ಆ್ಯಪ್ನಗರ

ಕಾರು ಹರಿದು ಎಂಟು ವರ್ಷದ ಬಾಲಕಿ ಸಾವು

ಮರದ ನೆರಳಲ್ಲಿ ಮಲಗಿದ್ದ ಎಂಟು ವರ್ಷದ ಬಾಲಕಿ ಮೇಲೆ ಕಾರು ಹರಿದ ಕಾರಣ ಆಕೆ ಮೃತಪಟ್ಟಿದ್ದಾಳೆ.

ವಿಕ ಸುದ್ದಿಲೋಕ 25 Apr 2016, 4:26 am
-ಅಜ್ಜನ ಅಂಗಡಿಗೆ ಬಂದವಳು ಮರದಡಿ ಮಲಗಿದ್ದಳು-
Vijaya Karnataka Web car death eight year old girl
ಕಾರು ಹರಿದು ಎಂಟು ವರ್ಷದ ಬಾಲಕಿ ಸಾವು


ಬೆಂಗಳೂರು: ಮರದ ನೆರಳಲ್ಲಿ ಮಲಗಿದ್ದ ಎಂಟು ವರ್ಷದ ಬಾಲಕಿ ಮೇಲೆ ಕಾರು ಹರಿದ ಕಾರಣ ಆಕೆ ಮೃತಪಟ್ಟಿದ್ದಾಳೆ.

ಯಲಹಂಕ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಎಂಟು ವರ್ಷದ ಅಮೂಲ್ಯ ಮೃತ ಬಾಲಕಿ. ಯಲಹಂಕದ ಅನಂತಪುರ ಡಿಯೊಮಾರ್ವೆಲ್‌ ಲೇಔಟ್‌ ಮುಖ್ಯದ್ವಾರದಲ್ಲಿರುವ ಅಂಗಡಿ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನನ್ನು ಬಂಧಿಸಿರುವ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಬೇಸಿಗೆ ರಜೆಗೆ ಬಂದಾಗ ದುರಂತ:

ಅಮೂಲ್ಯ ಬಳ್ಳಾರಿ ಜಿಲ್ಲೆ ಕೂಡ್ಲಗಿಯ ಖಾನಾ ಹೊಸಹಳ್ಳಿವಳು. ಅಲ್ಲಿಯೇ 2ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಆಕೆಯ ತಂದೆ ಮಂಜುನಾಥ್‌ ಹಾಗೂ ತಾಯಿ ಕೂಲಿ ಕೆಲಸ ಮಾಡುತ್ತಿದ್ದರು. ಮಂಜುನಾಥ್‌ ಅವರ ತಂದೆ ನಾಗಪ್ಪ ಕಳೆದ 18 ವರ್ಷಗಳಿಂದ ಯಲಹಂಕದಲ್ಲಿ ವಾಸಿಸುತ್ತಿದ್ದು, ಚಿಲ್ಲರೆ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಹೀಗಾಗಿ ಬೇಸಿಗೆ ರಜೆಯ ಸಮಯ ಕಳೆಯಲು ಅಮೂಲ್ಯ ಇತ್ತೀಚೆಗೆ ಬೆಂಗಳೂರಿನಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಭಾನುವಾರ ನಾಗಪ್ಪ ಅವರು ಅಂಗಡಿಗೆ ಬಂದಿದ್ದರು. ಈ ವೇಳೆ ಅಮೂಲ್ಯ ಸಹ ಅಜ್ಜನ ಜತೆ ಅಂಗಡಿಗೆ ಬಂದು ಅಲ್ಲಿಯೇ ಆಟವಾಡುತ್ತಿದ್ದಳು. ಮಧ್ಯಾಹ್ನ 12.30ರ ವೇಳೆಗೆ ಸುಸ್ತಾಗಿ ಅಂಗಡಿಯ ಪಕ್ಕದಲ್ಲಿದ್ದ ಮರದಡಿ ಮಲಗಿದ್ದಳು.

ಇದೇ ವೇಳೆ ಯಲಹಂಕ ಹಳೆ ಬಡಾವಣೆ ನಿವಾಸಿ, ವಿದ್ಯಾರ್ಥಿ ವೈ.ಎನ್‌.ನರಸಿಂಹ (23) ಹಾಗೂ ಆತನ ಸ್ನೇಹಿತ ಮಹೀಂದ್ರ ಗ್ಸೈಲೋ ವಾಹನ (ಕೆಎ 50 ಎಂ 3722)ದಲ್ಲಿ ನಾಗಪ್ಪ ಅವರ ಅಂಗಡಿಗೆ ಬಂದು ಸಿಗರೇಟ್‌ ಸೇದಲು ಬಂದಿದ್ದರು. ಈ ವೇಳೆ ಅವರು ಕಾರನ್ನು ಅಮೂಲ್ಯ ಮಲಗಿದ್ದ ಮರದ ಕೆಳಗೆ ನಿಲ್ಲಿಸಿದ್ದರು. ಸಿಗರೇಟ್‌ ಸೇದಿ ಹಿಂದಿರುಗುವ ವೇಳೆ ಬಾಲಕಿ ಮಲಗಿರುವುದನ್ನು ಗಮನಿಸದ ನರಸಿಂಹ ಅವರು ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರಿನ ಚಕ್ರ ಬಾಲಕಿ ಮೇಲೆ ಹರಿದಿದೆ. ತಕ್ಷಣ ಗಾಯಗೊಂಡಿದ್ದ ಬಾಲಕಿಯನ್ನು ನರಸಿಂಹ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ.

‘‘ಅಪಘಾತ ಉದ್ದೇಶಪೂರ್ವಕವಾಗಿ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಯು ಮದ್ಯ ಸೇವನೆ ಮಾಡಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಅಮೂಲ್ಯ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಒಪ್ಪಿಸಲಾಗುವುದು,’’ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ