ಆ್ಯಪ್ನಗರ

ಎಸ್ಪಿ ಅಣ್ಣಾಮಲೈ ವರ್ಗಾವಣೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರನ್ನು ರಾಮನಗರಕ್ಕೆ ತಕ್ಷಣ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ಅಣ್ಣಾಮಲೈ ಅವರಿಂದ ತೆರವಾಗುವ ಸ್ಥಾನಕ್ಕೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡಿಲ್ಲ.

Vijaya Karnataka 18 May 2018, 5:00 am
ಚಿಕ್ಕಮಗಳೂರು : ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರನ್ನು ರಾಮನಗರಕ್ಕೆ ತಕ್ಷಣ ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ. ಅಣ್ಣಾಮಲೈ ಅವರಿಂದ ತೆರವಾಗುವ ಸ್ಥಾನಕ್ಕೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡಿಲ್ಲ.
Vijaya Karnataka Web sp annamalai transfer
ಎಸ್ಪಿ ಅಣ್ಣಾಮಲೈ ವರ್ಗಾವಣೆ


2016 ಆಗಸ್ಟ್‌ 4ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಅಣ್ಣಾಮಲೈ ಒಂದು ವರ್ಷ ಒಂಬತ್ತು ತಿಂಗಳು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಖಡಕ್‌ ಅಧಿಕಾರಿಯೆಂದೇ ಹೆಸರು ಗಳಿಸಿದ್ದ ಅಣ್ಣಾಮಲೈ, ಮಾನವೀಯ ಕೆಲಸಗಳ ಮೂಲಕವೂ ಜನಮಾನಸದಲ್ಲಿ ಅಚ್ಚೊತ್ತಿದ್ದರು.

ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಪ್ರಕರಣದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅಣ್ಣಾಮಲೈ ಜೂಜು ಅಡ್ಡೆಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಲ್ಲಿ ಇಸ್ಪಿಟ್‌ ಕ್ಲಬ್‌ಗಳ ಮೇಲೆ ಸ್ವತಃ ದಾಳಿ ನಡೆಸಿ ನಡುಕು ಹುಟ್ಟಿಸಿದ್ದರು.

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆಗೆ ಕಾರಣವಾದ ಜೂಜು, ಕ್ರಿಕೆಟ್‌ ಬೆಟ್ಟಿಂಗ್‌ ಮಟ್ಟ ಹಾಕಲು ಸಾಕಷ್ಟು ಶ್ರಮಿಸಿದ್ದರು. ಶೃಂಗೇರಿ ಜೆಸಿಬಿಎಂ ಕಾಲೇಜು ವಿದ್ಯಾರ್ಥಿ ಅಭಿಷೇಕ್‌ ಆತ್ಮಹತ್ಯೆ ಪ್ರಕರಣ, ಮುತ್ತೋಟ್‌ ಫೈನಾನ್ಸ್‌ನಲ್ಲಿ ಚಿನ್ನ ಕಳವು ಪ್ರಕರಣ, ಕ್ರಿಕೆಟ್‌ ಬೆಟ್ಟಿಂಗ್‌, ಹನಿಟ್ರ್ಯಾಪ್‌, ಮೂಡಿಗೆರೆಯ ಧನ್ಯಶ್ರೀ, ಶೃಂಗೇರಿಯ ಸ್ವಾತಿ ಆತ್ಮಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಖಡಕ್‌ ನಿಲುವು ಹೊಂದಿದ್ದರು. ಆದರೆ, ಬಹಳಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡಲು ವಿಫಲವಾಗಿದ್ದರು.

ಜಿಲ್ಲೆಯ ರಾಜಕೀಯ ಮೇಲಾಟದಿಂದ ಬೇಸತ್ತಿದ್ದ ಅಣ್ಣಾಮಲೈ ಒಂದು ಹಂತದಲ್ಲಿ ಬೆಂಗಳೂರಿಗೆ ವರ್ಗಾವಣೆ ಬಯಸಿದ್ದರು. ಆದರೆ, ಕೋಮು ಸೂಕ್ಷ್ಮ ಜಿಲ್ಲೆಯಾದ ಕಾರಣ ಸರಕಾರ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡದೆ ಜಿಲ್ಲೆಯಲ್ಲೇ ಉಳಿಸಿತ್ತು. ದತ್ತಜಯಂತಿ ಸಂದರ್ಭ ದತ್ತಭಕ್ತರು ನಿರ್ಬಂಧಿತ ಪ್ರದೇಶದೊಳಗೆ ನುಗ್ಗಿ ಗೋರಿಗೆ ಹಾನಿ ಮಾಡಿದರೂ ನಂತರದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಅಣ್ಣಾಮಲೈ ತೆಗೆದುಕೊಂಡ ಖಡಕ್‌ ನಿರ್ಧಾರಗಳ ಬಗ್ಗೆ ಜನ ಮೆಚ್ಚುಗೆ ಸೂಚಿಸಿದ್ದರು.

ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಬರುತ್ತಿದ್ದವರಿಗೆ ಸಾಂತ್ವನ ಹೇಳುವ ಜತೆಗೆ ತಪ್ಪು ಮಾಡಿದವರಿಗೆ ಅಷ್ಟೇ ರಫ್‌ ಅಂಡ್‌ ಟಫ್‌ ಆಗಿ ಪಾಠವನ್ನೂ ಕಲಿಸುತ್ತಿದ್ದರು. ಎಸ್ಪಿ ಕಚೇರಿ ಇಂತಹ ಹಲವು ಘಟನೆಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅಣ್ಣಾಮಲೈ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಮನಗರಕ್ಕೇ ಏಕೆ?

ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತವಿಲ್ಲದೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅಧಿಕಾರ ಹಿಡಿಯಲು ಸರ್ಕಸ್‌ ನಡೆಸುತ್ತಿದೆ. ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ತನ್ನ ಶಾಸಕರ ಕುದುರೆ ವ್ಯಾಪಾರ ತಪ್ಪಿಸಲು ರೆಸಾರ್ಟ್‌ನಲ್ಲಿ ಶಾಸಕರನ್ನು ಹಿಡಿದಿಟ್ಟಿದೆ. ಎರಡೂ ಪಕ್ಷಗಳ ಚಲನವಲನದ ಮೇಲೆ ನಿಗಾ ವಹಿಸಿ ಚಕ್ರವ್ಯೂಹ ಭೇದಿಸುವ ಉದ್ದೇಶದಿಂದಲೇ ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ವದಂತಿ ಹಬ್ಬಿದೆ. ಅಧಿಕಾರ ಸ್ವೀಕರಿಸಿದ ದಿನದಂದೇ ಅಣ್ಣಾಮಲೈ ಮೇಲೆ ಯಡಿಯೂರಪ್ಪ ಕಣ್ಣು ಹಾಕುವುದಕ್ಕೆ ಬೇರೆ ಯಾವ ಕಾರಣಗಳೂ ಇರಲಿಲ್ಲ. ರಾಮನಗರದ ಬಿಡದಿ ರೆಸಾರ್ಟ್‌ನ ರಹಸ್ಯ ತಿಳಿಯುವ ಜತೆಗೆ ಸಾಧ್ಯವಾದರೆ ಅಲ್ಲಿ ಎರಡೂ ಪಕ್ಷಗಳಿಗೆ ಒಂದಷ್ಟು ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಅಣ್ಣಾಮಲೈ ಅವರನ್ನು ದಾಳವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ