ಆ್ಯಪ್ನಗರ

ಕರಗಡ ಯೋಜನೆ, ಲೋಕಾಯಕ್ತ ತನಿಖೆಗೆ ಆಗ್ರಹ

ಕರಗಡ ಕುಡಿಯುವ ನೀರಿನ ಯೋಜನೆ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

Vijaya Karnataka 18 Jun 2019, 5:00 am
Vijaya Karnataka Web CKM-17RUDRAP2
ಚಿಕ್ಕಮಗಳೂರು: ಕರಗಡ ಕುಡಿಯುವ ನೀರಿನ ಯೋಜನೆ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿ 2009ರಲ್ಲಿಯೇ ಆರಂಭವಾಯಿತು. ಗುತ್ತಿಗೆ ಕರಾರಿನ ಪ್ರಕಾರ 18 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆರಂಭದಲ್ಲಿ 4 ಕೋಟಿ ರೂ. ಇದ್ದ ಅಂದಾಜು ಮೊತ್ತ ಈಗ 20 ಕೋಟಿ ರೂ. ದಾಟಿದೆ. ಹಣ ಹೆಚ್ಚಾಯಿತೆ ವಿನಃ ಕೆಲಸ ಮುಗಿಯಲಿಲ್ಲ. ಇದು ಗುತ್ತಿಗೆದಾರ ಮತ್ತು ಅಧಿಕಾರಿಗಳ ವೈಫಲ್ಯ ಎಂದು ದೂರಿದರು.

ಈ ಹಿಂದೆ ವಿಧಾನಸಭೆಯಲ್ಲಿ ತಾವು ಕೇಳಿದ್ದ ಪ್ರಶ್ನೆಗೆ ಸರಕಾರ ಕಾಮಗಾರಿಯು ಸಿ.ಬಿ.ಎಲ್‌. ವರೆಗೆ ಪೂರ್ಣಗೊಂಡಿದೆ ಎಂಬ ಉತ್ತರ ನೀಡಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರನಿಗೆ ಹೆಚ್ಚುವರಿ ಬಿಲ್‌ ಪಾವತಿಸಬಾರದು ಎಂದು ಲಿಖಿತವಾಗಿ ಇಲಾಖೆಗೆ ಪತ್ರ ನೀಡಿದ್ದೆ. ಆದರೂ ಅಧಿಕಾರಿಗಳು ಗುತ್ತಿಗೆದಾರನಿಗೆ 60 ಲಕ್ಷ ರೂ.ಬಿಲ್‌ ಪಾವತಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪೂರ್ಣಗೊಂಡಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ನಡೆಸುವಂತೆ ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಮಾಡಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯ ಮೂಲಕ ಕಳುಹಿಸಿಕೊಡಲಾಗಿದೆ. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲೇಬೇಕು. ಈ ಹಿನ್ನೆಲೆಯಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕ್ರಿಕೆಟ್‌ ಆಟಗಾರರು ಶತಕ ಬಾರಿಸುತ್ತಾರೊ ಇಲ್ಲವೋ ಗೊತ್ತಿಲ್ಲ. ಆದರೆ ಈ ಕಾಮಗಾರಿಗೆ ಸಮಯವನ್ನು ಮುಂದೂಡುವ ಮೂಲಕ ಶತಕ ಬಾರಿಸಲು ಹೊರಟಿದ್ದಾರೆ. ಈವರೆಗೂ 50 ಬಾರಿ ಕಾಮಗಾರಿಯ ಸಮಯವನ್ನು ವಿಸ್ತರಿಸಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2014ರಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಕಡೂರಿಗೆ ಬಂದಿದ್ದರು. ಆಗ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಅವರ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌, ಸಣ್ಣ ನೀರಾವರಿ ಸಚಿವರಾಗಿದ್ದ ಶಿವರಾಜ್‌ ತಂಗಡಿ, ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್‌, ರೋಷನ್‌ ಬೇಗ್‌ ಮತ್ತು ಇದೀಗ ಕೆ.ಜೆ.ಜಾರ್ಜ್‌ ಅವರಿಂದಲೂ ಅಧಿಕಾರಿಗಳು, ಗುತ್ತಿಗೆದಾರರು ಸುಳ್ಳು ಹೇಳಿಸಿದ್ದಾರೆ. ಇಷ್ಟಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರು.

ಗುತ್ತಿಗೆದಾರನಿಗೆ ತರಾಟೆ :

ಶಾಸಕ ಸಿ.ಟಿ.ರವಿ ಸ್ಥಳ ಪರಿಶೀಲನೆ ಮಾಡುವ ಸಂದರ್ಭ ಗುತ್ತಿಗೆದಾರನನ್ನು ಪ್ರಶ್ನಿಸುತ್ತಿದ್ದಾಗ, ಸ್ಥಳದಲ್ಲಿದ್ದ ಕೆಲ ರೈತರು, ಶಾಸಕರೆ ನೀವು ಎಷ್ಟು ಹೇಳಿದರೂ ಪ್ರಯೋಜನವಿಲ್ಲ. ಆತ ಕಾಮಗಾರಿ ಪೂರ್ಣಗೊಳಿಸುವುದಿಲ್ಲ. ನೀವು ಮತ್ತು ಅಧಿಕಾರಿಗಳು ಸುಮ್ಮನಿರಿ, ಗುತ್ತಿಗೆದಾರನಿಗೆ ನಾವು ಬುದ್ಧಿ ಕಲಿಸುತ್ತೇವೆ. ಆತನನ್ನು ಕೊಂದರೂ ಪರವಾಗಿಲ್ಲ. ನಮ್ಮ ಕುಟುಂಬವಾದರೂ ನೆಮ್ಮದಿಯಿಂದ ಇರುತ್ತವೆ. ಈತನಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಬಿಟ್ಟು ಹೋಗಲಿ, ಬೇರೆಯವರಾದರೂ ಪೂರ್ಣಗೊಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಇಲಾಖೆ ಎಇಇ ಆನಂದ್‌ ಮಾತನಾಡಿ, ಕಾಮಗಾರಿ ನಡೆಯಬೇಕಿದ್ದ ಸ್ಥಳದ ಸುತ್ತಲಿನವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಹಾಗಾಗಿ ಕಳೆದ ಕೆಲವು ದಿನದಿಂದ ಕೆಲಸ ಮಾಡಲು ಆಗಿರಲಿಲ್ಲ. ಈಗ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದೆ. ಇನ್ನು ಸ್ವಲ್ಪ ಕೆಲಸ ಮಾತ್ರ ಬಾಕಿ ಉಳಿದಿದ್ದು, 10 ದಿನಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೆಳವಾಡಿ ರವೀಂದ್ರ, ವಿಜಯಕುಮಾರ್‌, ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಮಾಜಿ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ