ಆ್ಯಪ್ನಗರ

ಜಡಿಮಳೆಯಲ್ಲಿ ಎಸ್ಪಿ ಅಣ್ಣಾಮಲೈ 304ಕಿ.ಮೀ ಸೈಕ್ಲಿಂಗ್‌!

ನೆಲಮುಗಿಲು ಒಂದಾಗಿ ಧೋ ಎಂದು ಸುರಿವ ಮಳೆ... ರಸ್ತೆ ಯಾವುದು, ನದಿ ಯಾವುದು ಎಂದು ತಿಳಿಯದಷ್ಟು ನೀರು... ಮೈ ಕೊರೆಯುವ ಥಂಡಿ... ಎಲ್ಲೆ ಇಲ್ಲದೆ ಬೀಸುವ ಗಾಳಿಗೆ ಪಟೀರನೆ ಮುರಿದು ಬೀಳುವ ಮರಗಳು..., ಮನೆಗಳ ಮೇಲೆ ಜರುಗುವ ಗುಡ್ಡಗಳು...

Vijaya Karnataka 15 Jul 2018, 10:34 am
ಚಿಕ್ಕಮಗಳೂರು : ನೆಲಮುಗಿಲು ಒಂದಾಗಿ ಧೋ ಎಂದು ಸುರಿವ ಮಳೆ... ರಸ್ತೆ ಯಾವುದು, ನದಿ ಯಾವುದು ಎಂದು ತಿಳಿಯದಷ್ಟು ನೀರು... ಮೈ ಕೊರೆಯುವ ಥಂಡಿ... ಎಲ್ಲೆ ಇಲ್ಲದೆ ಬೀಸುವ ಗಾಳಿಗೆ ಪಟೀರನೆ ಮುರಿದು ಬೀಳುವ ಮರಗಳು..., ಮನೆಗಳ ಮೇಲೆ ಜರುಗುವ ಗುಡ್ಡಗಳು...
Vijaya Karnataka Web sp annamalai 304 km cycling in the jungle
ಜಡಿಮಳೆಯಲ್ಲಿ ಎಸ್ಪಿ ಅಣ್ಣಾಮಲೈ 304ಕಿ.ಮೀ ಸೈಕ್ಲಿಂಗ್‌!


ಹೌದು, ಮಲೆನಾಡು ಮಳೆಯಲ್ಲಿ ತೋಯ್ದು ಹೋಗಿದೆ. ಭೋರ್ಗರೆದು ಸುರಿಯುತ್ತಿರುವ ಮಳೆ, ಮೈ ನಡುಗಿಸುವ ಚಳಿ, ಎದೆ ನಡುಗಿಸುವ ನದಿಗಳ ಭೋರ್ಗರೆತಕ್ಕೆ ಮಲೆನಾಡಿನ ಜನ ಮುದುಡಿ ಮುದ್ದೆಯಾಗಿ ಕುಳಿತಿದ್ದಾರೆ. ಆದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇಂತಹದ್ದೊಂದು ಪ್ರತಿಕೂಲ ವಾತಾವರಣದಲ್ಲಿ ಸೈಕಲ್‌ ಏರಿ ಹೊರಟಿದ್ದಾರೆ. ಅದು ಬರೋಬ್ಬರಿ 304ಕಿ.ಮೀ. ಪಯಣ!


ಫ್ರಾನ್ಸ್‌ನ ಖಾಸಗಿ ಸಂಸ್ಥೆಯೊಂದು ಆಯೋಜಿಸಿರುವ ಈ ಸೈಕಲ್‌ ರ‍್ಯಾಲಿಯಲ್ಲಿ 20 ಮಂದಿ ಪಾಲ್ಗೊಂಡಿದ್ದು, ನಗರದ ಟೌನ್‌ ಕ್ಯಾಂಟೀನ್‌ ಬಳಿ ಶನಿವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಮಳೆ, ಮಲೆನಾಡಿನ ದುರ್ಗಮ ಹಾದಿಯನ್ನು ಲೆಕ್ಕಿಸದೆ ಕ್ರಮಿಸುವ ಪಯಣ ಇದಾಗಿದೆ. ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್‌ ಕ್ಲಬ್‌ ನೇತೃತ್ವದಲ್ಲಿ 3ನೇ ವರ್ಷದಲ್ಲಿ ಈ ರ‍್ಯಾಲಿ ಪ್ರಾಯೋಜಿಸಲಾಗಿದೆ.


ಎಸ್ಪಿ ಕೆ.ಅಣ್ಣಾಮಲೈ, ಸೈಂಟ್‌ ಮೆರಿಸ್‌ ಶಾಲೆ ವಿದ್ಯಾರ್ಥಿ ಜುನೈದ್‌ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಚೆನ್ನೈ, ಮಂಗಳೂರು, ಉಡುಪಿ ಮತ್ತಿತರ ಕಡೆಗಳಿಂದ ಸೈಕ್ಲಿಂಗ್‌ ಪರಿಣತರು ರ‍್ಯಾಲಿಗೆ ಆಗಮಿಸಿದ್ದಾರೆ. ಫ್ರಾನ್ಸ್‌ನ ಖಾಸಗಿ ಸಂಸ್ಥೆ ನೂರು ವರ್ಷಗಳ ಹಿಂದೆಯೇ ದೂರ ಸೈಕಲ್‌ ಪ್ರಯಾಣ ಆಯೋಜಿಸಿದ್ದು, ಅದರ ಶಾಖೆಗಳು ಈಗ ಜಗತ್ತಿನಾದ್ಯಂತ ಅಸ್ತಿತ್ವದಲ್ಲಿವೆ ಎಂದು ತಂಡದ ಡಾ.ಕೌಶಿಕ್‌ ಹೇಳಿದರು.


ಎಬಿಸಿ ವ್ಯವಸ್ಥಾಪಕ ಜಾವೀದ್‌ ಪವೀರ್‍ಜ್‌, ಮಂಗಳೂರಿನ ಸರ್ವೇಶ್‌, ಶ್ಯಾಮ್‌ ಪ್ರಸಾದ್‌, ಅಶ್ವಿನ್‌ ಮತ್ತಿತರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗೆ 6ಕ್ಕೆ ರ‍್ಯಾಲಿ ಆರಂಭವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಎದೆಗುಂದದೆ ರ‍್ಯಾಲಿ ಪಟುಗಳು ಸಾಗಿದರು. ಎಸ್ಪಿ ಅಣ್ಣಾಮಲೈ ರ‍್ಯಾಲಿಯಲ್ಲಿ ಪಾಲ್ಗೊಂಡಿರುವುದು ತಿಳಿಯುತ್ತಿದ್ದಂತೆ ಮಾರ್ಗದಲ್ಲಿ ಹಲವರು ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು.

ಯಾವ ಮಾರ್ಗ, ಎಷ್ಟು ಗಂಟೆ?

ಚಿಕ್ಕಮಗಳೂರು, ಬಾಳೆಹೊನ್ನೂರು, ನರಸಿಂಹರಾಜಪುರ, ಕೊಪ್ಪ, ತೀರ್ಥಹಳ್ಳಿ, ಮಂಡಗದ್ದೆ, ಸಕ್ರೆಬೈಲು ತಲುಪಿ ಮತ್ತೆ ಅದೇ ಮಾರ್ಗದಲ್ಲಿ ರಾತ್ರಿ ರ‍್ಯಾಲಿ ವಾಪಸ್‌ ಆಗಲಿದೆ. ಒಟ್ಟು 20 ಗಂಟೆಯಲ್ಲಿ 304 ಕಿ.ಮೀ. ಕ್ರಮಿಸುವ ಮಾನ್ಸೂನ್‌ ಬ್ರೀವೇ ಸೈಕಲ್‌ ರೇಸ್‌ನಲ್ಲಿ ನಿಗದಿತ ಅವಧಿಯಲ್ಲಿ ಗುರಿ ತಲುಪಿದವರಿಗೆ ಫ್ರಾನ್ಸ್‌ ಕ್ಲಬ್‌ನಿಂದ ಮೆಡಲ್‌, ಪ್ರಮಾಣ ಪತ್ರ ನೀಡಲಾಗುತ್ತದೆ.

ಸೈಕ್ಲಿಂಗ್‌ ಪ್ರಿಯ ಎಸ್ಪಿ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಖಡಕ್‌ ನಿಲುವಿಗೆ ಮಾತ್ರವಲ್ಲದೆ ಮಾನವೀಯ ಮುಖದಿಂದಲೂ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ನಡೆ, ನುಡಿಯಿಂದ ಯುವ ಸಮೂಹದ ಮನಗೆದ್ದಿರುವ ಅಣ್ಣಾಮಲೈ ಪ್ರತಿ ಭಾನುವಾರ ಸೈಕ್ಲಿಂಗ್‌ನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಕನಿಷ್ಠ 25ಕಿ.ಮೀ. ಸೈಕ್ಲಿಂಗ್‌ ಮಾಡುವ ಅವರು ಸೈಕಲ್‌ ರೇಸ್‌ಗಳು ಇದ್ದಾಗ ತಪ್ಪದೆ ಭಾಗವಹಿಸುತ್ತಾರೆ. ಈ ಹಿಂದೆ ಚಿಕ್ಕಮಗಳೂರಿನಿಂದ ಕುಪ್ಪಳಿವರೆಗೆ ಆಯೋಜಿಸಿದ್ದ ಸೈಕಲ್‌ ರ‍್ಯಾಲಿಯಲ್ಲೂ ಅವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ