ಆ್ಯಪ್ನಗರ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ

ಅವಿಭಕ್ತ ಕುಟುಂಬಗಳ ವಿಘಟನೆಯಿಂದ ಮನೆತನವನ್ನು ತಮ್ಮ ವಿವೇಕ, ಪಾರಂಪರಿಕ ಜ್ಞಾನದಿಂದ ಮುನ್ನಡೆಸಿದ ಹಿರಿಯರನ್ನು ಕಡೆಗಣಿಸಲಾಗುತ್ತಿದ್ದು, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅಭಿಪ್ರಾಯಪಟ್ಟರು.

ವಿಕ ಸುದ್ದಿಲೋಕ 2 Oct 2016, 8:02 am
ಚಿತ್ರದುರ್ಗ : ಅವಿಭಕ್ತ ಕುಟುಂಬಗಳ ವಿಘಟನೆಯಿಂದ ಮನೆತನವನ್ನು ತಮ್ಮ ವಿವೇಕ, ಪಾರಂಪರಿಕ ಜ್ಞಾನದಿಂದ ಮುನ್ನಡೆಸಿದ ಹಿರಿಯರನ್ನು ಕಡೆಗಣಿಸಲಾಗುತ್ತಿದ್ದು, ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅಭಿಪ್ರಾಯಪಟ್ಟರು.
Vijaya Karnataka Web
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ


ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ನಾಗರಿಕತೆ ಅವಿಭಕ್ತ ಕುಟುಂಬ ಪದ್ಧತಿಗೆ ತಿಲಾಂಜಲಿ ನೀಡಿದೆ. ಅವಿಭಕ್ತ ಕುಟುಂಬಗಳು ಒಬ್ಬರನ್ನೊಬ್ಬರು ತಿದ್ದುವ, ಮಾರ್ಗದರ್ಶನ ನೀಡುವ ಎಲ್ಲರನ್ನೂ ಸಮಭಾವನೆಯಿಂದ ಮುನ್ನಡೆಸಿಕೊಂಡು ಹೋಗುವುದಕ್ಕೆ ಮಾದರಿಯಾಗಿದ್ದವು. ವೃದ್ಧರು, ಹಿರಿಯರನ್ನು ಮನೆಯ ಆಧಾರ ಸ್ತಂಭಗಳಂತೆ ಗೌರವಿಸುತ್ತಿದ್ದರು. ಈಗ ಹಿರಿಯರು, ವೃದ್ಧರು ಅನುಪಯುಕ್ತರು ಎನ್ನುವ ಮನೋಭಾವ ಇದೆ ಎಂದರು.

ಹಿರಿಯರಿಗೆ ವಯಸ್ಸಾಗಿ, ದೇಹ ದಣಿದಿದ್ದರೂ ಅವರ ಆಲೋಚನೆ, ದೃಷ್ಟಿಕೋನ, ಅನುಭವಕ್ಕೆ ಮುಪ್ಪು ಬಂದಿರುವುದಿಲ್ಲ. ಹಾಗಾಗಿ, ಹಿರಿಯನ್ನು ಕಡೆಗಣಿಸುವುದು ಎಂದರೆ ಅವರು ಸುದೀರ್ಘ ಕಾಲದಿಂದ ಗಳಿಸಿದ ಅನುಭವ ಸಂಪತ್ತನ್ನು ಕಡೆಗಣಿಸಿದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಾಗರಿಕತೆ, ವಿದ್ಯಾವಂತರ ಸಂಖ್ಯೆ ಹೆಚ್ಚಿರುವ ಈ ದಿನಗಳಲ್ಲಿ ಹಿರಿಯರನ್ನು ಕಡೆ ಗಣಿಸುವ, ಕಿರುಕುಳ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ವಾಣಿ 1090 ಸಂಖ್ಯೆಗೆ ಕರೆ ಮಾಡಬಹುದು. ಸರಕಾರ ನಾನಾ ಸೌಲಭ್ಯ ಕಲ್ಪಿಸಿದೆ. ಕಾಳಜಿಯುಳ್ಳವರು ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಧ್ಯಕ್ಷ ತೆ ವಹಿಸಿ ಮಾತನಾಡಿ,' ಬದುಕಿನಲ್ಲಿ ನಾನಾ ರೀತಿಯ ಕಷ್ಟ ಕೋಟಲೆ ಅನುಭವಿಸಿ ಮುಂದಿನ ತಲೆಮಾರು ಚೆನ್ನಾಗಿರಲಿ ಎಂದು ಪರಿಶ್ರಮದಿಂದ ಮಕ್ಕಳನ್ನು ಸಾಕಿ ಸಲಹಿರುತ್ತಾರೆ. ಹಾಗಾಗಿ ಹಿರಿಯರನ್ನು ಅವಮಾನಿಸ ಬೇಡಿ. ಸುಸ್ಥಿತಿಯಲ್ಲಿರುವರು, ಉದ್ಯೋಗದಲ್ಲಿರುವವರು, ಪೋಷಕರನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ವಿಷಾದನೀಯ' ಎಂದು ಕಳವಳ ವ್ಯಕ್ತಪಡಿಸಿದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್‌ ಮೂರ್ತಿ ಮಾತನಾಡಿ, ಕೂಡು ಕುಟುಂಬದ ಭಾವನೆಯೇ ಹೊರಟು ಹೋಗಿದೆ. ಇದು ಒಳ್ಳೆಯ ಬೆಳೆವಣಿಗೆ ಅಲ್ಲ. ಮಕ್ಕಳು ಹಿರಿಯರ ಪೋಷಣೆಗೆ ಮುಂದಾಗಬೇಕು. ಮಾಡಬಾರದ ಕೃತ್ಯಗಳನ್ನು ಮಾಡಿ ನೂರೆಂಟು ದೇವಸ್ಥಾನ ಸುತ್ತಿ ಕೋಟಿಗಟ್ಟಲೇ ದಾನ ಮಾಡಿದರೆ ಪ್ರಯೋಜನ ಇಲ್ಲ. ಸಂಸ್ಕಾರವಂತ ಮಕ್ಕಳು ಹೀಗೆ ನಡೆದುಕೊಳ್ಳುವುದಿಲ್ಲ' ಎಂದರು.

ರಾಜ್ಯ ಮಟ್ಟದ ಹಿರಿಯ ನಾಗರಿಕರ ಜಾನಪದ ಹಾಡುಗಾರಿಕೆಯಲ್ಲಿ ಎರಡನೇ ಸ್ಥಾನಗಳಿಸಿ ಜಿಲ್ಲೆಗೆ ಕೀರ್ತಿ ತಂದ ಚಿತ್ರದುರ್ಗ ನಗರದ ಅಡವಪ್ಪನವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಪಂ ಸದಸ್ಯ ನರಸಿಂಹರಾಜು, ತಾಪಂ ಅಧ್ಯಕ್ಷ ವೇಣುಗೋಪಾಲ್‌, ಉಪಾಧ್ಯಕ್ಷೆ ಶೋಭಾ, ಡಿಡಿ ಪರಮೇಶ್ವರಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ, ಮೋಕ್ಷಾ ರುದ್ರಸ್ವಾಮಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ