ಆ್ಯಪ್ನಗರ

ಅಮಿತಾಬ್ ಬಚ್ಚನ್ ಟಿವಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಹೆಸರಲ್ಲಿ ಭಾರೀ ವಂಚನೆ!

ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ. ಅದೂ ಕೂಡಾ ಮೋಸ ಮಾಡೋದಕ್ಕೆ ಹೊಸ ಹೊಸ ದಾರಿಗಳನ್ನು ಹುಡುಕಾಡ್ತಾನೇ ಇರ್ತಾರೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್‌ಪತಿ ಹೆಸರು ಹೇಳಿಕೊಂಡು ನಡೆಸಿರುವ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

Bangalore Mirror Bureau 9 Sep 2019, 10:48 am
ಬೆಂಗಳೂರು: ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಆಯೋಜಕರೆಂದು ಹೇಳಿಕೊಂಡು ಯಾರಾದ್ರೂ ದೂರವಾಣಿ ಕರೆ ಮಾಡಿದರೆ ಏನು ಮಾಡ್ತೀರಾ? ತುಂಬಾ ಖುಷಿಯಾಗುತ್ತೆ ಅಲ್ವಾ? ಆದರೆ, ಇಲ್ಲೊಬ್ಬ ಮಹಿಳೆ, ಮೋಸ ಹೋಗಿದ್ದಾರೆ. ಆಕೆಯ ಹೆಸರು ಪಾರ್ವತಿ. ವೃತ್ತಿಯಲ್ಲಿ ಬ್ಯೂಟೀಷಿಯನ್. ಪಶ್ಚಿಮ ಬಂಗಾಳ ಮೂಲದವರಾದ್ರೂ, ನೆಲೆಸಿರೋದು ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ.
Vijaya Karnataka Web amitab kaun banega crorepati


ವಿಜಯ್ ಕುಮಾರ್ ಎಂಬಾತ, ತಾನು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಪ್ರತಿನಿಧಿ ಎಂದು ಹೇಳಿಕೊಂಡು ಪಾರ್ವತಿ ಅವರಿಗೆ ದೂರವಾಣಿ ಕರೆ ಮಾಡಿದ. ಪಾರ್ವತಿ ಅವರ ಮೊಬೈಲ್ ನಂಬರ್ ಲಕ್ಕಿ ಡ್ರಾಗೆ ಆಯ್ಕೆಯಾಗಿದೆ, 25 ಲಕ್ಷ ರೂಪಾಯಿ ಬಹುಮಾನ ಸಿಗುತ್ತೆ ಎಂದು ನಂಬಿಸಿದ. ಬಳಿಕ ರಾಣಾ ಪ್ರತಾಪ್ ಸಿಂಗ್ ಎಂಬಾತ ನಿಮಗೆ ಬಹುಮಾನದ ಹಣ ಪಡೆದುಕೊಳ್ಳಲು ನೆರವಾಗ್ತಾರೆ ಎಂದು ಅವರ ಸಂಪರ್ಕ ಸಂಖ್ಯೆ ನೀಡಿದ.

ಬಹುಮಾನದ ಆಸೆಗೆ ಬಿದ್ದ ಪಾರ್ವತಿ, ಕೂಡಲೇ ರಾಣಾ ಪ್ರತಾಪ್ ಸಿಂಗ್ ನಂಬರ್‌ಗೆ ಕರೆ ಮಾಡಿದರು. ಆತ ಪಾರ್ವತಿಗೆ ನೋಂದಣಿ ಮಾಡಿಕೊಳ್ಳಲು 50 ಸಾವಿರ ರೂಪಾಯಿ ಹಣ ಕಟ್ಟಿ ಎಂದು ತನ್ನ ಅಕೌಂಟ್ ನಂಬರ್ ಕೊಟ್ಟ. ಮರುಮಾತಿಲ್ಲದೆ ಪಾರ್ವತಿ ಅವರು ಆತನ ಎಸ್‌ಬಿಐ ಅಕೌಂಟ್ ನಂಬರ್‌ಗೆ ಹಣ ವರ್ಗಾವಣೆ ಮಾಡೇಬಿಟ್ಟರು. ನಂತರ ಸೆಪ್ಟಂಬರ್ 2ನೇ ತಾರೀಖಿನಂದು ಮತ್ತೆ ಪಾರ್ವತಿ ಅವರಿಗೆ ಕರೆ ಮಾಡಿದ ರಾಣಾ ಪ್ರತಾಪ್, ಜಿಎಸ್‌ಟಿ ಮೊತ್ತ 23 ಸಾವಿರ ರೂಪಾಯಿ ವರ್ಗಾವಣೆ ಮಾಡುವಂತೆ ಆದೇಶ ಕೊಟ್ಟ. ಪಾರ್ವತಿಯವರು ಅದನ್ನೂ ಚಾಚೂತಪ್ಪದೆ ಪಾಲಿಸಿದರು. ನಿಮ್ಮ ಅಕೌಂಟ್ ನಂಬರ್‌ಗೆ ಬಹುಮಾನದ ಹಣ ಬರುತ್ತೆ, ಕಾಯುತ್ತಾ ಇರಿ ಎಂದು ರಾಣಾ ಪ್ರತಾಪ್ ಹೇಳಿದ್ದಾನೆ, ಪಾರ್ವತಿ ಕಾಯುತ್ತಲೇ ಇದ್ದಾರೆ. ಆದ್ರೆ, 25 ಲಕ್ಷವಿರಲಿ, ಬಿಡಿಗಾಸೂ ಆಕೆಯ ಅಕೌಂಟ್‌ಗೆ ಬಂದಿಲ್ಲ.

ಇದೀಗ ಪಾರ್ವತಿ ಅವರಿಗೆ ತಾವು ಮೋಸ ಹೋಗಿರೋದು ಅರಿವಿಗೆ ಬರುತ್ತಿದೆ. ನಯವಾಗಿ ಮಾತನಾಡಿದರು ಅನ್ನೋ ಕಾರಣಕ್ಕೆ ದಿಲ್ಲಿ ಮೂಲದ ವಿಜಯ್ ಕುಮಾರ್ ಹಾಗೂ ಕೋಲ್ಕತ್ತಾ ಮೂಲದ ರಾಣಾ ಪ್ರತಾಪ್ ಸಿಂಗ್ ಮಾತುಗಳನ್ನು ನಂಬಿ ಕೆಟ್ಟೆ ಎನ್ನುತ್ತಿರುವ ಪಾರ್ವತಿ, ನಾನು ಆಪತ್ಕಾಲಕ್ಕೆ ಉಳಿಸಿ ಇಟ್ಟಿದ್ದ ಹಣವೆಲ್ಲಾ ಕಳೆದುಕೊಂಡೆ ಎಂದು ಗೋಳಿಡುತ್ತಿದ್ದಾರೆ. ಜಿಯೋ ಸಂಸ್ಥೆ ಕಾರ್ಯಕ್ರಮದ ಸಹಭಾಗಿತ್ವ ಹೊಂದಿರುವ ಕಾರಣ ನಿಮ್ಮ ನಂಬರ್ ಆಯ್ಕೆಯಾಗಿದೆ ಎಂದು ನಂಬಿಸಿದ್ದ ದುಷ್ಟರು, ನಗದು ಬಹುಮಾನದ ಹೆಸರಲ್ಲಿ 73 ಸಾವಿರ ರೂ. ದೋಚಿದ್ದಾರೆ. ಇದೀಗ ಪೊಲೀಸರ ಮೊರೆ ಹೋಗಿದ್ದು, ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಅವರ ಬ್ಯಾಂಕ್ ಅಕೌಂಟ್ ನಂಬರ್ ಮೂಲಕ ವಿವರವನ್ನು ಪತ್ತೆಹಚ್ಚಲಾಗುವುದು ಎಂದಿದ್ಧಾರೆ. ಸಾರ್ವಜನಿಕರು ದೂರವಾಣಿ ಕರೆಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು, ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕರೆ ಕೊಟ್ಟಿದ್ಧಾರೆ. ಸೆಕ್ಷನ್ 420ರ ಅಡಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹಿಂದಿ ಮನರಂಜನಾ ವಾಹಿನಿ ಸೋನಿ ಟಿವಿಯಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ ಪ್ರಸಾರವಾಗುತ್ತೆ. ಈ ಕಾರ್ಯಕ್ರಮದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಯಾವುದೇ ಕಾರಣಕ್ಕೂ ದೂರವಾಣಿ ಕರೆಗಳನ್ನು ನಂಬಬೇಡಿ, ಹಣ ನೀಡಬೇಡಿ ಎಂದು ಸೂಚನೆ ನೀಡಲಾಗುತ್ತೆ.

ಪ್ರತಿಷ್ಠಿತ ಸ್ಟಾರ್‌ ಹೊಟೇಲ್‌ನಲ್ಲಿ ಅಕ್ರಮ ಡಿಸ್ಕೋಥೆಕ್‌: ಸಿಸಿಬಿ ಪೊಲೀಸರ ದಾಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ