ಆ್ಯಪ್ನಗರ

ಕುತ್ತಿಗೆ ಕುಯ್ದುಕೊಂಡು ದಂಪತಿ ಆತ್ಮಹತ್ಯೆ ಯತ್ನ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಆರ್ಥಿಕ ಸಂಕಷ್ಟದ ಹಿನ್ನೆಲೆ ಕುತ್ತಿಗೆ ಕುಯ್ದುಕೊಂಡು ದಂಪತಿ ಆತ್ಮಹತ್ಯೆ ಯತ್ನ. ಕೂಡುಕುಟುಂಬದಿಂದ ಇತ್ತೀಚೆಗಷ್ಟೇ ಪ್ರತ್ಯೇಕವಾಗಿದ್ದ ದಂಪತಿ ಮನೆ ಮಾಲೀಕರು, ಪೊಲೀಸರ ಸಮಯಪ್ರಜ್ಞೆಯಿಂದ ಪಾರು.

Vijaya Karnataka Web 5 Dec 2019, 10:47 am
ಬೆಂಗಳೂರು: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ಮನಸ್ತಾಪದಿಂದ ಬೇಸತ್ತ ದಂಪತಿ, ಗಂಟಲು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದಾಗಿ ಇಬ್ಬರಿಗೂ ಚಿಕಿತ್ಸೆ ದೊರೆತು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Vijaya Karnataka Web suicide


ಗಿರಿನಗರ ಠಾಣೆ ವ್ಯಾಪ್ತಿಯಲ್ಲಿರುವ ಶ್ರೀನಿವಾಸನಗರದ 2ನೇ ಹಂತ, 16ನೇ ಮುಖ್ಯ ರಸ್ತೆ ಮಂಜುನಾಥ ಮೈದಾನದ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮೂಲದ ಬಾಲಾಜಿ(31), ಚಿಕ್ಕಮಗಳೂರು ಮೂಲದ ಸೌಮ್ಯಾ(22) ಆತ್ಮಹತ್ಯೆಗೆ ಯತ್ನಿಸಿದವರು.

ಮನೆ ಮಾಲೀಕರಿಂದ ವಿಷಯ ತಿಳಿದ ಪೊಲೀಸರು, ತಕ್ಷಣ ಸ್ಥಳಕ್ಕೆ ಧಾವಿಸಿ ದಂಪತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಸದ್ಯಕ್ಕೆ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಮುಂದಿನ 48 ಗಂಟೆಗಳ ಕಾಲ ಇಬ್ಬರನ್ನೂ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗುವುದು ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟೆಕ್ಕಿಗಳ ಪ್ರೀತಿಗೆ ಮನೆಯವರ ಅಡ್ಡಿ, ನೇಣು ಬಿಗಿದು ಸಾವಿಗೆ ಶರಣಾದ ಪ್ರೇಮಿಗಳು

ನಡೆದದ್ದೇನು?
ಖಾಸಗಿ ಮೊಬೈಲ್‌ ಕಂಪನಿಯಲ್ಲಿ ಕೆಲಸ ಮಾಡುವ ಬಾಲಾಜಿ ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಸೌಮ್ಯಾ ಇಬ್ಬರೂ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಗಿರಿನಗರದ ಮುನೇಶ್ವರ ಬ್ಲಾಕ್‌ನಲ್ಲಿರುವ ಬಾಲಾಜಿ, ಪೋಷಕರ ಜತೆಗೇ ನೆಲೆಸಿದ್ದರು. ದಂಪತಿ ತಮ್ಮ ಆದಾಯದಲ್ಲಿಸ್ವಲ್ಪ ಭಾಗವನ್ನು ಮನೆಗೆ ನೀಡುತ್ತಿದ್ದರು. ಇತ್ತೀಚೆಗೆ ಇಬ್ಬರ ಕೆಲಸದಲ್ಲೂ ವ್ಯತ್ಯಾಸವಾಗಿ ಗಳಿಕೆ ಕಡಿಮೆ ಆಗಿತ್ತು. ಆರ್ಥಿಕ ಸಂಕಷ್ಟ ಕೌಟುಂಬಿಕ ಮನಸ್ತಾಪಕ್ಕೂ ಕಾರಣವಾಗುತ್ತಿತ್ತು. ಇದರಿಂದ ಎರಡು ತಿಂಗಳ ಹಿಂದಷ್ಟೇ ಪ್ರತ್ಯೇಕಗೊಂಡು ಶ್ರೀನಿವಾಸನಗರದಲ್ಲಿ ದಂಪತಿ ಬಾಡಿಗೆ ಮನೆ ಮಾಡಿದ್ದರು. ಇದೇ ಮನೆಯಲ್ಲಿಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವರ್ಗಾವಣೆಯಲ್ಲಿನ ತಾರತಮ್ಯ ಸರಿಪಡಿಸದಿದ್ದಲ್ಲಿ ಆತ್ಮಹತ್ಯೆ

ಕರೆ ಮಾಡಿ ತಿಳಿಸಿದ್ದರು:
ತಮ್ಮ ಪರಿಸ್ಥಿತಿಗೆ ಇಬ್ಬರೂ ನೊಂದುಕೊಂಡಿದ್ದರು. ಕೊನೆಗೆ ಇಬ್ಬರೂ ಮಾತನಾಡಿಕೊಂಡು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಆತ್ಮಹತ್ಯೆಗೂ ಮೊದಲು ಮನೆಯವರಿಗೆ ಮಾಹಿತಿ ನೀಡಲು ತೀರ್ಮಾನಿಸಿದರು. ಸೌಮ್ಯಾ ತನ್ನ ಸಹೋದರನಿಗೆ ಕರೆ ಮಾಡಿದರೆ, ಬಾಲಾಜಿ ತನ್ನ ಸಹೋದರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ಅವರ ಸಾಂತ್ವನಕ್ಕೂ ಕಾಯದೇ ಕರೆ ಸ್ಥಗಿತಗೊಳಿಸಿದ್ದರು. ಬಳಿಕ ಸೌಮ್ಯಾ ಸಹೋದರ ಹಾಗೂ ಬಾಲಾಜಿ ಸಹೋದರಿ ಇಬ್ಬರೂ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆ ಮಾಲೀಕರು ಮೇಲಿನ ಮಹಡಿಗೆ ಹೋಗಿ ನೋಡುವಷ್ಟರಲ್ಲಿ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಪತಿ ಕಿರುಕುಳ, ಪತ್ನಿ ನೇಣಿಗೆ ಶರಣು

ತಕ್ಷಣ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಲಾಯಿತು. ನಿಯಂತ್ರಣ ಕೊಠಡಿಯಿಂದ ಮಾಹಿತಿ ಪಡೆದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ದಂಪತಿ ಇನ್ನೂ ಒದ್ದಾಡುತ್ತಿದ್ದರು. ಪೊಲೀಸರು ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಮನೆ ಮಾಲೀಕರು ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ದಂಪತಿಗೆ ಸೂಕ್ತ ಸಮಯದಲ್ಲಿಚಿಕಿತ್ಸೆ ಸಿಕ್ಕಿದ್ದು, ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರೇಮಿ ಕರೆ ಸ್ವೀಕರಿಸದ್ದಕ್ಕೆ ಯುವತಿ ಆತ್ಮಹತ್ಯೆ, ವಿಚಾರ ತಿಳಿದು ನೇಣಿಗೆ ಶರಣಾದ ಪ್ರಿಯಕರ

''ದಂಪತಿ ಮಾತನಾಡುವ ಸ್ಥಿತಿಯಲ್ಲಿಇಲ್ಲ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದಂಪತಿ ಮಾತನಾಡುವಂತಾದ ಬಳಿಕ ಅವರ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುವುದು,'' ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ