ಆ್ಯಪ್ನಗರ

ಕೆರೆ ತುಂಬಿಸುವ ಕೆಲಸ ಮೊದಲಾಗಬೇಕು: ಸಚಿವ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಶುಕ್ರವಾರ ತಾಲೂಕಿನ ಯಗಟಿ ಮತ್ತು ಸಿಂಗಟಗೆರೆ ಹೋಬಳಿಯ ಕೆಲವು ಗ್ರಾಮ ಮತ್ತು ಒಣಗಿದ ಕೆರೆಗಳನ್ನು ವೀಕ್ಷಿಸುವ ಮೂಲಕ ಬರ ಅಧ್ಯಯನ ನಡೆಸಿದರು.

Vijaya Karnataka 26 Jan 2019, 5:00 am
ಕಡೂರು : ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಶುಕ್ರವಾರ ತಾಲೂಕಿನ ಯಗಟಿ ಮತ್ತು ಸಿಂಗಟಗೆರೆ ಹೋಬಳಿಯ ಕೆಲವು ಗ್ರಾಮ ಮತ್ತು ಒಣಗಿದ ಕೆರೆಗಳನ್ನು ವೀಕ್ಷಿಸುವ ಮೂಲಕ ಬರ ಅಧ್ಯಯನ ನಡೆಸಿದರು.
Vijaya Karnataka Web CKM-25KDR1


ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಕೆಎಲ್‌ಕೆ ಪ್ರೌಢಶಾಲೆ ಮೈದಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಆಗಮಿಸಿದ ಸಚಿವರು ನಂತರ ಸಿದ್ದರಾಮಯ್ಯ ಅವರನ್ನು ಅಲ್ಲಿಂದಲೇ ಹಾವೇರಿಗೆ ಬೀಳ್ಕೊಟ್ಟು ರಸ್ತೆ ಮೂಲಕ ಕಡೂರು ಶಾಸಕ ಬೆಳ್ಳಿಪ್ರಕಾಶ್‌ ಜತೆ ತಾಲೂಕಿನ ಬರವೀಕ್ಷ ಣೆಗೆ ಮುಂದಾದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ, ಉಪವಿಭಾಗಾಧಿಕಾರಿ ಬಿ.ಆರ್‌.ರೂಪ ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ, ಲೋಕೋಪಯೋಗಿ, ಸರ್ವೆ ಮುಂತಾದ ಇಲಾಖೆಗಳ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಚಿವರು ಬರ ಅಧ್ಯಯನ ನಡೆಸಿದರು.

ಕಡೂರು ಪ್ರವಾಸಿಮಂದಿರದಿಂದ ಮಧ್ಯಾಹ್ನ 12.15ಕ್ಕೆ ಹೊರಟ ಸಚಿವರ ಪ್ರವಾಸ 9ನೇ ಕ್ರಾಸ್‌ನಲ್ಲಿ ಪಾತೇನಹಳ್ಳಿ ರೈತರೊಬ್ಬರು ಸಚಿವರ ಕಾರನ್ನು ತಡೆದು ತಮ್ಮ ಗ್ರಾಮದಲ್ಲಿ ರಸ್ತೆ ಸೌಕರ್ಯ ಇಲ್ಲ, ನಕಾಶೆಯಂತೆ ರಸ್ತೆ ನಿರ್ಮಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿ ಎಂದು ಕೋರಿದರು.

ನಂತರ ಕೊತ್ತಿಗೆರೆ ಕ್ರಾಸ್‌ ಬಳಿ ಸಚಿವರನ್ನು ಎದುರುಗೊಂಡ ಜನರ ಪರವಾಗಿ ತಾ.ಪಂ ಮಾಜಿ ಅಧ್ಯಕ್ಷೆ ರೇಣುಕಾ ಮತ್ತು ಪತಿ ಕಾಂಗ್ರೆಸ್‌ ಮುಖಂಡ ಉಮೇಶ್‌ ಅವರು ಗ್ರಾಮದ ಗೋಮಾಳದಲ್ಲಿ ವ್ಯಕ್ತಿಯೊಬ್ಬರು ಆರಂಭದಲ್ಲಿ ಗುಡಿಸಲು ನಿರ್ಮಿಸಿಕೊಂಡು ಬಳಿಕ ಕಟ್ಟಡ ಕಟ್ಟಿದ್ದಾರೆ. ಇದರಿಂದ ಊರಿನ ಇತರೆ ಜನರು ತಮಗೂ ಭೂಮಿ ಕೊಡಿ, ಮನೆಕಟ್ಟಿಕೊಳ್ಳುತ್ತೇವೆ ಎನ್ನುತ್ತಿದ್ದು, ಸಮಸ್ಯೆ ಉದ್ಭವವಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ ಸಚಿವರು, ಮುಂದೆ ಹುಳಿಗೆರೆ ಊರ ಮುಂದಿನ ಕೆರೆ ವೀಕ್ಷ ಣೆ ಮಾಡಿದರು. ಈ ಸಂದರ್ಭ ದಾನಿ ಎ.ಸಿ. ಪ್ರಭುರಾಜಶೇಖರ ಅವರ ಪುತ್ರ ಚಂದನ್‌ ಸಚಿವರನ್ನು ಭೇಟಿ ಮಾಡಿ, ಕಳೆದ ಹಲವು ವರ್ಷದಿಂದ ಕೆರೆ ತುಂಬಿಲ್ಲ, ಈ ಭಾಗದ ನೂರಾರು ಎಕರೆ ತೆಂಗಿನ ತೋಟ ಒಣಗಿದೆ. ಜನರು ಬದುಕಿಗಾಗಿ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಸಚಿವರ ಬರ ಅಧ್ಯಯನದ ಪ್ರವಾಸ ತಂಡ ಕೆ.ಬಸವನಹಳ್ಳಿ ಮೂಲಕ ಹಾಯ್ದು ಕೆ.ಬಿದರೆ ಗ್ರಾಮದ ಕೆರೆ ವೀಕ್ಷ ಣೆ ಮಾಡಿತು. ಅಲ್ಲಿ ತಂಡೋಪತಂಡವಾಗಿ ದ್ವಿಚಕ್ತ ವಾಹನಗಳಲ್ಲಿ ಆಗಮಿಸಿದ್ದ ರೈತರು ಸಚಿವರಿಗೆ ಮನವಿ ಮಾಡಿ, ಕೆ. ಬಿದರೆ ಮತ್ತು ಸಿಂಗಟಗೆರೆ ಭಾಗದಲ್ಲಿ ಗೋಶಾಲೆ ತೆರೆಯಲು ಆಗ್ರಹಿಸಿದರು. ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ ಊರ ಮುಂದಿನ ಕೆರೆ ವೀಕ್ಷ ಣೆಗೆ ಬಂದ ಸಚಿವರು, ಮಾರ್ಗದುದ್ದಕ್ಕೂ ಕೆರೆಗಳು ಒಣಗಿರುವುದು ಕಂಡುಬಂದಿದೆ. ಕೆರೆಗಳನ್ನು ತುಂಬಿಸುವ ಕೆಲಸ ಈ ಕ್ಷೇತ್ರದಲ್ಲಿ ಮೊದಲು ಆಗಬೇಕಿದೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಮತ್ತು ಜಿ.ಪಂ ಸದಸ್ಯ ಮಹೇಶ್‌ಒಡೆಯರ್‌ ಅವರ ಬಳಿ ವಿಷಯ ಪ್ರಸ್ತಾಪಿಸಿದರು.

ಕೆರೆ ಏರಿ ಅಭಿವೃದ್ಧಿ ಕುರಿತಂತೆ ಸರಕಾರದಿಂದ ವಿಶೇಷ ಅನುದಾನ ನೀಡಬೇಕು. ಸಿಂಗಟಗೆರೆ ಹೋಬಳಿ ಕೇಂದ್ರದಲ್ಲಿ ಗೋಶಾಲೆ ತೆರೆದು ಜಾನುವಾರುಗಳ ಮೇವಿನ ಸಮಸ್ಯೆ ನೀಗಿಸಬೇಕು ಎಂದು ಮಹೇಶ್‌ ಒಡೆಯರ್‌ ಮನವಿ ಮಾಡಿದರು. ಒಟ್ಟಾರೆ 70 ಕಿ.ಮೀ. ಉದ್ದದ ಬರ ವೀಕ್ಷ ಣೆ ಪ್ರವಾಸ ನಡೆದರೂ ಸ್ಥಳೀಯರಿಗೆ ಸಚಿವರ ಆಗಮನ ಕುರಿತು ಸೂಕ್ತ ಮಾಹಿತಿ ಕೊರತೆ ಎದ್ದು ಕಾಣುತ್ತಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ