ಆ್ಯಪ್ನಗರ

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ದಂಡಿಗೆ ಟ್ರಾಫಿಕ್‌ ಜಾಮ್‌ ಬಿಸಿ

ಜಿಲ್ಲೆಯ ಬಹುತೇಕ ಎಲ್ಲಾ ಪ್ರಾಕೃತಿಕ ತಾಣಗಳ ಬಳಿ ಪ್ರವಾಸಿಗರ ದಂಡೇ ಬೀಡುಬಿಟ್ಟಿತ್ತು. ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಚಾರ್ಮಾಡಿ ಘಾಟಿ, ಕಳಸ, ಹೊರನಾಡು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳು ತುಂಬಿ ತುಳುಕಿದವು.

Vijaya Karnataka 1 Jan 2020, 7:13 pm
ಚಿಕ್ಕಮಗಳೂರು: ಬೆಂಗಳೂರಿನ ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತು ಮಲೆನಾಡಿನ ಪ್ರಶಾಂತ ವಾತಾವರಣದಲ್ಲಿ ಹೊಸ ವರ್ಷದ ಮೋಜುಮಸ್ತಿ ಮಾಡಲು ಬಂದಿದ್ದ ಪ್ರವಾಸಿಗರಿಗೆ ಇಲ್ಲಿಯೂ ಟ್ರಾಫಿಕ್‌ ಜಾಮ್‌ ಬಿಸಿ ತಟ್ಟಿದೆ.
Vijaya Karnataka Web Chikkamagaluru


ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಜಿಲ್ಲೆಯಾದ್ಯಂತ ಇರುವ ಹೋಂ ಸ್ಟೇ, ರೆಸಾರ್ಟ್‌, ಸ್ನೇಹಿತರ ಮನೆಗಳಲ್ಲಿ ಹೊಸ ವರ್ಷಾಚರಣೆ ಮಾಡಿ ಬುಧವಾರ ಬೆಳಗ್ಗೆಯಿಂದಲೇ ಪ್ರವಾಸಿ ತಾಣಗಳಿಗೆ ಬಂದಿದ್ದರು.

ಅದರಲ್ಲೂ ಪ್ರವಾಸಿಗರನ್ನು ಕೈಬೀಸಿ ಕರೆಯುವ ರಾಜ್ಯದ ಅತ್ಯಂತ ಎತ್ತರದ ಪರ್ವತ ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಶ್ರೇಣಿಗೆ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಬಂದಿದ್ದು, ಕಡಿದಾದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಗಂಟೆಗಟ್ಟಲೆ ಪರದಾಡುವಂತಾಯಿತು.

ಮುಳ್ಳಯ್ಯನಗಿರಿಯಿಂದ ಸೀತಾಳಯ್ಯನಗಿರಿಯವರೆಗೂ ವಾಹನಗಳು ನಾಲ್ಕೈದು ಗಂಟೆಗಳ ಕಾಲ ಸಾಲುಗಟ್ಟಿ ನಿಂತಿದ್ದವು. ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಇಲ್ಲದ ಕಾರಣ ಪ್ರವಾಸಿಗರು ತೀವ್ರ ಕಿರಿಕಿರಿ ಎದುರಿಸಬೇಕಾಯಿತು. ಗಿರಿಯೆಡೆಗೆ ತೆರಳುವ ಮತ್ತು ವಾಪಸ್‌ ಬರುವ ವಾಹನಗಳಿಂದಾಗಿ ಬಹಳಷ್ಟು ಕಡೆ ವಾಹನ ದಟ್ಟಣೆ ಕಂಡುಬಂತು.

ಜಿಲ್ಲೆಯ ಬಹುತೇಕ ಎಲ್ಲಾ ಪ್ರಾಕೃತಿಕ ತಾಣಗಳ ಬಳಿ ಪ್ರವಾಸಿಗರ ದಂಡೇ ಬೀಡುಬಿಟ್ಟಿತ್ತು. ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ, ಚಾರ್ಮಾಡಿ ಘಾಟಿ, ಕಳಸ, ಹೊರನಾಡು ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳು ತುಂಬಿ ತುಳುಕಿದವು. ಜಿಲ್ಲೆಯಲ್ಲಿರುವ ಬಹುತೇಕ ಹೋಂ ಸ್ಟೇ, ರೆಸಾರ್ಟ್‌ಗಳು ಪ್ರವಾಸಿಗರಿಂದ ಭರ್ತಿಯಾಗಿದ್ದವು.

ರಾಜ್ಯ, ಹೊರರಾಜ್ಯದಿಂದಲೂ ಹೊಸ ವರ್ಷದ ಸಂಭ್ರಮ ಅನುಭವಿಸಲು ಬಂದವರು ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಬಿದ್ದು ಪ್ರವಾಸವನ್ನು ಪ್ರಯಾಸ ಮಾಡಿಕೊಂಡರು. ಟ್ರಾಫಿಕ್‌ ಜಾಮ್‌ ತಪ್ಪಿಸಲು ಸಂಚಾರ ಪೊಲೀಸರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ