ಆ್ಯಪ್ನಗರ

ರಸ್ತೆತಡೆ ನಡೆಸಿದ 50 ಮಂದಿ ಪೊಲೀಸ್‌ ವಶಕ್ಕೆ

ಭೂಸ್ವಾಧೀನ ಕಾಯಿದೆ ತಿದ್ದುಪಡಿ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದ ಎಐಟಿ ಸರ್ಕಲ್‌ ಬಳಿ ರಸ್ತೆ ತಡೆ ನಡೆಸಿದ ರೈತ ಸಂಘ ಮತ್ತು ಹಸಿರುಸೇನೆಯ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

Vijaya Karnataka 11 Jun 2019, 5:00 am
ಚಿಕ್ಕಮಗಳೂರು : ಭೂಸ್ವಾಧೀನ ಕಾಯಿದೆ ತಿದ್ದುಪಡಿ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದ ಎಐಟಿ ಸರ್ಕಲ್‌ ಬಳಿ ರಸ್ತೆ ತಡೆ ನಡೆಸಿದ ರೈತ ಸಂಘ ಮತ್ತು ಹಸಿರುಸೇನೆಯ 50 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.
Vijaya Karnataka Web CKM-10SHIVUP2


ಕಡೂರು-ಚಿಕ್ಕಮಗಳೂರು ರಸ್ತೆಯ ಎಐಟಿ ಸರ್ಕಲ್‌ ಬಳಿ ಪ್ರತಿಭಟನಾಕಾರರು ರಸ್ತೆತಡೆ ನಡೆಸಿದ್ದರಿಂದ 20 ನಿಮಿಷಕ್ಕೂ ಹೆಚ್ಚು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ತಡೆಗೆ ಪೊಲೀಸರು 10ನಿಮಿಷ ಕಾಲಾವಕಾಶ ನೀಡಿದ್ದರು. ಆದರೆ, ರೈತರು ಇದಕ್ಕೆ ಒಪ್ಪದೆ ರಸ್ತೆ ತಡೆ ಮುಂದುವರಿಸಿದಾಗ ಪೊಲೀಸರು ವಶಕ್ಕೆ ಪಡೆದು ಪೊಲೀಸ್‌ ವಾಹನದಲ್ಲಿ ಕರೆದೊಯ್ದು ಹೋಗಿ ನಂತರ ಬಿಡುಗಡೆ ಮಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್‌ ಮಾತನಾಡಿ, ರಾಜ್ಯ ಸರಕಾರ ತಂದಿರುವ ಕಾನೂನು ತಿದ್ದುಪಡಿ ರೈತರಿಗೆ ಮರಣಶಾಸನವಾಗಿದೆ. ಜಮೀನು ಸ್ವಾಧೀನ ಪ್ರಕ್ರಿಯೆಗೆ ಮುನ್ನ ರೈತರ ಒಪ್ಪಿಗೆ ಪಡೆಯಬೇಕು ಎಂಬ ನಿಯಮ ತೆಗೆದು ಹಾಕಿದೆ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 4 ಪಟ್ಟು ಹೆಚ್ಚು, ನಗರದಲ್ಲಾದರೆ 2 ಪಟ್ಟು ಹೆಚ್ಚು ಹಣ ನೀಡಬೇಕು ಎಂಬ ಷರತ್ತು ತೆಗೆದುಹಾಕಿದ್ದು, ಜಿಲ್ಲಾಧಿಕಾರಿಗಳೇ ಮೌಲ್ಯ ನಿಗದಿ ಮಾಡಲು ಅವಕಾಶ ನೀಡಿ ಬಂಡವಾಳಶಾಹಿಗೆ ಅನುಕೂಲ ಮಾಡಲಾಗಿದ ಎಂದು ಆರೋಪಿಸಿದರು.

ಈ ತಿದ್ದುಪಡಿಯಿಂದ ರಿಯಲ್‌ ಎಸ್ಟೇಟ್‌, ದೊಡ್ಡ ಕಾರ್ಖಾನೆ ನಡೆಸುವವರಿಗೆ ಅನುಕೂಲವಾಗಿದೆ. ಹಿಂದೆ ಯುಪಿಎ ಸರಕಾರ ರೈತ ಒಕ್ಕೂಟಗಳ ಪ್ರತಿಭಟನೆ ಆಧರಿಸಿ ರೈತರಿಗೆ ಅನುಕೂಲವಾಗುವಂತೆ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿತ್ತು. ಆದರೆ, ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರಕಾರ ಇದಕ್ಕೆ ತಿದ್ದುಪಡಿ ತಂದು ರೈತರಿಗೆ ಅನ್ಯಾಯ ಮಾಡಿದೆ ಎಂದರು.

ರೈತರ ಸಾಲಮನ್ನಾ ಮಾಡಬೇಕು. ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗುತ್ತಿವೆ. ಕೆರೆಕಟ್ಟೆಗಳು ಖಾಲಿಯಾಗಿದ್ದು, ಜಾನುವಾರಿಗೆ ಮೇವು, ನೀರಿನ ಕೊರತೆಯಾಗಿದೆ. ರೈತರು ಕೂಲಿ ಹುಡುಕಿಕೊಂಡು ನಗರ ಪ್ರದೇಶಕ್ಕೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಅಲವತ್ತುಕೊಂಡರು.

ಡಾ.ಎಂ.ಎಸ್‌.ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿಗೆ ತರಬೇಕು. ಕೃಷಿಗೆ ಅಗತ್ಯವಾದ ರಾಸಾಯನಿಕ, ಕೀಟನಾಶಕಗಳಿಗೆ ಸಹಾಯಧನ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ 12 ಗಂಟೆಗಳ ಕಾಲ ನಿರಂತರ 3 ಪೇಸ್‌ ವಿದ್ಯುತ್‌ ನೀಡಬೇಕು ಎಂದು ಆಗ್ರಹಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್‌.ದುಗ್ಗಪ್ಪಗೌಡ, ಪ್ರಧಾನ ಕಾರ‍್ಯದರ್ಶಿ ನಾಗರಾಜ್‌, ಕಾರಾರ‍ಯಧ್ಯಕ್ಷ ಬಿ.ಸಿ.ದಯಾಕರ್‌, ಸವಿಂಜಯ ಜೈನ್‌, ಓಂಕಾರಪ್ಪ, ನಿರಂಜನಮೂರ್ತಿ, ಮಂಜೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ