ಆ್ಯಪ್ನಗರ

ನಾಯಕನಹಟ್ಟಿಯಲ್ಲಿ ಅಚ್ಚರಿಯ ಘಟನೆ: ಬತ್ತಿದ ಬೋರ್‌ನಲ್ಲಿ ಉಕ್ಕಿ ಹರಿಯುತ್ತಿದೆ ನೀರು, ಜನರಿಂದ ವಿಶೇಷ ಪೂಜೆ

ತಳಕು ಹೋಬಳಿಯ ತಿಮ್ಮನಹಳ್ಳಿ ಹಾಗೂ ಲಂಬಾಣಿಹಟ್ಟಿ ಗ್ರಾಮದ ನಡುವಿರುವ ಸರಕಾರಿ ಜಮೀನಿನಲ್ಲಿ ಭಾನುವಾರ ಬತ್ತಿದ ಬೋರ್‌ವೆಲ್‌ನಿಂದ ತನ್ನಷ್ಟಕ್ಕೆ ತಾನೇ ನೀರು ಉಕ್ಕುತ್ತಿದ್ದು ಜನರ ಅಚ್ಚರಿಗೆ ಕಾರಣವಾಗಿದೆ.

Vijaya Karnataka Web 27 Jul 2020, 1:05 pm
ನಾಯಕನಹಟ್ಟಿ: ಬರಪೀಡಿತ ಎಂಬ ಹಣೆಪಟ್ಟಿ ಹೊಂದಿರುವ ಇಲ್ಲಿನ ಪ್ರದೇಶದಲ್ಲಿ ತೆರೆದಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಆದರೆ ಇಲ್ಲಿನ ಪ್ರದೇಶದಲ್ಲಿ ಬೋರ್‌ವೆಲ್‌ನಿಂದ ನೀರು ಉಕ್ಕುತ್ತಿರುವುದು ಜನರ ಸಂತಸಕ್ಕೆ ಕಾರಣವಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ತಿಮ್ಮನಹಳ್ಳಿ ಗ್ರಾಮ ಹಾಗೂ ಲಂಬಾಣಿಹಟ್ಟಿ ಗ್ರಾಮಗಳಿಗೆ ನೀರು ಪೂರೈಸಲು ಎರಡು ವರ್ಷಗಳ ಹಿಂದೆ ಬೋರ್‌ವೆಲ್‌ ಕೊರೆಯಿಸಲಾಗಿತ್ತು. 568 ಅಡಿವರೆಗೆ ಬೋರ್‌ ಕೊರೆಯಿಸಿದರೂ ನೀರು ದೊರೆತಿರಲಿಲ್ಲ. ಹೀಗಾಗಿ ಬೋರ್‌ವೆಲ್‌ನ ಕಬ್ಬಿಣದ ಪೈಪ್‌ನ್ನು ಮುಚ್ಚಲಾಗಿತ್ತು. ತಳಕು ಹೋಬಳಿಯಲ್ಲಿ ಒಂದು ವಾರದಲ್ಲಿ ಮೂರು ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿ ತಳಕು ಕೆರೆಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ಉತ್ತಮ ಮಳೆಯಿಂದ ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ನೀರು ಕಾಣಿಸದೇ ಇದ್ದ ಬೋರ್‌ವೆಲ್‌ನಿಂದ ತನ್ನಷ್ಟಕ್ಕೆ ತಾನೇ ನೀರು ಉಕ್ಕಿ ಹೊರಬರುತ್ತಿದೆ. ಎಷ್ಟೇ ಪ್ರಮಾಣದಲ್ಲಿ ಮಳೆಯಾದರೂ ಅಂತರ್ಜಲದ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆದರೆ ಇಲ್ಲಿನ ಬೋರ್‌ವೆಲ್‌ನಲ್ಲಿ ತನ್ನಿಂದ ತಾನೇ ನೀರು ಹೊರಗೆ ಹರಿಯುತ್ತಿದೆ.

ಇಡೀ ಪ್ರದೇಶದಲ್ಲಿ ನೀರು ತುಂಬಿದ್ದರಿಂದ ಜನರು ಉಕ್ಕುತ್ತಿರುವ ನೀರನ್ನು ಹೊರ ಹೋಗಲು ಅನುವಾಗುವಂತೆ ಕಾಲುವೆ ತೋಡಿದ್ದಾರೆ. ಬೋರ್‌ವೆಲ್‌ನಿಂದ ಉಕ್ಕುತ್ತಿರುವ ನೀರು ಕಾಲುವೆ ಮೂಲಕ ಹರಿದು ಹಳ್ಳ ಸೇರುತ್ತಿದೆ. ಅತ್ಯಂತ ಶುದ್ಧ ಕುಡಿವ ನೀರು ಹರಿಯುತ್ತಿದ್ದು, ಜನರು ಇದನ್ನು ಕುಡಿದು ಸಂತಸಪಡುತ್ತಿದ್ದಾರೆ. ಇಂಥಹ ವಿಶೇಷ ಬೋರ್‌ವೆಲ್‌ ನೋಡಲು ತಳಕು, ತಿಮ್ಮನಹಳ್ಳಿ ಹಾಗೂ ಲಂಬಾಣಿಹಟ್ಟಿ ಗ್ರಾಮದ ಜನರು ಧಾವಿಸುತ್ತಿದ್ದಾರೆ. ಜತೆಗೆ ಮನ್ನೇಕೋಟೆ ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಬೋರ್‌ವೆಲ್‌ ನಿಂದ ಹೊರಗೆ ಉಕ್ಕುತ್ತಿರುವ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಬೋರ್‌ವೆಲ್‌ ನೀರನ್ನು ಲಂಬಾಣಿಹಟ್ಟಿ ಹಾಗೂ ಮನ್ನೇಕೋಟೆ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಸಂಪರ್ಕ ಕಲ್ಪಿಸುವಂತೆ ತಾಪಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ