ಆ್ಯಪ್ನಗರ

ಒಂಟಿ ಮಹಿಳೆಗೆ ಶೌಚಾಲಯವೇ ಆಸರೆ,,,!

ಶೌಚಾಲಯವೇ ಇಲ್ಲವೆಂಬ ಕೂಗು ದೇಶಾದ್ಯಂತ ಎದ್ದಿರುವಾಗಲೇ ಇಲ್ಲೊಬ್ಬ ಅನಾಥೆಗೆ ಸಾಮೂಹಿಕ ಶೌಚಾಲಯವೊಂದು ಆಶ್ರಯ ನೀಡಿದೆ..!

ವಿಕ ಸುದ್ದಿಲೋಕ 11 Nov 2016, 7:20 pm
ಕೊಂಡ್ಲಹಳ್ಳಿ ಮಹಾದೇವ ಮೊಳಕಾಲ್ಮುರು : ಶೌಚಾಲಯವೇ ಇಲ್ಲವೆಂಬ ಕೂಗು ದೇಶಾದ್ಯಂತ ಎದ್ದಿರುವಾಗಲೇ ಇಲ್ಲೊಬ್ಬ ಅನಾಥೆಗೆ ಸಾಮೂಹಿಕ ಶೌಚಾಲಯವೊಂದು ಆಶ್ರಯ ನೀಡಿದೆ..!
Vijaya Karnataka Web
ಒಂಟಿ ಮಹಿಳೆಗೆ ಶೌಚಾಲಯವೇ ಆಸರೆ,,,!


ಪಟ್ಟಣದ ರಾಯದುರ್ಗ ರಸ್ತೆಯ ತಿಪ್ಪೀರಯ್ಯಹಟ್ಟಿ ಬಸ್‌ ನಿಲ್ದಾಣದಲ್ಲಿ ಸಣ್ಣ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಶೌಚಾಲಯವಿದು. ಈಗ ಒಬ್ಬ ಮಹಿಳೆಗೆ ಅಕ್ಷರಶಃ ವಾಸದ ಗೂಡೇ ಆಗಿ ಹೋಗಿದೆ.

ಇದು ಒಂದೆರಡು ತಿಂಗಳ ವಾಸದ ಕಥೆಯಲ್ಲ. ಯಲ್ಲಮ್ಮ ಎಂಬ ಈ ಒಂಟಿ ಮಹಿಳೆಯದು ಕಳೆದ ಎರಡು ವರ್ಷಗಳಿಂದ ಇಲ್ಲಿಯೇ ವಾಸ್ತವ್ಯ.

ಯಲ್ಲಮ್ಮನ ತವರೂರು ಮೂಲತಃ ಆಂಧ್ರದ ಕಣೆಕಲ್‌ ಗ್ರಾಮ, ಮಡಿವಾಳ ಸಮುದಾಯದವರು. ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಕಲ್ಲಹಳ್ಳಿ ಗಂಡನ ಊರು. ತನ್ನ ಮಗಳನ್ನು ಮೊಳಕಾಲ್ಮುರು ತಾಲೂಕು ಸಂತೇಗುಡ್ಡಕ್ಕೆ ಮದುವೆ ಮಾಡಿಕೊಡಲಾಗಿದೆ. ಒಬ್ಬ ಮಗ ಮದುವೆಯಾಗಿ ಹೆಂಡತಿ ಜತೆ ಕೆಲಸಕ್ಕಾಗಿ ಬೆಂಗಳೂರು ಸೇರಿಕೊಂಡ.

ಆಮೇಲೆ ಕಳೆದ ಐದು ವರ್ಷಗಳಿಂದ ಪತಿ ಜೊತೆ ಪಟ್ಟಣದ ತಿಪ್ಪೀರಯ್ಯನಹಟ್ಟಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಎರಡು ವರ್ಷಗಳ ಹಿಂದೆ ಪತಿ ಬಸಣ್ಣ ಕೂಡ ತೀರಿಕೊಂಡ. ಮಗಳು, ಮಗ ಯಾರೂ ಈ ಅಜ್ಜಿ ಸಹಾಯಕ್ಕೆ ಬರಲಿಲ್ಲ, ಇತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಗೆ ಮಕ್ಕಳಿದ್ದೂ ಇಲ್ಲದಂತಾಯಿತು. ಹಣಕಾಸಿನ ಸಮಸ್ಯೆಯಾಗಿ ಮನೆ ಖಾಲಿ ಮಾಡಬೇಕಾಯಿತು. ಅಲ್ಲಿಂದ ಬದುಕು ಬೀದಿಗೆ ಬಿತ್ತು. ಆಗ ಈ ಅಜ್ಜಿಗೆ ಬಸ್‌ ನಿಲ್ದಾಣದಲ್ಲಿದ್ದ ಸಾರ್ವಜನಿಕ ಶೌಚಾಲಯವೇ ವಾಸದ ನಿಲಯವಾಯಿತು.

ಅವರಿವರ ಮನೆಗೆ ತೆರಳಿ ಬಟ್ಟೆ ತೊಳೆಯುವ ಕಾಯಕ ಮಾಡತೊಡಗಿದರು. ಈ ಕೆಲಸದಿಂದ ಸಿಗುವ ಪುಡಿಗಾಸೇ ಜೀವನಕ್ಕೆ ಆಧಾರ. ದಿನಕ್ಕೆ ಐವತ್ತರಿಂದ ನೂರು ರೂ. ಆಸರೆಯಾಗಿದೆ.

'ನನಗೆ ರೇಷನ್‌ ಕಾರ್ಡ್‌, ಎಲೆಕ್ಷ ನ್‌ ಐಡಿ, ಆಧಾರ ಕಾರ್ಡ್‌ ಯಾವುದೂ ಇಲ್ಲ 'ಎಂದು ವಿಕ ಜತೆ ನೋವು ತೋಡಿಕೊಂಡರು. ಅವರಿವರು ರಸ್ತೆ ಬದಿ ಎಸೆದ ಎಂಟತ್ತು ಬಿಸ್ಲರಿ ಬಾಟಲಿಗಳಲ್ಲಿ ನೀರು ತುಂಬಿಟ್ಟುಕೊಂಡು ಬದುಕುತ್ತಿದ್ದಾರೆ. ಕೆಲ ಕಿಡಿಗೇಡಿಗಳು ಆಗೊಮ್ಮೆ ಈಗೊಮ್ಮ ಕಾಟ ಕೊಡುವುದು ತಪ್ಪಿಲ್ಲ.

'ಸಮೀಪದ ಕೃಷ್ಣಪ್ಪನ ಮಡುವಿಗೆ ಹೋಗಿ ನೀರು ತಂದಿಟ್ಟುಕೊಳ್ಳುತ್ತೇನೆ. ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿಯಾದ ಕೂಡಲೇ ಎದುರಿಗಿರುವ ಸಿದ್ಧಾರೂಢ ಮಠಕ್ಕೆ ತೆರಳಿ ಮಲಗುತ್ತೇನೆ. ಏನು ಮಾಡುವುದು ಸ್ವಾಮಿ, ಸರಕಾರ ನನಗೂ ವೃದ್ದಾಪ್ಯ ವೇತನÜ ನೀಡಿದರೆ ಹೇಗೋ ಬದುಕುತ್ತೇನೆ, ಇಲ್ಲದಿದ್ದರೆ ಹೀಗೆ ಹೀನಾಯ ಬದುಕೇ ನನಗೆ ಗತಿ 'ಎಂದು ನಾಗರಿಕ ಸಮಾಜಕ್ಕೆ ಮುಜುಗರ ತರುವಂಥ ಮಾತಾಡಿ ಮಾತು ಮುಗಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ