Please enable javascript.Tipperudraswamy Rathotsava,ಜನಸಾಗರದ ನಡುವೆ ತಿಪ್ಪೇಶನ ರಥೋತ್ಸವ - Nayakanahatti Tipperudraswamy Rathotsava - Vijay Karnataka

ಜನಸಾಗರದ ನಡುವೆ ತಿಪ್ಪೇಶನ ರಥೋತ್ಸವ

Vijaya Karnataka 6 Mar 2018, 8:48 am
Subscribe

ರಥವೆಳೆದರು, ಬಾಳೆಹಣ್ಣು-ಬೆಲ್ಲ ಎಸೆದರು, ಕೊಬ್ಬರಿ ಸುಟ್ಟರು

nayakanahatti tipperudraswamy rathotsava
ಜನಸಾಗರದ ನಡುವೆ ತಿಪ್ಪೇಶನ ರಥೋತ್ಸವ

ನಾಯಕನಹಟ್ಟಿ: ಮಧ್ಯಕರ್ನಾಟಕದ ಆರಾಧ್ಯ ದೈವ ತಿಪ್ಪೇರುದ್ರಸ್ವಾಮಿಯ ಜಾತ್ರೆ ಸಂಭ್ರಮ ಹಾಗೂ ಸಡಗರದಿಂದ ಸೋಮವಾರ ನೆರವೇರಿತು. ಈ ಬಾರಿ ಅಲ್ಪಪ್ರಮಾಣದ ಮಳೆಯಾಗಿದ್ದರಿಂದ ಆಂಧ್ರ ಹಾಗೂ ಮಧ್ಯ ಕರ್ನಾಟಕದ ಸುಮಾರು ಎರಡು ಲಕ್ಷ ಜನರು ಜಾತ್ರೆಗೆ ಆಗಮಿಸಿದ್ದರು.

ಒಳಮಠದಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತರಲಾಯಿತು. ನಂತರ ಗೊಂಚಿಗಾರರು, ಜೋಗಿಹಟ್ಟಿಯ ಗೊಲ್ಲ ಜನಾಂಗದವರು ಮಣ್ಣಿನ ಮಡಿಕೆಯಲ್ಲಿ ಬೇಯಿಸಿ ತಂದಿದ್ದ ಬಲಿ ಅನ್ನವನ್ನು ಗಾಲಿಗಳಿಗೆ ಸಮರ್ಪಿಸಿದರು. ನಂತರ ಉತ್ಸವ ಮೂರ್ತಿಯನ್ನು ಅರ್ಚಕರು ರಥದಲ್ಲಿ ಪ್ರತಿಷ್ಠಾಪಿಸಿದರು. ಮುಕ್ತಿ ಬಾವುಟ ಹರಾಜಿನ ನಂತರ ರಥೋತ್ಸವ 4.02 ನಿಮಿಷಕ್ಕೆ ರಥೋತ್ಸವ ಆರಂಭವಾಯಿತು. ಪ್ರತಿ ವರ್ಷ 3 ಗಂಟೆಗೆ ಆರಂಭವಾಗುತ್ತಿದ್ದ ರಥೋತ್ಸವ ಈ ಬಾರಿ ಒಂದು ಗಂಟೆ ತಡವಾಗಿತ್ತು.

ಹಸಿರು ಬಾವುಟವನ್ನು ಪ್ರದರ್ಶಿಸುತ್ತಿದ್ದಂತೆ ಭಕ್ತರು ಮಿಣಿ ಎಂದು ಕರೆಯಲಾಗುವ ಬೃಹತ್‌ ತೆಂಗಿನ ಹಗ್ಗವನ್ನು ಎಳೆದರು. ತಿಪ್ಪೇರುದ್ರಸ್ವಾಮಿಗೆ ಜೈ ಎನ್ನುವ ಕೂಗು ಎಲ್ಲೆಡೆ ಪ್ರತಿಧ್ವನಿಸಿತು. ರಥೋತ್ಸವಕ್ಕೆ ಬಂದವರು ರಥದ ಹಗ್ಗವನ್ನು ಸ್ವಲ್ಪ ದೂರವಾದರೂ ರಥವನ್ನು ಎಳೆಯಬೇಕೆನ್ನುವ ನಂಬಿಕೆ ಇದೆ. ಸುಮಾರು 80 ಟನ್‌ ತೂಕದ ಬೃಹತ್‌ ರಥ ಚಲಿಸುತ್ತಿದ್ದಂತೆ ಬೆæಟ್ಟವೊಂದು ಸರಿದ ಅನುಭವವಾಗುತ್ತಿತ್ತು. ಐದು ಗಾಲಿಗಳ ರಥ ಹಿಂದೆ, ಮುಂದೆ ತೊಯ್ದಾಡುತ್ತಾ ಸಾಗುವ ಪರಿ ಭಕ್ತರಲ್ಲಿ ಅಚ್ಚರಿ, ಭಕ್ತಿಯನ್ನು ಉಂಟು ಮಾಡಿತು. ರಥ ಮುಂದೆ ಸಾಗುತ್ತಿದ್ದಂತೆ ಜನಸಾಗರ ರಥದ ಹಿಂದೆ ಮುಂದೆ ಸರಿದಾಡುತ್ತಿತ್ತು.

ಗಾಂಭೀರ್ಯದಿಂದ ಚಲಿಸಿದ ರಥ: 35 ವರ್ಷದ ನಂತರ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ರಥ ದುರಸ್ತಿ ಹಿನ್ನೆಲೆಯಲ್ಲಿ ರಥದ ಕಡೆಗೆ ಎಲ್ಲರ ಚಿತ್ತ ನೆಟ್ಟಿತ್ತು. ಹೊಸದಾದ ಮರ ಬಳಕೆ ಹಾಗೂ ಐದು ಟನ್‌ ಕಬ್ಬಿಣದ ಫಿಟ್ಟಿಂಗ್ಸ್‌ ಗಳ ಬಳಕೆಯಿಂದ ರಥದ ತೂಕ ಹೆಚ್ಚಾಗಿತ್ತು. ಎರಡು ದಿನಗಳ ಹಿಂದೆ ರಥ ಬೀದಿಯ ಡಾಂಬರೀಕರಣ ಕೈಗೊಳ್ಳಲಾಗಿತ್ತು. ರಥದ ತೂಕದಿಂದಾಗಿ ಚಕ್ರ ಚಲಿಸಿದ ಮಾರ್ಗದಲ್ಲಿ ಅರ್ಧ ಇಂಚ್‌ ನಷ್ಟು ಡಾಂಬರ್‌ ಕುಸಿದಿತ್ತು. ಬಣ್ಣ ಬಣ್ಣದ ಬಾವುಟಗಳ ತೇರು ಗಾಂಭೀರ್ಯದಿಂದ ಚಲಿಸಿತು.

ಭಕ್ತಿ ಸಮರ್ಪಣೆ: ಭಕ್ತರು ರಥಕ್ಕೆ ಬಾಳೆಹಣ್ಣು, ಮೆಣಸು, ಬೆಲ್ಲ ಎಸೆದು ಧನ್ಯತಾ ಭಾವ ಸಮರ್ಪಿಸಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆಯುತ್ತಿದ್ದರು. ಬಾಳೆಹಣ್ಣುಗಳ ಹಾರಾಟ ಆಗಸದಲ್ಲಿ ಚಿಕ್ಕ ಪಕ್ಷಿಗಳ ಹಾರಾಟವನ್ನು ನೆನಪಿಸುವಂತಿತ್ತು. ಭಕ್ತರು ನಾಮುಂದು, ತಾ ಮುಂದು ಎಂದು ಬಾಳೆಹಣ್ಣುಗಳನ್ನು ಎಸೆಯುವುದರಲ್ಲಿ ಪೈಪೋಟಿ ಏರ್ಪಡುತ್ತಿತ್ತು. ಇವುಗಳ ಜತೆಗೆ ಕೆಲವು ಭಕ್ತರು ಮೆಣಸು, ಬೆಲ್ಲ, ಮಂಡಕ್ಕಿಯನ್ನು ರಥಕ್ಕೆ ಎರಚಿ ಭಕ್ತಿ ಸಮರ್ಪಿಸಿದರು.

ವಾರೋತ್ಸವ: ಸೋಮವಾರ ತಿಪ್ಪೇರುದ್ರಸ್ವಾಮಿಯ ವಾರೋತ್ಸವವಾಗಿದೆ. ಸೋಮವಾರದಂತೆ ರಥೋತ್ಸವ ಜರುಗಿದ್ದು ವಿಶೇಷವಾಗಿತ್ತು. ಬೆಳಗ್ಗೆ 10 ಗಂಟೆಗೆ ಚಿಕ್ಕ ರಥೋತ್ಸವ ಜರುಗಿತು. ಮಧ್ಯಾಹ್ನ 3 ಗಂಟೆಗೆ ದೊಡ್ಡ ರಥೋತ್ಸವ ಜರುಗಿತು. ಇದರ ಜತೆಗೆ ಪ್ರತಿ ಸೋಮವಾರದಂತೆ ಸೋಮವಾರದ ವಾರೋತ್ಸವ ಜರುಗಿತು. ಹೀಗಾಗಿ ಸೋಮವಾರ ಮೂರು ಉತ್ಸವಗಳು ಏಕ ಕಾಲದಲ್ಲಿ ಜರುಗಿದ್ದು 15 ವರ್ಷಗಳ ನಂತರ ಜರುಗಿತು. ಹೀಗಾಗಿ ಈ ಬಾರಿಯ ರಥೋತ್ಸವ ಒಂದು ಗಂಟೆ ತಡವಾಯಿತು.

ಕೊಬ್ಬರಿ ಸುಡುವಿಕೆ: ಒಳಮಠ ಹಾಗೂ ಹೊರಮಠದ ಮುಂಭಾಗದಲ್ಲಿ ಬೃಹತ್‌ ಆಳದ ಗುಂಡಿಗಳನ್ನು ನಿರ್ಮಿಸಲಾಗಿತ್ತು. ಇವುಗಳಲ್ಲಿ ಭಕ್ತರು ಕೊಬ್ಬರಿಯನ್ನು ಸುಡುವುದರ ಮೂಲಕ ಭಕ್ತಿ ಸಮರ್ಪಿಸಿದರು. ಹೀಗಾಗಿ ಎರಡೂ ದೇವಾಲಯಗಳ ಮುಂಭಾಗದಲ್ಲಿ ಬೃಹತ್‌ ಕೊಬ್ಬರಿ ಮಾರುಕಟ್ಟೆ ನಿರ್ಮಾಣಗೊಂಡಿತ್ತು. ನಾನಾ ಇಷ್ಟಾರ್ಥಗಳು ಈಡೇರಿದ ನಂತರ ಕೊಬ್ಬರಿಯನ್ನು ಸುಡುವುದು ಇಲ್ಲಿನ ಸಂಪ್ರದಾಯವಾಗಿದೆ. ಸುಮಾರು 20 ಟನ್‌ ನಷ್ಟು ಕೊಬ್ಬರಿ ಎರಡು ದೇವಾಲಯಗಳ ಮುಂದೆ ನಿರ್ಮಿಸಿದ್ದ ಗುಂಡಿಯಲ್ಲಿ ಸುಟ್ಟು ಬೂದಿಯಾಯಿತು. ಕೊಬ್ಬರಿ ಸುಡುವುದರ ಬದಲಾಗಿ ದಾಸೋಹಕ್ಕೆ ನೀಡಿ ಎನ್ನುವ ಬರಗಳನ್ನು ಜಿಲ್ಲಾಡಳಿತ ಪ್ರದರ್ಶಿಸಿತ್ತು. ಹೀಗಿದ್ದರೂ ಭಕ್ತಾದಿಗಳು ಮಾತ್ರ ತಮ್ಮ ಸಂಪ್ರದಾಯಗಳನ್ನು ಮುಂದುವರಿಸಿದ್ದರು.

ದೇವಾಲಯದ ಮುಂಭಾಗದ ಗುಂಡಿಯಲ್ಲಿ ಭಕ್ತರು ಸುಮಾರು 20 ಟನ್‌ ಕೊಬ್ಬರಿ ಸುಟ್ಟು ಹರಕೆ ತೀರಿಸಿದರು

ಜಿಲ್ಲಾಧಿಕಾರಿ ವಿ.ವಿ.ಜೋತ್ಸಾ, ಶಾಸಕರಾದ ಎಸ್‌.ತಿಪ್ಪೇಸ್ವಾಮಿ, ಟಿ.ರಘುಮೂರ್ತಿ, ಡಿ.ಸುಧಾಕರ್‌, ಎಂಎಲ್ಸಿ ಜಯಮ್ಮ ಬಾಲರಾಜ್‌, ಉಪ ವಿಭಾಗಾಧಿಕಾರಿ ಎ.ಬಿ.ವಿಜಯ್‌ ಕುಮಾರ್‌, ದೇವಾಲಯದ ಇಒ ಎಸ್‌.ಪಿ.ಬಿ.ಮಹೇಶ್‌, ತಹಸೀಲ್ದಾರ್‌ ಟಿ.ಸಿ.ಕಾಂತರಾಜ್‌, ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ.ರವಿಶಂಕರ್‌ ಸೇರಿದಂತೆ ನಾನಾ ಜನಪ್ರತಿನಿಧಿಗಳಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ