ಆ್ಯಪ್ನಗರ

Chitradurga: ಮೀಸಲಾತಿ ನೀಡದಿದ್ದರೆ, ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಗೈರು.!

ಈ ಬಾರಿ ಸರ್ಕಾರದ ವಾಲ್ಮೀಕಿ ಜಯಂತಿಗೆ ಬದಲಾಗಿ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾದ್ಯಂತ ನಾಯಕ ಜನಾಂಗ ಸೇರಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತೇವೆ. ವಾಲ್ಮೀಕಿ ಜನಾಂಗಕ್ಕೆ ಶೇ.7.5 ಮೀಸಲಾತಿಗಾಗಿ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೀಸಲಾತಿ ನೀಡದಿದ್ದರೆ, ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಗೈರಾಗುತ್ತೇವೆ ಎಂದಿದ್ದಾರೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 6 Oct 2022, 5:19 pm

ಹೈಲೈಟ್ಸ್‌:

  • ಸರ್ಕಾರದ ವಾಲ್ಮೀಕಿ ಜಯಂತಿಗೆ ಬದಲಾಗಿ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾದ್ಯಂತ ನಾಯಕ ಜನಾಂಗ ಸೇರಿ ವಾಲ್ಮೀಕಿ ಜಯಂತಿ
  • ವಾಲ್ಮೀಕಿ ಜನಾಂಗಕ್ಕೆ ನೀಡಿರುವ ರಜೆಯನ್ನು ಸರ್ಕಾರ ಹಿಂದಕ್ಕೆ ಪಡೆಯಲಿ
  • ಜನಾಂಗದ ಸ್ವಾಮೀಜಿ 238 ದಿನಗಳಿಂದ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Valmiki Samaja
ಚಿತ್ರದುರ್ಗ : ಶೇ 7.5 ಮೀಸಲಾತಿಗಾಗಿ ನಮ್ಮ ಜನಾಂಗದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಕಳೆದ 238 ದಿನಗಳಿಂದ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ಇದೇ ತಿಂಗಳ 9 ರಂದು ಸರ್ಕಾರದ ವತಿಯಿಂದ ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಭಾಗವಹಿಸದೆ ಧರಣಿಯಲ್ಲಿ ಪಾಲ್ಗೊಂಡು ಸ್ವಾಮೀಜಿಗೆ ಬೆಂಬಲಿಸುವುದಾಗಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶೇ.7.5 ಮೀಸಲಾತಿಗಾಗಿ ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ನಾಗಮೋಹನ್‍ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಮೀಸಲಾತಿ ನೀಡುವಂತೆ ನಮ್ಮ ಸ್ವಾಮೀಜಿ ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಈ ಬಾರಿಯ ಸರ್ಕಾರದ ವಾಲ್ಮೀಕಿ ಜಯಂತಿಗೆ ಬದಲಾಗಿ ಫ್ರೀಡಂ ಪಾರ್ಕಿನಲ್ಲಿ ರಾಜ್ಯಾದ್ಯಂತ ನಾಯಕ ಜನಾಂಗ ಸೇರಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತೇವೆ. ಇದಕ್ಕೂ ರಾಜ್ಯ ಸರ್ಕಾರ ಮಣಿಯದಿದ್ದರೆ ದೆಹಲಿಯಲ್ಲಿ ರೈತರು ನಡೆಸಿದ ಚಳುವಳಿ ರೀತಿಯಲ್ಲಿ ನಾವುಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆಂದು ಎಚ್ಚರಿಸಿದರು.
ಮೀಸಲಾತಿ ಬೇಡಿಕೆಗೆ ಸ್ಪಂದಿಸದ ಸರ್ಕಾರ: ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕಾರ

ಫ್ರೀಡಂ ಪಾರ್ಕಿನಲ್ಲಿ ವಾಲ್ಮೀಕಿ ಜಯಂತಿ
ಕಲ್ಲವ್ವನಾಗತಿಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ ಸರ್ಕಾರದಿಂದ ನಡೆಯುವ ವಾಲ್ಮೀಕಿ ಜಯಂತಿಗೆ ನಾವುಗಳು ಯಾರು ಹೋಗುವುದಿಲ್ಲ. ರಾಜ್ಯಾದ್ಯಂತ 224 ಕ್ಷೇತ್ರಗಳಿಂದ ನಾಯಕ ಜನಾಂಗದವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿ ಮೀಸಲಾತಿಗಾಗಿ ನಮ್ಮ ಸ್ವಾಮೀಜಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳುತ್ತೇವೆ. ಸರ್ಕಾರ ಎಲ್ಲಿಯವರೆಗೆ ಮೀಸಲಾತಿಯನ್ನು ಘೋಷಿಸುವುದಿಲ್ಲವೋ ಅಲ್ಲಿಯತನಕ ಜಾಗ ಬಿಟ್ಟು ಕದಲುವುದಿಲ್ಲ. ಚಾಪೆ ದಿಂಬಿನ ಸಮೇತ ಧರಣಿಗೆ ಸಿದ್ದರಿದ್ದೇವೆ ಎಂದು ಹೇಳಿದರು.

ವಾಲ್ಮೀಕಿ ಜನಾಂಗಕ್ಕೆ ನೀಡಿರುವ ರಜೆಯನ್ನು ಸರ್ಕಾರ ಹಿಂದಕ್ಕೆ ಪಡೆಯಲಿ. ನಮ್ಮ ಜನಾಂಗದ ಯಾರಿಗೂ ವಾಲ್ಮೀಕಿ ಪ್ರಶಸ್ತಿಯನ್ನೂ ಕೊಡುವುದು ಬೇಡ. ನಮಗೆ ಬೇಕಾಗಿರುವುದು ಮೀಸಲಾತಿ. ಈ ನಿಟ್ಟಿನಲ್ಲಿ ಹೋರಾಟವನ್ನು ಚುರುಕುಗೊಳಿಸಲಾಗುವುದೆಂದರು.
ವಾಲ್ಮೀಕಿ ನಿಜವಾದ ಜಗದ್ಗುರು: ಅಶ್ವತ್ಥನಾರಾಯಣ ಬಣ್ಣನೆ
ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ನಾಯಕ ಸಮಾಜದ ಮುಖಂಡರುಗಳಾದ ಡಿ.ಗೋಪಾಲಸ್ವಾಮಿ ನಾಯಕ, ಕಾಟಿಹಳ್ಳಿ ಕರಿಯಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ನಾಗಮೋಹನ್ ದಾಸ್ ಯಥಾವತ್ತಾಗಿರಲಿ
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಅ.9 ರಂದು ನಮ್ಮ ಹೋರಾಟವನ್ನು ಚುರುಕುಗೊಳಿಸುವುದಾಗಿ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಚಕ್ರವರ್ತಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸುವಂತೆ ನಾಯಕ ಸಮಾಜದ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 238 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದರೂ ಕೂಡ ರಾಜ್ಯ ಸರ್ಕಾರ ನಿರ್ಲಕ್ಷೆಯಿಂದ ಕಾಣುತ್ತಿದೆ. ಒಂದು ದಿನವೂ ಬೀದಿಗಿಳಿದು ಹೋರಾಟ ಮಾಡದ ಮೀಸಲಾತಿಯನ್ನೇ ಕೇಳದ ಒಂದು ವರ್ಗದವರಿಗೆ ಕೇಂದ್ರ ಸರ್ಕಾರ ಶೇ.10 ಮೀಸಲಾತಿಯನ್ನು ಘೋಷಿಸಿತು. ಅನೇಕ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಎಸ್ಸಿ.ಎಸ್ಟಿ.ಗಳನ್ನು ಸರ್ಕಾರ ಕಡೆಗಣಿಸುತ್ತಿರುವುದರಿಂದ ಪ್ರಸನ್ನಾನಂದ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲಿಸಿ ಅ.9 ರಂದು ವಾಲ್ಮೀಕಿ ಜಯಂತಿಯನ್ನು ದೊಡ್ಡ ಸಮಾವೇಶವ್ನನಾಗಿ ಆಚರಿಸಲಾಗುವುದೆಂದರು.

ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಮೀಸಲಾತಿ ಘೋಷಿಸುವಲ್ಲಿ ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಜಿಲ್ಲೆಯಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಧರಣಿಗೆ ಹೊರಡಲಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ. ಸರ್ಕಾರವನ್ನು ಕಿತ್ತೊಗೆಯುವ ಕುರಿತು ಎಸ್ಸಿ.ಎಸ್ಟಿ.ಗಳನ್ನು ಎಚ್ಚರಿಸಲಾಗುವುದೆಂದು ತಿಳಿಸಿದರು.
ಡಾ.ಬಿ.ಗಿರೀಶ್ ಓಬಯ್ಯನ ಹಟ್ಟಿ, ಬಿಎಸ್‍ಪಿ.ಮುಖಂಡ ದೊಡ್ಡೊಟ್ಟಪ್ಪ, ತಿಮ್ಮಪ್ಪ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ