ಆ್ಯಪ್ನಗರ

ಈರುಳ್ಳಿ ಖರೀದಿ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸುವ ಪ್ರಕ್ರಿಯೆ ಸೋಮವಾರದಿಂದ ಚಾಲನೆ ಸಿಕ್ಕಿದ್ದು ಚಿತ್ರದುರ್ಗದ ಎಪಿಎಂಸಿ ಖರೀದಿ ಕೇಂದ್ರದಲ್ಲಿ

ವಿಕ ಸುದ್ದಿಲೋಕ 16 Nov 2016, 9:20 am
ಚಿತ್ರದುರ್ಗ : ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸುವ ಪ್ರಕ್ರಿಯೆ ಸೋಮವಾರದಿಂದ ಚಾಲನೆ ಸಿಕ್ಕಿದ್ದು ಚಿತ್ರದುರ್ಗದ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಸುಮಾರು ಎಂಟು ನೂರು ಕ್ವಿಂಟಾಲ್‌ ಈರುಳ್ಳಿ ಖರೀದಿಯಾಗಿದೆ. ದಿನದಿಂದ ದಿನಕ್ಕೆ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸುವವರ ರೈತರ ಸಂಖ್ಯೆ ಕೂಡಾ ಹೆಚ್ಚುತ್ತಿದೆ.
Vijaya Karnataka Web
ಈರುಳ್ಳಿ ಖರೀದಿ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ


ಚಳ್ಳಕೆರೆಯಲ್ಲಿ ಗುಣಮಟ್ಟದ ಈರುಳ್ಳಿ ಬಾರದ ಕಾರಣ ಖರೀದಿ ಪ್ರಕ್ರಿಯೆ ಟೇಕಾಫ್‌ ಆಗಿಲ್ಲ ಎನ್ನಲಾಗಿದೆ. ಚಿಕ್ಕ ಜಾಜೂರು ಖರೀದಿ ಕೇಂದ್ರದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿದ್ದು ಇದುವರೆಗೂ ಕೇವಲ ಆರೇಳು ರೈತರು ಖರೀದಿ ಕುರಿತು ವಿಚಾರಣೆ ನಡೆಸಿ ಹೋಗಿದ್ದಾರೆ.

ಚಿತ್ರದುರ್ಗದ ಎಪಿಎಂಸಿಗೆ ಈರುಳ್ಳಿ ದಾಸ್ತಾನು ತಂದಿರುವ ರೈತರು ಅಳೆದು ತೂಗಿ ಮಾರಾಟಕ್ಕೆ ಮುಂದಾಗಿದ್ದಾರೆ. 'ಬೆಂಗಳೂರು ಮಾರುಕಟ್ಟೆ ದರ ಒಂದಷ್ಟು ಚೇತರಿಸಿಕೊಂಡಿದ್ದರೂ ಉತ್ತಮ ಗುಣಮಟ್ಟದ ಈರುಳ್ಳಿಗೆ ಮಾತ್ರ ರೇಟು ಸಿಗುತ್ತಿದೆ. ಕಡಿಮೆ ಗುಣಮಟ್ಟದ ಈರುಳ್ಳಿಯನ್ನು ಬಿಸಾಕೋ ಬೆಲೆಗೆ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖರೀದಿ ಕೇಂದ್ರವೇ ಉತ್ತಮ ಆಯ್ಕೆಯಾಗಿದೆ' ಎಂದು ಬಹುತೇಕ ರೈತರು ಅಭಿಪ್ರಾಯ±ಡುತ್ತಿದ್ದಾರೆ.

ತಮ್ಮ ಸಹ ರೈತ ಮಿತ್ರನೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಈರುಳ್ಳಿ ದಾಸ್ತಾನು ಸಾಗಿಸಲು ಬಂದಿದ್ದ ಕುರುಮರಡಿಕೆರೆ ಶ್ರೀನಿವಾಸ್‌ ರೆಡ್ಡಿ ವಿಕದೊಂದಿಗೆ ಮಾತನಾಡಿ,' ನಮ್ಮದು 110 ಪಾಕೆಟ್‌ ಈರುಳ್ಳಿ ಆಗಿತ್ತು. ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರಿಂದ 17 ಸಾವಿರ ರೂ ಬಂತು. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರೆ 38 ಸಾವಿರ ರೂ ಬರುತ್ತಿತ್ತು' ಎಂದರು.

ಮಾಡನಾಯಕನಹಳ್ಳಿಯ ಯುವ ರೈತ ಮಹಾಂತೇಶ್‌ ಕೂಡಾ ಬೆಂಬಲ ಬೆಲೆ ಖರೀದಿ ಪರವಾಗಿ ಮಾತನಾಡಿದರು. 'ಸರಕಾರ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವುದರಿಂದ ರೈತರಿಗೆ ತುಂಬಾ ಲಾಭವೇನೂ ಇಲ್ಲ. ಆದರೆ, ನಷ್ಟದ ಪ್ರಮಾಣ ಕಡಿಮೆ ಆಗುತ್ತಿದೆ. ನಾನು 220 ಪಾಕೆಟ್‌ ಈರುಳ್ಳಿಯನ್ನು ಇಲ್ಲಿಯೇ ಮಾರಾಟ ಮಾಡಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದರು.

'ಈಗ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ರೇಟು ಚೆನ್ನಾಗಿದೆ. ಒಂದು ಕ್ವಿಂಟಾಲ್‌ಗೆ 900 ರೂ ತನಕ ಸಿಗುತ್ತಿದೆ. ಹಾಗಾಗಿ, ಖರೀದಿ ಕೇಂದ್ರದಿಂದ ಅಂತಹ ಉಪಯೋಗವೇನೂ ಆಗಿಲ್ಲ. ಬೆಂಗಳೂರಿಗೆ ಸಾಗಣೆ ವೆಚ್ಛ, ಅನಿಶ್ಚಿತ ಮಾರುಕಟ್ಟೆ ದರ ಇತ್ಯಾದಿ ಆತಂಕ ಇರುವುದರಿಂದ ನಿರ್ದಿಷ್ಟ ಮೊತ್ತ ಖಾತ್ರಿ ಇರುವ ಕಾರಣ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ' ಎಂದು ರೈತ ಪರಮೇಶ್ವರಪ್ಪ, ಕೃಷ್ಣಮೂರ್ತಿ, ನಿರಂಜನ ಹೇಳಿದರು.

**
ಚಳ್ಳಕೆರೆ ಖರೀದಿ ಕೇಂದ್ರದಲ್ಲಿ ಖರೀದಿ ಮಾನದಂಡ ಪ್ರಕಾರ 30 ಎಂ ಎಂ ಈರುಳ್ಳಿ ಬರುತ್ತಿಲ್ಲ. ಆದರೆ, ಚಿತ್ರದುರ್ಗದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬರುತ್ತಿದೆ. ಪ್ಯಾಕಿಂಗ್‌ ಸಹಾ ಚೆನ್ನಾಗಿದೆ. ರೈತರು ಕನಿಷ್ಠ 30 ಎಂ ಎಂ ಇರುವ ಈರುಳ್ಳಿ ತಂದರೆ ಖರೀದಿಗೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ.

- ಜಿ.ಆರ್‌.ರಾಜಪ್ಪ, ಶಾಖಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ