ಆ್ಯಪ್ನಗರ

ಬೆಂಗಳೂರಿನಲ್ಲಿ ಬಾಲಕನ ಕಿಡ್ನಾಪ್‌ ಮಾಡಿ 15 ಲಕ್ಷ ರೂ. ಸುಲಿಗೆ: ಕಾಲೇಜು ಫೀಸ್‌ ಕಟ್ಟಲು ಕೃತ್ಯ ಎಸಗಿದ ಬಿಕಾಂ ವಿದ್ಯಾರ್ಥಿ

ಮಾನ್ಯತಾ ಲೇಔಟ್‌ನ ನಿವಾಸಿ ಖಾಸಗಿ ಕಂಪನಿ ಮ್ಯಾನೇಜರ್‌ ರಮೇಶ್‌ ಬಾಬು ಅವರ 14 ವರ್ಷದ ಮಗ ಭವೇಶ್‌ ತಳಮಹಡಿಯ ಕೊಠಡಿಯಲ್ಲಿ ಒಬ್ಬನೇ ಮಲಗುತ್ತಿದ್ದ. ಸೆ.2ರಂದು ಮುಂಜಾನೆ ಇಬ್ಬರು ಮಾಸ್ಕ್‌ ಧರಿಸಿದ್ದ ಯುವಕರು ಭವೇಶ್‌ ಕೊಠಡಿ ಬಾಗಿಲು ಬಡಿದಿದ್ದರು. ಪೋಷಕರಿರಬಹುದು ಎಂದು ಭವೇಶ್‌ ಬಾಗಿಲು ತೆಗೆಯುತ್ತಿದ್ದಂತೆಯೇ ಕತ್ತಿನ ಮೇಲೆ ಚಾಕು ಇಟ್ಟು ಕೊಲ್ಲುವ ಬೆದರಿಕೆ ಒಡ್ಡಿದ್ದರು. ಭವೇಶ್‌ ತಂದೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಪರಾರಿಯಾಗಿದ್ದರು.

Vijaya Karnataka 28 Sep 2022, 7:00 am
ಬೆಂಗಳೂರು: ಕಾಲೇಜು ಶುಲ್ಕ ಪಾವತಿಗೆ ಹಣ ಹೊಂದಿಸಲು ಸಿನಿಮೀಯ ಮಾದರಿಯಲ್ಲಿ ಬಾಲಕನನ್ನು ಕಿಡ್ನ್ಯಾಪ್‌ ಮಾಡಿ 15 ಲಕ್ಷ ರೂ. ಸುಲಿಗೆ ಮಾಡಿದ್ದ ಬಿಕಾಂ ವಿದ್ಯಾರ್ಥಿ, ಆತನ ಸ್ನೇಹಿತನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web boy kidnaps


ಗುಡಿಬಂಡೆ ತಾಲೂಕಿನ ಎಂ. ಸುನಿಲ್‌ಕುಮಾರ್‌ (23), ಚಿಕ್ಕಬಳ್ಳಾಪುರದ ಮಂಡಿಕಲ್‌ನ ವೈ.ವಿ. ನಾಗೇಶ್‌ ಬಂಧಿತರು. ಮಾನ್ಯತಾ ಲೇಔಟ್‌ನ ನಿವಾಸಿ ಖಾಸಗಿ ಕಂಪನಿ ಮ್ಯಾನೇಜರ್‌ ರಮೇಶ್‌ ಬಾಬು ಅವರ 14 ವರ್ಷದ ಮಗ ಭವೇಶ್‌ ತಳಮಹಡಿಯ ಕೊಠಡಿಯಲ್ಲಿ ಒಬ್ಬನೇ ಮಲಗುತ್ತಿದ್ದ. ಸೆ.2ರಂದು ಮುಂಜಾನೆ ಇಬ್ಬರು ಮಾಸ್ಕ್‌ ಧರಿಸಿದ್ದ ಯುವಕರು ಭವೇಶ್‌ ಕೊಠಡಿ ಬಾಗಿಲು ಬಡಿದಿದ್ದರು. ಪೋಷಕರಿರಬಹುದು ಎಂದು ಭವೇಶ್‌ ಬಾಗಿಲು ತೆಗೆಯುತ್ತಿದ್ದಂತೆಯೇ ಕತ್ತಿನ ಮೇಲೆ ಚಾಕು ಇಟ್ಟು ಕೊಲ್ಲುವ ಬೆದರಿಕೆ ಒಡ್ಡಿದ್ದರು. ಭವೇಶ್‌ ತಂದೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಪರಾರಿಯಾಗಿದ್ದರು.

Bhatkal Kidnapping Case: ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್..! ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಸುಖಾಂತ್ಯ
ಮಾರನೇ ದಿನ ಬೆಳಗ್ಗೆ ಮಗ ಭವೇಶ್‌ ಕಾಣದಿದ್ದಕ್ಕೆ ರಮೇಶ್‌ ಸೇರಿ ಇಡೀ ಕುಟುಂಬ ಕಂಗಾಲಾಗಿತ್ತು. 10 ಗಂಟೆ ಸುಮಾರಿಗೆ ಭವೇಶ್‌ ಮೊಬೈಲ್‌ನಿಂದ ಅವರ ತಂದೆ ರಮೇಶ್‌ಗೆ ಕರೆ ಮಾಡಿಸಿದ್ದ ಅಪಹರಣಕಾರರು 15 ಲಕ್ಷ ರೂ. ತಂದು ಕೊಡದಿದ್ದರೆ ಮಗನನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದರು. ಇದರಿಂದ ಹೆದರಿದ ರಮೇಶ್‌, 15 ಲಕ್ಷ ರೂ.ಗಳನ್ನು ಬ್ಯಾಗ್‌ನಲ್ಲಿಟ್ಟು ದುಷ್ಕರ್ಮಿಗಳ ಸೂಚನೆಯಂತೆ ನೆಲಮಂಗಲ ಸಮೀಪದ ರೈಲ್ವೆ ಟ್ರ್ಯಾಕ್‌ ಸಮೀಪ ಇಟ್ಟು ಬಂದಿದ್ದರು. ಕೆಲ ಸಮಯದ ಬಳಿಕ ಅದೇ ಸ್ಥಳಕ್ಕೆ ಬಂದಿದ್ದ ಆರೋಪಿಗಳು ಹಣದ ಬ್ಯಾಗ್‌ ಪಡೆದು ಭವೇಶ್‌ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಕ್ಕಿ ಬಿದ್ದ ಕಿಡ್ನ್ಯಾಪರ್ಸ್‌:

ಮಗ ಜೀವಂತವಾಗಿ ಬಂದ ಬಳಿಕ ನೆಮ್ಮದಿಯ ನಿಟ್ಟುಸಿರು ಬಿಟ್ಟ ರಮೇಶ್‌ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಅನ್ವಯ ತನಿಖೆ ನಡೆಸುತ್ತಿದ್ದ ಎಸಿಪಿ ಟಿ. ರಂಗಪ್ಪ, ಇನ್ಸ್‌ಪೆಕ್ಟರ್‌ ಕೆ.ಟಿ ನಾಗರಾಜು ನೇತೃತ್ವದ ತಂಡ, ಕಿಡ್ನ್ಯಾಪ್‌ ಮಾಡಿದ್ದ ಮನೆಯ ಸಮೀಪದ ಸಿಸಿಟಿವಿ ದೃಶ್ಯಾವಳಿ, ಮೊಬೈಲ್‌ ಲೊಕೇಶನ್‌ ಮತ್ತಿತರ ಮಾಹಿತಿ ಆಧರಿಸಿ ಯಲಹಂಕದಲ್ಲಿ ವಾಸವಿದ್ದ ಸುನಿಲ್‌ ಕುಮಾರ್‌ ಹಾಗೂ ನಾಗೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್‌ ಕುರಿತು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳು ಕದ್ದಿದ್ದ ಒಂದು ಕಾರು, 9.69 ಲಕ್ಷ ರೂ.ನಗದು, ಎರಡು ಬೈಕ್‌, ಒಂದು ಕ್ಯಾಮರಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಲ್ಕ ಪಾವತಿಸಲು ಕಿಡ್ನ್ಯಾಪ್‌

ಆರೋಪಿ ಸುನಿಲ್‌ ಯಲಹಂಕದಲ್ಲಿರುವ ಸಂಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಹಗಲಿನ ವೇಳೆ ಕಟ್ಟಡ ಕೆಲಸ, ಗಾರ್ಡನ್‌ ಕೆಲಸಗಳಿಗೆ ಹೋಗುತ್ತಿದ್ದ. ಸಂಜೆ ಕಾಲೇಜಿಗೆ ಹೋಗುತ್ತಿದ್ದ. ಇತ್ತೀಚೆಗೆ ಕಾಲೇಜು ಶುಲ್ಕ ಪಾವತಿಸಲು ಹಣವಿರಲಿಲ್ಲ. ಹಲವು ಸ್ನೇಹಿತರನ್ನು ಕೇಳಿದರೂ ಯಾರೂ ಸಹಾಯ ಮಾಡಿರಲಿಲ್ಲ.

ಕೆಲ ತಿಂಗಳ ಹಿಂದೆ ರಮೇಶ್‌ಬಾಬು ನಿವಾಸದ ಗಾರ್ಡನ್‌ ಕೆಲಸಕ್ಕೆ ಹೋದಾಗ ಭವೇಶ್‌ ಪರಿಚಿತನಾಗಿದ್ದ. ಭವೇಶ್‌ ಒಬ್ಬನೇ ತಳಮಹಡಿ ಕೊಠಡಿಯಲ್ಲಿ ಮಲಗುವ ವಿಚಾರವೂ ಸುನಿಲ್‌ಗೆ ಗೊತ್ತಿತ್ತು. ಹೀಗಾಗಿ ಭವೇಶ್‌ನನ್ನು ಕಿಡ್ನಾಪ್‌ ಮಾಡಿದರೆ ಅವರ ಕುಟುಂಬ ಕೇಳಿದಷ್ಟು ಹಣ ಕೊಡಲಿದೆ ಎಂದು ಲೆಕ್ಕಾಚಾರ ಹಾಕಿದ್ದ. ಈ ಸಂಚಿನ ಬಗ್ಗೆ ಬಾಲ್ಯ ಸ್ನೇಹಿತ, ಕಾರು ಚಾಲಕನಾಗಿದ್ದ ನಾಗೇಶ್‌ಗೆ ತಿಳಿಸಿದ್ದ. ಆತನೂ ಕೃತ್ಯಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದ. ಅದರಂತೆ ಮುಖ ಗುರುತು ಸಿಗದಂತೆ ಮಾಸ್ಕ್‌ ಧರಿಸಿ ಸೆ.2ರಂದು ಮುಂಜಾನೆ ರಮೇಶ್‌ ಅವರ ನಿವಾಸದ ಕಾಂಪೌಂಡ್‌ ಹಾರಿ ಭವೇಶ್‌ನನ್ನು ಕಿಡ್ನ್ಯಾಪ್‌ ಮಾಡಿದ್ದರು ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶುಲ್ಕ ಪಾವತಿ, ಹೊಸ ಬೈಕ್‌ ಖರೀದಿ:

ಕಿಡ್ನ್ಯಾಪ್‌ ಕೃತ್ಯದಲ್ಲಿ ಬಂದಿದ್ದ 15 ಲಕ್ಷ ರೂ.ಗಳಲ್ಲಿ ಸುನಿಲ್‌ ಕಾಲೇಜು ಶುಲ್ಕ ಪಾವತಿಸಿದ್ದ. ಯಲಹಂಕದಲ್ಲಿ ಬಾಡಿಗೆ ರೂಂಗೆ ಅಡ್ವಾನ್ಸ್‌ ಕೊಟ್ಟಿದ್ದ. ಹೊಸ ಬೈಕ್‌ ಹಾಗೂ ಡಿಜಿಟಲ್‌ ಕ್ಯಾಮರಾ ಖರೀದಿ ಮಾಡಿದ್ದ. ಉಳಿದ ಹಣವನ್ನು ತಾನೇ ಇಟ್ಟುಕೊಂಡಿದ್ದ. ಕಾಲೇಜು ಶುಲ್ಕ ಪಾವತಿಗೆ ಹಣ ಹೊಂದಿಸಲು ಕಿಡ್ನ್ಯಾಪ್‌ ಕೃತ್ಯ ಎಸಗಿದ್ದಾಗಿ ಆರೋಪಿ ಸುನಿಲ್‌ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಅಧಿಕಾರಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ