ಆ್ಯಪ್ನಗರ

ಬೆಂಗಳೂರಿನಲ್ಲಿ ಮುತ್ತೂಟ್‌ ಫೈನಾನ್ಸ್‌ ಕಟ್ಟಡದ ಗೋಡೆ ಕೊರೆದು 70 ಕೆ.ಜಿ ಚಿನ್ನ ಲೂಟಿ

ಗ್ಯಾಸ್‌ ಕಟ್ಟರ್‌ ಬಳಸಿ ಮುತ್ತೂಟ್‌ ಫೈನಾನ್ಸ್‌ ಕಟ್ಟಡದ ಗೋಡೆ ಕೊರೆದಿರುವ ಘಟನೆ ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಬರೋಬ್ಬರಿ 70 ಕೆ.ಜಿ. ಚಿನ್ನಾಭರಣಗಳೊಂದಿಗೆ ಖದೀಮರು ಪರಾರಿಯಾಗಿದ್ದಾರೆ.

Vijaya Karnataka 25 Dec 2019, 1:26 pm
ಬೆಂಗಳೂರು: ಹೆಣ್ಣೂರು ಮುಖ್ಯ ರಸ್ತೆಯ ಕುಕ್‌ಟೌನ್‌ನಲ್ಲಿ ಮುತ್ತೂಟ್‌ ಫೈನಾನ್ಸ್‌ನ ಶಾಖೆಯ ಗೋಡೆಗೆ ಕಿಂಡಿ ಕೊರೆದ ಖದೀಮರು ಬರೋಬ್ಬರಿ 70 ಕೆ.ಜಿ. ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ.
Vijaya Karnataka Web muthoot finance gold loot


ಡಿ.21 ಮತ್ತು 22ರ ರಾತ್ರಿ ಘಟನೆ ನಡೆದಿದೆ. ಕಳ್ಳತನದ ಹಿಂದೆ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್‌ ಮತ್ತು ಆತನ ಸಹಚರರ ಕೈವಾಡ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೈನಾನ್ಸ್‌ ಶಾಖೆ ಹಿಂಭಾಗದಲ್ಲಿರುವ ಶೌಚಗೃಹವನ್ನು ಪ್ರವೇಶಿರುವ ಖದೀಮರು, ಕಬ್ಬಿಣದ ರಾಡ್‌, ಸಲಾಕೆ ಸೇರಿದಂತೆ ಇನ್ನಿತರ ಸಾಧನಗಳನ್ನು ಬಳಸಿ ಗೋಡೆ ಕೊರೆದು ಒಳ ಪ್ರವೇಶಿಸಿದ್ದಾರೆ. ನಂತರ ಶಾಖೆಯಲ್ಲಿನ ಅಲಾರಾಂ ಮತ್ತು ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ಗ್ಯಾಸ್‌ ಕಟ್ಟರ್‌ ಬಳಸಿ ಆಭರಣ ಇರಿಸುವ ಲಾಕರ್‌ನ್ನು ಮುರಿದು ಒಳಗಿದ್ದ 70 ಕೆ.ಜಿ ಚಿನ್ನಾಭರಣಗಳನ್ನು ದೋಚಿ ಕಿಂಡಿ ಮೂಲಕವೇ ಪರಾರಿಯಾಗಿದ್ದಾರೆ.

ಗ್ಯಾಸ್‌ ಕಟ್ಟರ್ ಬಳಸಿ ಗೋಡೆ ಕೊರೆದಿರುವುದು


ಶುಕ್ರವಾರ (ಡಿ.21) ಸಂಜೆ 6.30ಕ್ಕೆ ಕಚೇರಿಗೆ ಬೀಗ ಹಾಕಿಕೊಂಡು ಸಿಬ್ಬಂದಿ ಮನೆಗೆ ಹೋಗಿದ್ದರು. ಸೋಮವಾರ (ಡಿ.23) ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಬ್ಬಂದಿಯೊಬ್ಬರು ಬಾಗಿಲು ತೆಗೆದು ಒಳಗೆ ಪ್ರವೇಶಿಸಿದಾಗ ಕಳವು ನಡೆದಿರುವುದು ಗೊತ್ತಾಗಿದೆ.

ಗ್ಯಾಸ್‌ ಕಟ್ಟರ್ ಬಳಸಿ ಗೋಡೆ ಕೊರೆದಿರುವುದು


ಸಾರ್ವಜನಿಕರು ಅಡ ಇಟ್ಟ ಚಿನ್ನಾಭರಣವನ್ನು ಲಾಕರ್‌ನಲ್ಲಿ ಇರಿಸಲಾಗಿತ್ತು. ಆಭರಣ ದೋಚಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಾಖೆಯ ವ್ಯವಸ್ಥಾಪಕಿ ಸಂಗೀತಾ ಎಂಬುವರು ಪುಲಕೇಶಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ ನಾಪತ್ತೆ
ಮುತ್ತೂಟ್‌ ಫೈನಾನ್ಸ್‌ಗೆಂದು ಪ್ರತ್ಯೇಕವಾಗಿ ಸೆಕ್ಯುರಿಟಿ ಸಿಬ್ಬಂದಿಯನ್ನು ನೇಮಿಸಿಕೊಂಡಿರಲಿಲ್ಲ. ಆದರೆ, ಶಾಖೆ ಇರುವ ವಾಣಿಜ್ಯ ಕಟ್ಟಡಕ್ಕೆ ಸೆಕ್ಯುರಿಟಿ ಸಿಬ್ಬಂದಿ ನೇಮಿಸಲಾಗಿತ್ತು. ಆ ಸೆಕ್ಯುರಿಟಿ ಸಿಬ್ಬಂದಿ ಈಗ ನಾಪತ್ತೆಯಾಗಿದ್ದಾನೆ. ರಜೆ ನೆಪದಲ್ಲಿಸೆಕ್ಯುರಿಟಿ ಗಾರ್ಡ್‌ ನಾಪತ್ತೆಯಾಗಿದ್ದು, ಆತನ ಫೋನ್‌ ಸ್ವಿಚ್ಡ್‌ ಆಫ್‌ ಆಗಿದೆ. ನೇಪಾಳದ ಕಡೆ ಪರಾರಿಯಾಗಿರುವ ಶಂಕೆ ಇದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪುಲಕೇಶಿ ನಗರ ಇನ್ಸ್‌ಪೆಕ್ಟರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ