, 5:00 am
ಆರಗ ರವಿ
Vijaya Karnataka Web CKM-29aragap6

ಚಿಕ್ಕಮಗಳೂರು :
ವಾಸ್ತು ದೋಷದ ಭೀತಿಯಿಂದ ದೊಡ್ಡ ದೊಡ್ಡ ಕಟ್ಟಡಗಳನ್ನೇ ಒಡೆದು ಹಾಕಿದ, ಚೆಂದವಾಗಿ ಕಟ್ಟಿದ ಮನೆಯನ್ನೇ ವಿರೂಪಗೊಳಿಸಿದ, ಕಟ್ಟಡಗಳ ದಿಕ್ಕುದೆಸೆಯನ್ನೇ ಬದಲಿಸಿದ ನಿದರ್ಶನಗಳು ಸಾಕಷ್ಟಿವೆ.

ಕಳ್ಳ ಖದೀಮರನ್ನೆಲ್ಲ ಬೆಂಡೆತ್ತಿ ಕಾನೂನು ಪಾಠ ಹೇಳುವ ಪೊಲೀಸರೂ ಈಗ ವಾಸ್ತುವಿಗೆ ಹೆದರಿ ವಿಘ್ನವಿನಾಯಕ ನೀನೇ ಕಾಪಾಡು ಎಂದು ಕೈಮುಗಿದಿದ್ದಾರೆ. ಐಪಿಎಸ್‌ ಅಧಿಕಾರಿಗಳೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯಾದಾಗ ತಾವು ಕುಳಿತುಕೊಳ್ಳುವ ಕುರ್ಚಿಯನ್ನು ವಾಸ್ತು ಪ್ರಕಾರ ಹಾಕಿಸಿಕೊಳ್ಳುವಾಗ ಹತ್ತಾರು ವರ್ಷ ಒಂದೆಡೆ ಇದ್ದು ಕೆಲಸ ಮಾಡುವ ಪೊಲೀಸ್‌ ಪೇದೆಗಳಿಗೆ ವಾಸ್ತುಭೀತಿ ಕಾಡಿದ್ದು ಸಹಜ.

ಅಂದಹಾಗೆ ಹೀಗೆ ವಾಸ್ತುದೋಷಕ್ಕೆ ಎದೆ ನಡುಗಿ ಗಣೇಶನಿಗೆ ಗುಡಿ ಕಟ್ಟಿಸಿದ್ದು ಮೂಡಿಗೆರೆ ತಾಲೂಕು ಗೋಣಿಬೀಡು ಪೊಲೀಸರು. ಅದ್ಯಾಕೊ ಗೋಣಿಬೀಡು ಪೊಲೀಸ್‌ ಠಾಣೆ ಲಾಗಾಯ್ತಿನಿಂದಲೂ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇತ್ತು. ಪೊಲೀಸರೂ ಮನುಷ್ಯರೇ ಅಲ್ಲವೇ...? ಯಾಕೆ ಹೀಗಾಗುತ್ತಿದೆ ಎಂದು ಯೋಚಿಸಿದಾಗ ಯಾರೋ ವಾಸ್ತುದೋಷದ ಬೀಜ ಬಿತ್ತಿದ್ದಾರೆ!

ಖಾಸಗಿ ಕಟ್ಟಡವಾಗಿದ್ದರೆ ಒಡೆದು ವಾಸ್ತು ಪ್ರಕಾರ ಹೊಸದಾಗಿಯೇ ಕಟ್ಟಿಸುತ್ತಿದ್ದರೇನೊ!! ಆದರೆ, ಅದು ಸರಕಾರಿ ಕಟ್ಟಡ. ಒಡೆದು ಹಾಕಿದರೆ ಜನ ಪ್ರಶ್ನಿಸುತ್ತಾರೆ. ಕಟ್ಟಡ ಒಡೆಯುವಂತೆಯೂ ಇಲ್ಲ.. ವಾಸ್ತುದೋಷವನ್ನೂ ಪರಿಹಾರ ಮಾಡಿಕೊಳ್ಳಬೇಕು.. ಏನು ಮಾಡುವುದು ಎಂದು ಯೋಚಿಸಿದ ಪೊಲೀಸರಿಗೆ ಹೊಳೆದಿದ್ದು ಸರ್ವ ವಿಘ್ನಗಳ ನಿವಾರಕ ಎಂದೇ ಖ್ಯಾತಿವೆತ್ತಿರುವ ಗಣೇಶನ ಗುಡಿ ನಿರ್ಮಿಸುವುದು.

ಅಂತೂ ಇಂತು ವಾಸ್ತುದೋಷ ಪರಿಹಾರಕ್ಕೆ ಮಾರ್ಗ ಕಂಡುಕೊಂಡ ಪೊಲೀಸರು ಪೊಲೀಸ್‌ ಠಾಣೆ ಆವರಣದಲ್ಲಿ ಜಾಗ ಗುರುತಿಸಿ ಗಣಪತಿ ದೇವಾಲಯ ಕಟ್ಟಿಸಲು ಶುರು ಮಾಡಿದರು. ಠಾಣೆಯ ಆವರಣದಲ್ಲಿ ಎಲ್ಲಿ ದೇಗುಲ ಕಟ್ಟಬೇಕು ಎಂಬ ಪ್ರಶ್ನೆ ಬಂದಾಗ ವಾಸ್ತುದೋಷ ಪರಿಹಾರಕ್ಕೆ ಮಾರ್ಗ ಸೂಚಿಸಿದವರು ಠಾಣೆಯ ಎಡಭಾಗವನ್ನು ಗುರುತಿಸಿಕೊಟ್ಟಿದ್ದರು.

ಕೆಲವೇ ದಿನಗಳಲ್ಲಿ ಚೆಂದದ ಗಣಪತಿ ದೇಗುಲ ಠಾಣೆ ಆವರಣದಲ್ಲಿ ತಲೆ ಎತ್ತಿದ್ದು, ಜ.30ರಂದು ಉದ್ಘಾಟನಾ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಪಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ಪೊಲೀಸರು ಈಗ ದೇಗುಲ ಉದ್ಘಾಟನೆಯ ಆಹ್ವಾನ ಪತ್ರಿಕೆಯನ್ನು ಊರಲ್ಲೆಲ್ಲ ವಿತರಿಸಿದ್ದು, ಬುಧವಾರ ಬೆಳಗ್ಗೆ 8.30 ರಿಂದ 9.30ರವರೆಗೆ ಸಿದ್ದಿ ವಿನಾಯಕ ಮಹಾಗಣಪತಿಯ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಪೊಲೀಸ್‌ ಠಾಣೆಯ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಆಲಯದಲ್ಲಿ ಸರ್ವಧರ್ಮ ಆರಾಧಕ ಸಿದ್ದಿ ವಿನಾಯಕ ಮಹಾಗಣಪತಿ ದೇವರ ವಿಗ್ರಹದ ಅಷ್ಟಬಂಧ ಪ್ರತಿಷ್ಠೆ ಮತ್ತು ಶಿಖರ ಪ್ರತಿಷ್ಠಾಪನೆ ಹಮ್ಮಿಕೊಂಡಿದ್ದು, ತಾವುಗಳು ಆಗಮಿಸಿ ತನುಮನ ಧನ ಸಹಾಯದೊಂದಿಗೆ ಸಹಕರಿಸಿ ದೇವರ ಪ್ರಸಾದವನ್ನು ಸ್ವೀಕರಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಎಂದು ಪೊಲೀಸರು ಆಹ್ವಾನ ಪತ್ರಿಕೆಯಲ್ಲಿ ಮನವಿ ಮಾಡಿದ್ದಾರೆ.

ದೇವಾಲಯದ ಬಾಗಿಲ ಮೇಲೆ ಸರ್ವೇ ಜನಾಃ ಸುಖಿನೋಭವಂತು ಎಂದು ಕೆತ್ತಿಸಿದ್ದು, ಚೆಂದದ ದೇಗುಲ ನಿರ್ಮಾಣಕ್ಕೆ ತಗುಲಿದ ವೆಚ್ಚವೆಷ್ಟು, ಅದು ಸರಕಾರದ ಹಣವೋ, ಪೊಲೀಸರೇ ಹಣ ಸಂಗ್ರಹಿಸಿ ಕಟ್ಟಿದರೋ, ದಾನಿಗಳ ನೆರವು ಪಡೆದರೋ ಎಂಬುದನ್ನು ಗೋಣಿಬೀಡು ಪೊಲೀಸರೇ ಹೇಳಬೇಕಿದೆ. ಈ ಬಗ್ಗೆ ಮಾಹಿತಿ ಪಡೆಯಲು ವಿಜಯ ಕರ್ನಾಟಕ ಪಿಎಸೈಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ