ಆ್ಯಪ್ನಗರ

ರಾಂಪುರ ಹಾಸ್ಟೆಲ್‌ಗಳಿಗೆ ಜಿಪಂ ಉಪಾಧ್ಯಕ್ಷೆ ಭೇಟಿ

'ವಿಕ ಹಾಸ್ಟೆಲ್‌ ಅಭಿಯಾನ'ದಿಂದ ಎಚ್ಚೆತ್ತುಕೊಂಡ ಜಿಪಂ ಉಪಾಧ್ಯಕ್ಷೆ ಪಿ.ಸುಶೀಲಮ್ಮ, ರಾಂಪುರ ಗ್ರಾಪಂ ಉಪಾಧ್ಯಕ್ಷ ಆರ್‌.ಜಿ. ಜಯಕುಮಾರ್‌ ರಾಂಪುರ ಮೂರು ಸೇರಿದಂತೆ ಬಾಂಡ್ರಾವಿ ಹಾಸ್ಟೆಲ್‌ಗಳಿಗೆ ಮಂಗಳವಾರ ಧಿಡೀರ್‌ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು.

Vijaya Karnataka 13 Dec 2018, 5:00 am
ಮೊಳಕಾಲ್ಮುರು : 'ವಿಕ ಹಾಸ್ಟೆಲ್‌ ಅಭಿಯಾನ'ದಿಂದ ಎಚ್ಚೆತ್ತುಕೊಂಡ ಜಿಪಂ ಉಪಾಧ್ಯಕ್ಷೆ ಪಿ.ಸುಶೀಲಮ್ಮ, ರಾಂಪುರ ಗ್ರಾಪಂ ಉಪಾಧ್ಯಕ್ಷ ಆರ್‌.ಜಿ. ಜಯಕುಮಾರ್‌ ರಾಂಪುರ ಮೂರು ಸೇರಿದಂತೆ ಬಾಂಡ್ರಾವಿ ಹಾಸ್ಟೆಲ್‌ಗಳಿಗೆ ಮಂಗಳವಾರ ಧಿಡೀರ್‌ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು.
Vijaya Karnataka Web zp vice president visits rampur hostels
ರಾಂಪುರ ಹಾಸ್ಟೆಲ್‌ಗಳಿಗೆ ಜಿಪಂ ಉಪಾಧ್ಯಕ್ಷೆ ಭೇಟಿ


ರಾಂಪುರ ಎಸ್‌ಸಿ, ಎಸ್‌ಟಿ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ ದಾಸ್ತಾನು ಕೊಠಡಿಯಲ್ಲಿ ಅವಲಕ್ಕಿ, ಅಕ್ಕಿ, ಕಡ್ಲೆ ಬೇಳೆ, ಕಡ್ಲೆ, ತೊಗರಿ, ಮಂಡಕ್ಕಿ ತುಂಬಿದ ಚೀಲಗಳೂ ಸೇರಿದಂತೆ ಇನ್ನಿತರೆ ಸಾಮಗ್ರಿ ಶೇಖರಿಸಲಾಗಿತ್ತು. ಈ ದಿನಸಿಗಳನ್ನು ಮಕ್ಕಳಿಗೆ ನೀಡದೆ ವಾರ್ಡನ್‌ ಶೇಖರಿಸಿಟ್ಟಿದ್ದಾನೆ. ಇಲ್ಲಿನ ಸಾಮಗ್ರಿಗಳಿಗೂ ಈತ ಪುಸ್ತಕಕ್ಕೆ ದಾಖಲಿಸಿದ ದಿನಸಿಗೂ ವ್ಯತ್ಯಾಸವಿದ್ದರಿಂದ ಸುಶೀಲಮ್ಮ, ಜಿಪಂ ಸಭೆಯಲ್ಲಿ ಈ ವಿಷಯವನ್ನು ಸಿಇಒ ಗಮನಕ್ಕೆ ತಂದು ಇಲ್ಲಿನ ವಾರ್ಡನ್‌ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ತಿಳಿಸಲಾಗುವುದು ಎಂದರು.

ಹಾಸ್ಟೆಲ್‌ನಲ್ಲಿ ಬಯೋಮೆಟ್ರಿಕ್‌ ಕೆಟ್ಟು ತಿಂಗಳು ಕಳೆದಿರುವುದರಿಂದ ಮಕ್ಕಳ ಹಾಜರಾತಿ ನಿಖರವಾಗಿ ತಿಳಿಯದಂತಾಗಿದೆ. ಇಲ್ಲಿನ ವಾರ್ಡನ್‌ ಹೇಳಿದ್ದೆ ಮಕ್ಕಳ ಸಂಖ್ಯೆ ಎನ್ನುವಂತಾಗಿದೆ. ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ನೀಡಿದ ಕೊಠಡಿಗಳಲ್ಲಿ ಏಣಿ, ಮುರಿದು ಹಾಳಾದ ನೀರಿನ ಡ್ರಂ ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತು ಶೇಖರಿಸಲಾಗಿದೆ. ಸರಕಾರ ನೀಡುವ ಸವಲತ್ತು ಸಮರ್ಪಕವಾಗಿ ಮುಟ್ಟುತ್ತಿಲ್ಲ ಎಂದು ಅವರು ದೂರಿದರು.

ಆಶ್ರಮ ಶಾಲೆಗೆ ಭೇಟಿ ನೀಡಿದಾಗ, ಇಲ್ಲಿಯೂ ಮಕ್ಕಳಿಗೆ ಕೊಡಲು ತಂದಿದ್ದ ನೋಟ್‌ ಬುಕ್ಸ್‌, ಪೆನ್ನು, ಪೇಪರ್‌, ಡ್ರಾಯಿಂಗ್‌ ಬುಕ್ಸ್‌ ದಾಸ್ತಾನು ಕೊಠಡಿಯಲ್ಲಿದ್ದು ಮಕ್ಕಳಿಗೆ ತಲುಪಿಸಿಲ್ಲ. ಇಲ್ಲಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಕೂದಲು ಕತ್ತರಿಸದಿರುವುದು, ಇವರ ಬಟ್ಟೆಗಳು ಗಲೀಜಿನಿಂದ ಕೂಡಿರುವುದು ಕಂಡು ಬಂತು. ಮೊರಾರ್ಜಿ ವಸತಿಯುತ ವಿದ್ಯಾರ್ಥಿ ನಿಲಯದಲ್ಲಿ ಪ್ರಾಚಾರ್ಯರು ಮೀಟಿಂಗ್‌ ತೆರಳಿದ್ದು, ಇಲ್ಲಿನ ಶೌಚಾಲಯ ನಿರ್ವಹಣೆ ಸಮರ್ಪಕವಾಗಿರಲಿಲ್ಲ.

ಬಾಂಡ್ರಾವಿ ಹಾಸ್ಟೆಲ್‌ನಲ್ಲಿ ವಾರ್ಡನ್‌ ಇರಲಿಲ್ಲ, ಕೇವಲ ಒಬ್ಬ ಅಡುಗೆಯವರು ಮಾತ್ರ ಹಾಜರಿದ್ದರು. ಇಲ್ಲಿನ ಮಕ್ಕಳ ಊಟಕ್ಕೆ ಮೂರು ಸುಕ್ಕುಗಟ್ಟಿದ ಬದನೇಕಾಯಿ, ನಾಲ್ಕೈದು ಆಲೋಗಡ್ಡೆ, ಮುದುಡಿ ಹೋದ ಮೆಣಸಿನ ಕಾಯಿಗಳು, ಅರ್ಧ ಕೆಜಿ ಪ್ರಮಾಣದ ಟೊಮೆಟೋ ಹಣ್ಣುಗಳು ಹೊರತು ಪಡಿಸಿದರೆ ಇನ್ನೇನು ಗೋಚರಿಸದಂತ್ತಿತ್ತು. ಇಲ್ಲಿನ ವಾರ್ಡನ್‌ ಚಿತ್ರದುರ್ಗದಲ್ಲಿ ವಾಸ್ತವ್ಯ ಹೊಂದಿದ್ದು, ತಮಗಿಷ್ಟ ಬಂದಾಗ ಹಾಸ್ಟೆಲ್‌ ಕರ್ತವ್ಯಕ್ಕೆ ಹಾಜರಾಗುತ್ತಾನೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

ಪತ್ರಿಕೆ ಜತೆ ಜಿಪಂ ಸುಶೀಲಮ್ಮ ಮಾತನಾಡಿ, ಇಂದು ಭೇಟಿ ಮಾಡಿದ ಎಲ್ಲಾ ಹಾಸ್ಟೆಲ್‌ ಮಾಹಿತಿಯನ್ನು ಜಿಪಂ ಸಭೆಯಲ್ಲಿ ಸಿಇಒ ಗಮನಕ್ಕೆ ತರಲಾಗುವುದು. ಇಲ್ಲಿನ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಇದನ್ನು ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ಗಮನ ಹರಿಸಿ ಸರಿಪಡಿಸಿಕೊಳ್ಳಬೇಕಿದೆ ಎಂದರು.

ಸ್ಥಳದಲ್ಲಿ ಗ್ರಾಪಂ ಉಪಾಧ್ಯಕ್ಷ ಆರ್‌.ಜಿ.ಜಯಕುಮಾರ್‌, ಕಾರ್ಯದರ್ಶಿ ಲಿಂಗಣ್ಣ, ವಾರ್ಡನ್‌ ಗುರುಸಿದ್ದಪ್ಪ, ಆಶ್ರಮ ಶಾಲೆ ಮುಖ್ಯಶಿಕ್ಷ ಕಿ ಮುಬೀನ, ಸಂತೇಗುಡ್ಡ ಗ್ರಾಪಂ ಪಿಡಿಒ ಕುಮಾರಸ್ವಾಮಿ, ಜಿ.ಬಿ.ಭರತ್‌ಕುಮಾರ್‌, ಜಗದೀಶ್‌, ಮಂಜುನಾಥ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ