ಆ್ಯಪ್ನಗರ

ಸಪ್ರೈಸ್‌ ಗಿಫ್ಟ್‌ ಕೊಡಲೆಂದು ಖರೀದಿಸಿದ್ದ ಸರ ಅರ್ಧ ಗಂಟೆಯಲ್ಲೇ ಲೂಟಿ

ಎಸ್‌ಎಸ್‌ಎಲ್‌ಸಿ ಪಾಸಾಗಿ ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಮೊದಲ ಗಿಫ್ಟ್‌ ಕೊಡಲೆಂದು ಸರಕಾರಿ ಶಿಕ್ಷಕಿಯೊಬ್ಬರು ಖರೀದಿಸಿದ್ದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದ ಮಹಿಳೆಯರು ಕದ್ದುಕೊಂಡು ಹೋದ ಘಟನೆ ಭಾನುವಾರ ನಡೆದಿದೆ.

Vijaya Karnataka 10 Aug 2018, 9:26 am
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪಾಸಾಗಿ ಕಾಲೇಜಿಗೆ ತೆರಳುತ್ತಿದ್ದ ಮಗಳಿಗೆ ಮೊದಲ ಗಿಫ್ಟ್‌ ಕೊಡಲೆಂದು ಸರಕಾರಿ ಶಿಕ್ಷಕಿಯೊಬ್ಬರು ಖರೀದಿಸಿದ್ದ ಒಂದು ಲಕ್ಷ ಮೌಲ್ಯದ ಚಿನ್ನದ ಸರವನ್ನು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದ ಮಹಿಳೆಯರು ಕದ್ದುಕೊಂಡು ಹೋದ ಘಟನೆ ಭಾನುವಾರ ನಡೆದಿದೆ.
Vijaya Karnataka Web chain


ತನ್ನ ಸಹದ್ಯೋಗಿ ಪತ್ನಿಗೆ ಸೀಟು ಬಿಟ್ಟು ಕೊಡಲು ಎದ್ದು ನಿಂತಾಗ ಕಳ್ಳಿಯರು ಕೈಚಳಕ ತೋರಿಸಿದ್ದಾರೆ. ಬನ್ನೇರುಘಟ್ಟ ರಸ್ತೆಯ ನಿವಾಸಿ ಬಿ.ಎಸ್‌.ಶಶಿಕಲಾ ಸರ ಕಳೆದುಕೊಂಡವರು. ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ ತಮ್ಮ ಮಗಳಿಗೆ ಮೊಟ್ಟ ಮೊದಲು ಗಿಫ್ಟ್‌ ಆಗಿ ಕೊಡಲು ಲಕ್ಷ ರೂ ಮೌಲ್ಯದ ಚಿನ್ನದ ಸರ ಖರೀದಿಸಿ ಮಗಳಿಗೆ ಸಪ್ರೈಸ್‌ ಕೊಡಬೇಕೆಂಬ ಸಂಭ್ರಮದಲ್ಲಿ ಮನೆಗೆ ವಾಪಸ್ಸಾಗಲು ಬಸ್ಸು ಹತ್ತಿದ್ದರು. ಅದೇ ಬಸ್ಸಿನಲ್ಲಿ ಕಳ್ಳತನ ಆಗಿದೆ.

ಪತಿ ರಾಮಮೂರ್ತಿ ಅವರ ಜತೆ ಶಿವಾಜಿನಗರದ ಚಿನ್ನಾಭರಣ ಮಳಿಗೆಯಲ್ಲಿ ಸರ ಖರೀದಿಸಿದ್ದರು. ನಂತರ ಬಿಎಂಟಿಸಿ ಬಸ್‌ ಹಿಡಿದು ಮನೆ ಕಡೆ ಹೊರಟಿದ್ದರು. ಪತಿ ಬಸ್ಸಿನ ಹಿಂಬಾಗದಲ್ಲಿ ಕುಳಿತಿದ್ದರೆ ಮುಂದೆ ಪತ್ನಿ ಕುಳಿತಿದ್ದರು. ಬಸ್ಸು ಮೈಕೋ ಲೇಔಟ್‌ ಸಮೀಪ ಬಂದಾಗ ಶಶಿಕಲಾ ಅವರ ಸಹೋದ್ಯೋಗಿ ಒಬ್ಬರು ಗರ್ಭಿಣಿ ಪತ್ನಿ ಜತೆ ಬಸ್ಸು ಹತ್ತಿದ್ದರು. ಗರ್ಭಿಣಿಗೆ ಸೀಟು ಬಿಟ್ಟು ಕೊಟ್ಟ ಶಶಿಕಲಾ ತಾವು ನಿಂತುಕೊಂಡಿದ್ದರು. ಜೆ.ಡಿ.ಮರ ನಿಲ್ದಾಣದಲ್ಲಿ ಮೂವರು ಮಹಿಳೆಯರು ಬಸ್ಸು ಹತ್ತಿದ್ದರು . ಒಬ್ಬಾಕೆ ಮುಂದಿನ ಬಾಗಿಲಿನಲ್ಲಿ ಹತ್ತಿದರೆ ಉಳಿದಿಬ್ಬರು ಮಧ್ಯದ ಬಾಗಿಲಿನಿಂದ ಹತ್ತಿದ್ದರು. ಇವರೇ ಬ್ಯಾಗಿನಲ್ಲಿದ್ದ ಚಿನ್ನದ ಸರ ಕದ್ದಿದ್ದಾರೆ ಎಂದು ಶಶಿಕಲಾ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಲೆ ಸುತ್ತುತ್ತಿದೆ


ಜೆ.ಡಿ.ಮರದಲ್ಲಿ ಬಸ್ಸು ಹತ್ತಿದ ಮಹಿಳೆ ನನ್ನ ಹಿಂದೆ ನಿಂತಿದ್ದಳು. ಆಗಾಗ ನನ್ನ ಮೇಲೆ ಒರಗಿ ಬೀಳುತ್ತಿದ್ದಳು. ನಾನು ಹಿಂದೆ ತಿರುಗಿ ಸರಿಯಾಗಿ ನಿಂತುಕೊಳ್ಳುವಂತೆ ಹೇಳಿದ್ದೆ. ಆಗ ಆಕೆ, ತನಗೆ ತಲೆ ಸುತ್ತುತ್ತಿದೆ ಎಂದು ಹೇಳಿದ್ದಳು. ಆ ವೇಳೆ ನಾನು ಬಸ್ಸಿನಲ್ಲಿ ಕುಳಿತಿದ್ದ ಕಾಲೇಜು ಹುಡುಗಿಯರಿಗೆ ಸೀಟು ಬಿಟ್ಟು ಕೊಡುವಂತೆ ವಿನಂತಿಸಿ ಸೀಟು ಕೂಡ ಕೊಡಿಸಿದ್ದೆ. ಆದರೆ, ಆ ಮಹಿಳೆ ಕುಳಿತುಕೊಳ್ಳಲು ನಿರಾಕರಿಸಿದಳು. ಒಂದು ಬಾರಿ ಆಕೆ ತನ್ನ ವೇಲನ್ನು ನನ್ನ ಬ್ಯಾಗಿನ ಮೇಲೆ ಹಾಕಿದ್ದಳು. ಆ ವೇಲನ್ನು ಹಿಂದಕ್ಕೆ ಎಳೆದುಕೊಳ್ಳುವ ನೆಪದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಬ್ಯಾಗಿನ ಒಳಗಿದ್ದ ಬಾಕ್ಸ್‌ನಿಂದ ಚಿನ್ನದ ಸರ ಅಪಹರಿಸಿ ಬಾಕ್ಸನ್ನು ಬ್ಯಾಗಿನಲ್ಲೇ ಬಿಟ್ಟಿದ್ದಾಳೆ. ಬಿಳೇಕಳ್ಳಿ ನಿಲ್ದಾಣದಲ್ಲಿ ಸರ ಕದ್ದ ಮಹಿಳೆ ಇಳಿದುಕೊಂಡಿದ್ದರೆ, ಅರಕೆರೆ ಬಳಿ ಉಳಿದಿಬ್ಬರು ಮಹಿಳೆ ಇಳಿದು ಹೋಗಿದ್ದನ್ನು ನಾನು ಗಮನಿಸಿದ್ದೇನೆ ಎಂದು ಶಶಿಕಲಾ ದೂರಿನಲ್ಲಿ ವಿವರಿಸಿದ್ದಾರೆ.

ನನ್ನ ಮಗಳಿಗೆ ಇದುವರೆಗೂ ಒಂದೂ ಗಿಫ್ಟ್‌ ನೀಡಿರಲಿಲ್ಲ. ಇದುವರೆಗೂ ನನ್ನ ಸಂಬಳದಲ್ಲಿ ಉಳಿತಾಯ ಮಾಡಿದ್ದನ್ನೆಲ್ಲ ಸೇರಿಸಿ ಸರ ತೆಗೆದುಕೊಂಡಿದ್ದೆ. ಸರ ಖರೀದಿಸಿ ಅರ್ಧ ಗಂಟೆಯೂ ಆ ಖುಷಿ ಉಳಿಯಲಿಲ್ಲ. ಅಷ್ಟರೊಳಗೇ ಕಳ್ಳಿ ಕೈಚಳಕ ತೋರಿಸಿದ್ದಾಳೆ ಎಂದು ಶಶಿಕಲಾ ಸಂಕಟ ತೋಡಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ಬಿಳೇಕಳ್ಳಿ ಮತ್ತು ಅರಕೆರೆ ನಿಲ್ದಾಣಗಳಲ್ಲಿ ಇರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ