ಆ್ಯಪ್ನಗರ

ಅಕ್ರಮ ಮರಳು ಅಡ್ಡೆಗೆ ಅಧಿಕಾರಿಗಳ ತಂಡ ದಾಳಿ: ಹಿಟಾಚಿ ವಶಕ್ಕೆ

ಹೇಮಾವತಿ ನದಿ ಪಾತ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗುರುವಾರ ದಾಳಿ ನಡೆಸಿದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ ಒಂದು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Vijaya Karnataka 19 May 2019, 5:00 am
ಮೂಡಿಗೆರೆ : ಹೇಮಾವತಿ ನದಿ ಪಾತ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗುರುವಾರ ದಾಳಿ ನಡೆಸಿದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ ಒಂದು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Vijaya Karnataka Web CKM-18MDG-P1


ತಾಲೂಕಿನ ಕಿರುಗುಂದ ಗ್ರಾ.ಪಂ. ವ್ಯಾಪ್ತಿಯ ಉದುಸೆ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಹಿಟಾಚಿ ಮೂಲಕ ಮರಳು ಗಣಿಗಾರಿಕೆ ಮಾಡುತ್ತಿದ್ದ ಬಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅಧಿಕಾರಿಗಳ ತಂಡ ಗುರುವಾರ ಸಂಜೆ ದಾಳಿ ನಡೆಸಿ ಪರಿಶೀಲಿಸಿದರು. ಈ ಸಂದರ್ಭ ದಂಧೆಕೋರರು ಹಿಟಾಚಿ ಯಂತ್ರವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಹಿಟಾಚಿಯನ್ನು ಗೋಣಿಬೀಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮರಳು ಗಣಿಗಾರಿಕೆ ನಡೆಸುತ್ತಿದ್ದ ಹಿಟಾಚಿ ಯಂತ್ರವು ಗೋಣಿಬೀಡಿನ ಸ್ಥಳೀಯ ಪ್ರಭಾವಿಗಳದ್ದು ಎನ್ನಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಸಾರ್ವಜನಿಕರಿಂದ ಅಕ್ರಮ ತಡೆಗೆ ಒತ್ತಾಯ:


ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತೆ ಶುರುವಾಗಿದೆ. ಹಿಂದೆ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರಿಂದ ಆಗಿನ ಎಸ್‌ಪಿ ಅಣ್ಣಮಲೈ ಅವರು, ಅಕ್ರಮ ಪರ್ಮಿಟ್‌ಗಳ ಮೂಲಕ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ದಂಧೆಗೆ ಕಡಿವಾಣ ಹಾಕಿದ್ದರು. ಇದರಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು. ಅಲ್ಲದೇ ಟ್ರ್ಯಾಕ್ಟರ್‌ ಮೂಲಕ ಮೂಡಿಗೆರೆಗೆ ರಾತ್ರಿ ವೇಳೆ ಗೋಣಿಬೀಡು, ಬಣಕಲ್‌ ಮತ್ತು ತತ್ಕೋಳ, ಕುಂದೂರು ಭಾಗದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದು, ಹಲವು ಬಾರಿ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಅಕ್ರಮ ದಂಧೆ ಕಡಿಮೆಯಾಗಿತ್ತು. ಈಗ ತಾಲೂಕಿನಾದ್ಯಂತ ಹೇಮಾವತಿ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಮತ್ತೆ ಗರಿಗೆದರಿದೆ. ದಂಧೆಕೋರರು ಒಂದು ಪರ್ಮಿಟ್‌ನಲ್ಲಿ ಆರೇಳು ಲೋಡ್‌ ಮರಳು ಸಾಗಣೆ ಮಾಡುತ್ತಿದ್ದರೆಂಬ ವ್ಯಾಪಕ ದೂರುಗಳು ರೈತರಿಂದ ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಹಾಗೂ ಪೊಲೀಸರು ಈ ದಂಧೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ