ಆ್ಯಪ್ನಗರ

ಮನೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದರೂ ಹಕ್ಕು ಪತ್ರ ನೀಡಲಿಲ್ಲ ಎಂದು ಆರೋಪಿಸಿ ಪಟ್ಟಣದ ಅಂಬೇಡ್ಕರ್‌ ನಗರದ ನಿವಾಸಿಗಳು ಗುರುವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 18 Jan 2019, 5:00 am
ನರಸಿಂಹರಾಜಪುರ: ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದರೂ ಹಕ್ಕು ಪತ್ರ ನೀಡಲಿಲ್ಲ ಎಂದು ಆರೋಪಿಸಿ ಪಟ್ಟಣದ ಅಂಬೇಡ್ಕರ್‌ ನಗರದ ನಿವಾಸಿಗಳು ಗುರುವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web CKM-17NRP3


ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ ನಂ. 7ರಲ್ಲಿ ಬರುವ ಅಂಬೇಡ್ಕರ್‌ ನಗರದಲ್ಲಿ ಕಳೆದ 100 ವರ್ಷಗಳಿಂದಲೂ ವಾಸವಾಗಿದ್ದೇವೆ. ಆದರೆ, ಯಾವುದೇ ರೀತಿಯ ಹಕ್ಕು ಪತ್ರ ನೀಡಿರುವುದಿಲ್ಲ. ಈ ವಿಷಯದ ಬಗ್ಗೆ ಹಲವು ಬಾರಿ ಮನವಿ ಕೊಟ್ಟಿದ್ದರೂ ಅಧಿಕಾರಿಗಳು ಹಕ್ಕು ಪತ್ರ ಕೊಟ್ಟಿರುವುದಿಲ್ಲ. ಅಲ್ಲದೆ ಅಂಬೇಡ್ಕರ್‌ ನಗರದಲ್ಲಿ ನಾವು ಹಿಂದಿನಿಂದಲೂ ಆಟವಾಡಿಕೊಂಡು ಬಂದಿರುವ ಆಟದ ಮೈದಾನವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಖಾಸಗಿ ವ್ಯಕ್ತಿಗಳಿಗೆ ನೀಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆಲವು ಜನಾಂಗದವರಿಗೆ ಮಾತ್ರ ಇ-ಸ್ವತ್ತುಗಳನ್ನು ಮಾಡಿಕೊಟ್ಟಿರುತ್ತಾರೆ. ದಲಿತರಾದ ನಮ್ಮ ಕುಟುಂಬಗಳಿಗೆ ಇ-ಸ್ವತ್ತು ದಾಖಲೆ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್‌ ನಗರದ ಪಟ್ಟಣ ಪಂಚಾಯಿತಿ ಸದಸ್ಯೆ ನಾಗರತ್ನ, ನಿವಾಸಿಗಳಾದ ಎನ್‌.ಡಿ.ರಾಮಯ್ಯ, ಚಂದ್ರು, ಭಾನುಮತಿ, ಪುಷ್ಪ, ನೇತ್ರಾವತಿ, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ) ಜಿಲ್ಲಾ ಸಂಚಾಲಕ ಅಣ್ಣಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ಎಸ್‌.ಎನ್‌.ಮಹೇಂದ್ರಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಮುಖಂಡರಾದ ಚಂದ್ರಶೇಖರ್‌, ವಸಂತಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

ಡಿಸಿಗೆ ಪ್ರಸ್ತಾವನೆ : ಅಂಬೇಡ್ಕರ್‌ ನಗರದಲ್ಲಿ ಪಟ್ಟಣ ಪಂಚಾಯಿತಿಗೆ ಸೇರಿದ ಗ್ರಾಮ ಠಾಣಾ ಜಾಗದಲ್ಲಿ ನೂರಾರು ವರ್ಷಗಳಿಂದ 68 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ, 94ಸಿಸಿ ಅಡಿ ಗ್ರಾಮ ಠಾಣಾ ಜಾಗವನ್ನು ಮಂಜೂರು ಮಾಡಲು ಕಾನೂನಿನ ತೊಡಕಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಅನುಕೂಲವಾಗುವಂತೆ ಈಗಾಗಲೇ ಶಾಸಕರ ಅಧ್ಯಕ್ಷ ತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ