ಆ್ಯಪ್ನಗರ

ಧರ್ಮಗಳ ಯುದ್ಧದಿಂದ ಅಭಿವೃದ್ಧಿ ಸಾಧ್ಯವಿಲ್ಲ

ನಿರುದ್ಯೋಗ, ಬಡತನ, ರೈತರ ಕಷ್ಟ ಬಗೆಹರಿಸಲು ಸೈನ್ಯ ಕಟ್ಟಿ ಹೋರಾಡಬೇಕಿದೆ ಎಂದು ಸಾಹಿತಿ, ಚಿಂತಕ ರಹಮತ್‌ ತರೀಕೆರೆ ಹೇಳಿದರು.

Vijaya Karnataka 24 Dec 2018, 5:00 am
ಕೊಪ್ಪ : ನಿರುದ್ಯೋಗ, ಬಡತನ, ರೈತರ ಕಷ್ಟ ಬಗೆಹರಿಸಲು ಸೈನ್ಯ ಕಟ್ಟಿ ಹೋರಾಡಬೇಕಿದೆ ಎಂದು ಸಾಹಿತಿ, ಚಿಂತಕ ರಹಮತ್‌ ತರೀಕೆರೆ ಹೇಳಿದರು.
Vijaya Karnataka Web CKM-23KPH1


ಬಾಳಗಡಿಯ ಕನ್ನಡ ಭವನದಲ್ಲಿ ಬಾಸಾಪುರದ ಸುಜನ ಟ್ರಸ್ಟ್‌, ತೆನೆ ಬಳಗ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರದೀಪ ಪುರಸ್ಕಾರ, ಅಭಿನಂದನೆ, ಸ್ಮರಣೆ, ಉಪನ್ಯಾಸ ಮತ್ತು ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅವರು ಪ್ರದೀಪ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಇಂದು ಉತ್ತಮ ರಾಜಕೀಯ ವಾತಾವರಣವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥ್ಥೆ ನಿರ್ಮಾಣವಾಗಿದೆ ಎನ್ನಲು ಆಗುತ್ತಿಲ್ಲ. ಬರವಣಿಗೆ, ಮಾತು ನಿರ್ಭೀತಿಯಿಂದ ಮಾಡಲು ಆಗುತ್ತಿಲ್ಲ. ಧರ್ಮ ಧರ್ಮದ ನಡುವೆ ಯುದ್ಧ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕುವೆಂಪು ಪ್ರತಿಪಾದಿಸಿದ ಮಾನವೀಯ ಮೌಲ್ಯವೆ ನ್ಯಾಯಮೂರ್ತಿ ನಾಗಮೋಹನ ದಾಸರನ್ನು ಕೋಲಾರದಿಂದ ಮಲೆನಾಡಿಗೆ ಕರೆತಂದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಮಾತನಾಡಿ, ಇಂದು ಜಾಗತೀಕರಣ ವ್ಯವಸ್ಥೆಯಲ್ಲಿ ನಾವು ಮೌಲ್ಯ ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಉಳಿಸುವ, ಕಟ್ಟಿಕೊಳ್ಳುವ ಸಮಾಜ ನಿರ್ಮಾಣವಾಗಬೇಕು ಎಂದರು.

ಪ್ರದೀಪ ಅಭಿನಂದನೆ ಪ್ರಶಸ್ತಿ ಸ್ವೀಕರಿಸಿದ ರಂಗಕರ್ಮಿ ರಮೇಶ್‌ ಬೇಗಾರ್‌ ಮಾತನಾಡಿ, ಉನ್ನತ ಗುಣದ ಗುರು ಗಿರೀಶ್‌ ಕಾರ್ನಾಡ್‌, ಕಾಳಿಂಗ ನಾವುಡ, ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಗೌರಿಶಂಕರ್‌ರಂತಹ ಮಾರ್ಗದರ್ಶನದಿಂದ ಸ್ವಲ್ಪ ಮಟ್ಟಿಗೆ ಸಾಧಿಸಲು ಸಾಧ್ಯ. ನನ್ನ ಸಾಧನೆಗೆ ಅವರೆ ಸ್ಫೂರ್ತಿಯಾಗಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಮಲೆನಾಡಿಗರಿಗೆ ತೇಜಸ್ವಿ ನಾಟಕದ ರುಚಿ ಹತ್ತಿಸಬೇಕೆಂಬ ಬಯಕೆಯಿದೆ. ಅಲ್ಲಿ ನೆಲೆಸಿರುವ ಡಾ.ವಿಶ್ವಾಮಿತ್ರ ಹಳೇಕೋಟೆ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಸುಜನ ಟ್ರಸ್ಟ್‌ ನ ಪ್ರಧಾನ ಟ್ರಸ್ಟಿ ಎಂ.ಆರ್‌.ಸುರೇಶ್‌ ಮೇಗೂರು ಮಾತನಾಡಿ, ಇಂದು ಮನಸ್ಸು ಮನಸ್ಸು ನಡುವೆ ಗೋಡೆ ಕಟ್ಟುವ ಕುಹಕಿ ಸಂಖ್ಯೆ ಹೆಚ್ಚಿದೆ. ಯುವಕರ ಕೈಗೆ ಕಂಕಣ ಕಟ್ಟಿ ಬೆಟ್ಟ ಹತ್ತಿಸುವ ಕಾರ್ಯವಾಗುತ್ತಿದೆ. ಅದರಿಂದ ಯುವಜನತೆಯನ್ನು ಸಕಾರಾತ್ಮಕ ಚಿಂತನೆಗೆ ಸೆಳೆಯಲು, ಗೆಳೆಯನ ನೆನಪು ಅಜರಾಮರವಾಗಿಸಲು ಕಾರ್ಯಕ್ರಮ ರೂಪಿಸಲಾಗುವುದು. ಅಪಾರ ಸಾಹಿತ್ಯ ಪ್ರೇಮಿಯಾಗಿದ್ದ ಗೆಳೆಯ ಡಾ.ಪ್ರದೀಪ್‌ ನೆನಪಿನಲ್ಲಿ ಪ್ರತಿವರ್ಷ ಉತ್ತಮ ಸಾಹಿತಿ, ಚಿಂತಕರನ್ನು ಗುರುತಿಸಿ ಪ್ರಶಸ್ತಿ ವಿತರಿಸಲಾಗುವುದು. ಎಂದರು.

ಕಾಫಿ ಬೆಳೆಗಾರ ಎಚ್‌.ಬಿ.ರಾಜಗೋಪಾಲ್‌, ಅಮೆರಿಕಾ ನಿವಾಸಿ ವಿಶ್ವಾಮಿತ್ರ ಹಳೇಕೋಟೆ, ರಾಮನ್‌ ಪಾರ್ಥಸಾರಥಿ, ಬೆಂಗಳೂರಿನ ಉದ್ಯಮಿ ರವಿಗೌಡ, ಡಾ.ಶಂಕರ್‌, ಹಿರೇತೋಟ ಪ್ರಭಾಕರ್‌ ಮತ್ತಿತರರು ಹಾಜರಿದ್ದರು.

ನಾಗರತ್ನ, ಇಮ್ತಿಯಾಜ್‌ ತಂಡ ಆಶಯಗೀತೆ ಹಾಡಿ, ಜಯಚಂದ್ರ ಸ್ವಾಗತಿಸಿ, ಸುಧೀರ್‌ ಕುಮಾರ್‌ ಮುರೊಳ್ಳಿ ನಿರೂಪಿಸಿ, ಶ್ರೀಹರ್ಷ ವಂದಿಸಿದರು.

ನಂತರ ನಟರಾಜ್‌ ಗೋಗಟೆ ನೇತೃತ್ವದ ಭಾವಯಾನ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ