ಆ್ಯಪ್ನಗರ

ಸವಿತಾ ಸಮಾಜ ಅಭಿವೃದ್ಧಿ ನಿಗಮ, ಸ್ವಾಗತಾರ್ಹ ಕ್ರಮ

ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ರಚನೆಗೆ ಮುಂದಾಗಿರುವುದನ್ನು ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಸ್ವಾಗತಿಸಿದೆ. ನಿಗಮಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್‌ ಹೇಳಿದರು.

Vijaya Karnataka 10 Feb 2019, 5:00 am
ಚಿಕ್ಕಮಗಳೂರು : ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ರಚನೆಗೆ ಮುಂದಾಗಿರುವುದನ್ನು ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಸ್ವಾಗತಿಸಿದೆ. ನಿಗಮಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್‌ ಹೇಳಿದರು.
Vijaya Karnataka Web CKM-9RUDRAP1


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೌರಿಕ ವೃತ್ತಿ ಮಾಡುತ್ತಿರುವ ಸವಿತಾ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಹಾಗೂ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಸರಕಾರದಿಂದ ಮಾಡಬೇಕು ಎಂದು ಹಲವು ದಶಕದಿಂದ ಒತ್ತಾಯಿಸುತ್ತಿದ್ದೆವು. ಕಳೆದ ವರ್ಷ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದಿಂದ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನವನ್ನು ನಡೆಸಿ ಸರಕಾರಕ್ಕೆ ಕಳಿಸಿಕೊಟ್ಟಿತ್ತು ಎಂದರು.

ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿಗಮ ಸ್ಥಾಪಿಸಲು ನಿರ್ಧರಿಸಿರುವುದು ಇಡೀ ಸಮೂದಾಯಕ್ಕೆ ಹರ್ಷ ಉಂಟುಮಾಡಿದೆ. ನಮ್ಮ ಸಮಾಜ ಎಲ್ಲ ವರ್ಗದ ಜನರಿಗೂ ಯಾವುದೇ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಆದರೆ, ಸಾಮಾಜಿಕ, ಶೈಕ್ಷ ಣಿಕ ಹಾಗೂ ಆರ್ಥಿಕವಾಗಿ ತೀರ ಶೋಚನಿಯ ಸ್ಥಿತಿಯಲಿದ್ದು, ಗ್ರಾಮಾಂತರ ಭಾಗದಲ್ಲಂತೂ ನಮ್ಮವರ ಸ್ಥಿತಿ ಅಸಹನೀಯವಾಗಿದೆ. ಈ ಕಾರಣಕ್ಕೆ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಹಾಗೂ ಯುವಕರ ಚೈತನ್ಯಕ್ಕೆ ಪೂರಕವಾದ ಯೋಜನೆಗಳನ್ನು ನಿಗಮದಿಂದ ಹಮ್ಮಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಮ್ಮ ಸ್ವಾಭಿಮಾನಕ್ಕೆ ನೋವುಂಟು ಮಾಡುತ್ತಿರುವ ನಿಷೇಧಿತ ಪದವನ್ನು ಬಳಸುವವರಿಗೆ ಕನಿಷ್ಟ ದಂಡ ಹಾಕುವಂತಹ ಕಾನೂನನ್ನು ಜಾರಿಗೊಳಿಸಬೇಕು. ಈ ಬಗ್ಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನ ಸದಸ್ಯರು ಪಕ್ಷ ಬೇಧ ಮರೆತು ಧ್ವನಿ ಎತ್ತಬೇಕು ಎಂದರು.

ಒಕ್ಕೂಟದ ಒತ್ತಾಯವನ್ನು ಮನ್ನಿಸಿ ಪ್ರತಿ ವರ್ಷ ಫೆಬ್ರವರಿಯ ರಥಸಪ್ತಮಿಯ ದಿನ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣೆಗೆ ರಾಜ್ಯ ಸರಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಫೆ. 12ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಅಂದು ಬೆಳಗ್ಗೆ 10 ಗಂಟೆಗೆ ಮಂಗಳವಾದ್ಯ, ವಿವಿಧ ಸಾಂಸ್ಕೃತಿಕ ಕಲಾತಂಡದೊಂದಿಗೆ ತಹಶಿಲ್ದಾರ್‌ ಕಚೇರಿಯಿಂದ ಕುವೆಂಪು ಕಲಾ ಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಇತರರು ಭಾಗವಹಿಸಲಿದ್ದಾರೆ ಎಂದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಮಾಧವ, ಗೌರವಾಧ್ಯಕ್ಷ ವಿ.ಮಂಜುನಾಥ, ಸಂಘಟನಾ ಕಾರ್ಯದರ್ಶಿ ಸಂದೇಶ್‌, ಟೈಟಾನಿಕ್‌ ಮಂಜುನಾಥ್‌ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ