ಆ್ಯಪ್ನಗರ

ಮುಖ್ಯ ರಸ್ತೆ ಗುಂಡಿ ಮುಚ್ಚಲು ತೀರ್ಮಾನ

ನಗರೋತ್ಥಾನದಡಿ ಕೈಗೊಂಡಿರುವ ಕಾಮಗಾರಿ ಇರುವ ರಸ್ತೆಗಳಲ್ಲಿನ ಗುಂಡಿ ಗಳನ್ನು ಹೊರತುಪಡಿಸಿ, ಉಳಿದ ಮುಖ್ಯರಸ್ತೆಗಳ ಡಾಂಬರ್‌ ಮೇಲ್ಮೈನಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಶುಕ್ರವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು

ವಿಕ ಸುದ್ದಿಲೋಕ 11 Feb 2017, 8:11 am
ಚಿತ್ರದುರ್ಗ : ನಗರೋತ್ಥಾನದಡಿ ಕೈಗೊಂಡಿರುವ ಕಾಮಗಾರಿ ಇರುವ ರಸ್ತೆಗಳಲ್ಲಿನ ಗುಂಡಿ ಗಳನ್ನು ಹೊರತುಪಡಿಸಿ, ಉಳಿದ ಮುಖ್ಯರಸ್ತೆಗಳ ಡಾಂಬರ್‌ ಮೇಲ್ಮೈನಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಶುಕ್ರವಾರ ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.
Vijaya Karnataka Web
ಮುಖ್ಯ ರಸ್ತೆ ಗುಂಡಿ ಮುಚ್ಚಲು ತೀರ್ಮಾನ


ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಉಪ ಯೋಜನೆಯಡಿ ಬಿಡುಗಡೆ ಯಾಗಿರುವ 2.50 ಕೋಟಿಗೆ ಪರಿಶಿಷ್ಟರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸುವುದು. ವಾರ್ಡ್‌ ನಂ .31 ರಲ್ಲಿ ಪರಿಶಿಷ್ಟರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ ನಲ್ಲಿ ಸಂಪರ್ಕದ ವೆಚ್ಚ ಭರಿಸಲು ಸಭೆ ಅನುಮೋದನೆ ನೀಡಿತು.

ವಾರ್ಡ್‌ ನಂ .14 ರಲ್ಲಿ ಬಷೀರ್‌ಗಲ್ಲಿ ಹಾಗೂ ಮಿಲ್ಲತ್‌ ಸ್ಕೂಲ್‌ ಹಿಂಭಾಗ ಹೊಸ ದಾಗಿ ಎರಡು ಕೊಳವೆ ಬಾವಿ ಕೊರೆಸಿ ಮೋಟಾರ್‌, ಪಂಪ್‌ ಅಳವಡಿಸುವುದು, ಇದೇ ವಾರ್ಡ್‌ನ ಮೆಕ್ಕಾ ಮಸೀದಿ ರಸ್ತೆಗೆ ಹೋಗುವ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ನಿರ್ಮಿಸಲು ಸಭೆ ಒಪ್ಪಿಗೆ ನೀಡಿತು.

ನಗರಸಭೆ ವ್ಯಾಪ್ತಿಯಲ್ಲಿ ಸಣ್ಣ ನೀರು ಸರಬರಾಜು ಯೋಜನೆ, ಶಾಂತಿ ಸಾಗರ, ವಿವಿ ಸಾಗರ ಯೋಜನೆಯಡಿ ವಾರ್ಷಿಕ ಗುತ್ತಿಗೆ, ಸಬ್‌ಮರ್ಸಿಬಲ್‌ ಮೋಟಾರ್‌ ಪಂಪ್‌ ಮತ್ತು ಸ್ಟಾರ್ಟರ್‌ ನಿರ್ವಹಣೆ, ವಾಲ್ವ್‌ ರಾಡ್‌, ನಟ್‌ ಮತ್ತಿತರ ಬಿಡಿ ಭಾಗ ಖರೀದಿಸಲು ಒಪ್ಪಿಗೆ ನೀಡಲಾಯಿತು.

ಹೊರಗುತ್ತಿಗೆ ಪೌರ ಕಾರ್ಮಿಕರ ಮನೆ ಮತ್ತು ಮೇಲ್ಛಾವಣಿ ರಿಪೇರಿಗೆಂದು 2016-17 ನೇ ಸಾಲಿನಲ್ಲಿ ಮಂಜೂರಾಗಿರುವ 21 ಲಕ್ಷ ರೂಗಳನ್ನು ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಸ್ವಂತ ಮನೆಗಳಿಲ್ಲದ ಕಾರಣ, ಈ ಹಣವನ್ನು ಪೌರ ಕಾರ್ಮಿಕ ರ ಗೃಹಭಾಗ್ಯ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ತಲಾ ಒಂದು ಲಕ್ಷ ರೂಗಳಂತೆ ಬಳಸಿಕೊಳ್ಳಲು ಪರಿಷ್ಕೃತ ಕ್ರಿಯಾ ಯೋಜನೆ ರೂಪಿಸಲು ಸಹಾ ಸಭೆ ಅನುಮೋದನೆ ನೀಡಿತು.

ಮಂಜುನಾಥ್‌ ಗೊಪ್ಪೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌, ಪೌರಾಯುಕ್ತ ಚಂದ್ರಪ್ಪ ಇದ್ದರು.

------------------

ಗುಂಡಿ ಎಲ್ಲಿ ಮುಚ್ತಾರೆ, ಬಿಲ್‌ ಮಾತ್ರ ಬರ್ತವೆ : 'ರೀ ಅಧ್ಯಕ್ಷ್ರೇ ..., ರಸ್ತೆ ಗುಂಡಿ ಎಲ್ಲಿ ಮುಚ್ತಾರ್ರೀ.., ಬರೀ ಬಿಲ್‌ ಮಾತ್ರ ಬರ್ತವೆ. ದುರ್ಗದ ತುಂಬಾ ಗುಂಡಿ ಬಿದ್ದಿವೆ, ಯಾವ್ದೂಂತ ಮುಚ್ತೀರಿ. ಮೊದಲು ಗುಂಡಿ ಎಷ್ಟಿವೆ ಎಂದು ಸಮೀಕ್ಷೆ ಮಾಡಿಸಿ. ಆ ಮೇಲೆ ಮುಚ್ಚಿ...' ಹೀಗೆಂದು ಹೇಳಿದವರು ಏಳನೇ ವಾರ್ಡ್‌ನ ನಗರಸಭೆ ಸದಸ್ಯ ಎಸ್‌ಬಿಎಲ್‌ ಮಲ್ಲಿಕಾರ್ಜುನ್‌.

ಸದಸ್ಯ ಭೀಮರಾಜು ಮಾತನಾಡಿ,' ಮೆದೇಹಳ್ಳಿ, ಜೆಸಿಆರ್‌ ರೋಡ್‌ ಮತ್ತಿತರ ಕಡೆ ದೊಡ್ಡ ಗುಂಡಿಗಳು ಬಿದ್ದಿವೆ' ಎಂದರು. ಆಗ ಕೆಲ ಸದಸ್ಯರು ನಗರೋತ್ಥಾನದ ಕಾಮಗಾರಿಯಿಂದ ಬಿದ್ದಿರುವ ಗುಂಡಿ ಮುಚ್ಚಲಿಕ್ಕೆ ಆಗುವುದಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಅಧ್ಯಕ್ಷರು,' ನಗರೋತ್ಥಾನ ಕಾಮಗಾರಿಯಿಂದಾಗಿರುವ ಗುಂಡಿ ಗಳನ್ನು ಅವರೇ ಮುಚ್ಚಿ ಕೊಡಬೇಕು. ಉಳಿದ ಮುಖ್ಯರಸ್ತೆಗಳ ಗುಂಡಿ ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ' ಎಂದರು.

ಸಭೆಯಲ್ಲಿ ನಾನಾ ವಿಷಯಗಳ ಮೇಲೆ ನಡೆದ ಚರ್ಚೆಯಲ್ಲಿ ಸದಸ್ಯರಾದ ಸದಸ್ಯ ಪ್ರಸನ್ನ, ಎಚ್‌.ಕೆ.ಖಾದರ್‌ ಖಾನ್‌, ಮಹದೇವಿ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ