ಆ್ಯಪ್ನಗರ

ಸಾಂಬಾರ್‌ನಲ್ಲಿ ಸತ್ತ ಇಲಿ: ಕಾರ್ಪೊರೇಟರ್‌ ಪತಿ ವಿರುದ್ಧ ಪ್ರಕರಣ ದಾಖಲು

ಇಂದಿರಾ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ಪೂರೈಸಲಾದ ಊಟದ ಸಾಂಬಾರ್‌ನಲ್ಲಿ ಸತ್ತ ಇಲಿಯನ್ನು ಹಾಕಿದ ಆರೋಪ ಬಿಬಿಎಂಪಿಯ ಗಾಯತ್ರಿನಗರ ವಾರ್ಡ್‌ನ ಕಾರ್ಪೊರೇಟರ್‌ ಚಂದ್ರಕಲಾ ಅವರ ಪತಿ ಗಿರೀಶ್‌ ಲಕ್ಕಣ್ಣ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 17 Aug 2018, 5:00 am
ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಿಂದ ಪೌರ ಕಾರ್ಮಿಕರಿಗೆ ಪೂರೈಸಲಾದ ಊಟದ ಸಾಂಬಾರ್‌ನಲ್ಲಿ ಸತ್ತ ಇಲಿಯನ್ನು ಹಾಕಿದ ಆರೋಪ ಬಿಬಿಎಂಪಿಯ ಗಾಯತ್ರಿನಗರ ವಾರ್ಡ್‌ನ ಕಾರ್ಪೊರೇಟರ್‌ ಚಂದ್ರಕಲಾ ಅವರ ಪತಿ ಗಿರೀಶ್‌ ಲಕ್ಕಣ್ಣ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web indira canteen1


ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿರುವ ಚೆಫ್‌ಟಾಕ್‌ ಸಂಸ್ಥೆಯು ಪೌರ ಕಾರ್ಮಿಕರಿಗೆ ಆ. 11ರಂದು ಅನ್ನ, ಸಾಂಬಾರ್‌ ಸರಬರಾಜು ಮಾಡಿತ್ತು. ಸಾಂಬಾರ್‌ನಲ್ಲಿ ಸತ್ತ ಇಲಿ ಕಂಡು ಬಂದಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಂಸ್ಥೆಯ ಸಿಬ್ಬಂದಿಯು ಪರಿಶೀಲನೆ ನಡೆಸಿದರು. ಅಡುಗೆ ಮನೆಯಲ್ಲಿದ್ದ ಸಾಂಬಾರ್‌ ಮತ್ತು ಕಾರ್ಮಿಕರಿಗೆ ಪೂರೈಸಿದ್ದ ಸಾಂಬಾರ್‌ ಅನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅಡುಗೆ ಮನೆಯ ಸಾಂಬಾರ್‌ನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಲಿಲ್ಲ. ಕಾರ್ಮಿಕರಿಗೆ ಊಟ ಕಳುಹಿಸಿದ ನಂತರ ಸತ್ತ ಇಲಿಯನ್ನು ಹಾಕಿರುವುದು ಕಂಡು ಬಂದಿದೆ. ಹೀಗಾಗಿ, ಸಂಸ್ಥೆಯ ಸಿಬ್ಬಂದಿ ಬಾಲ ಮುರುಗನ್‌ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

''ಪೌರ ಕಾರ್ಮಿಕರ ಊಟವಾದ ಬಳಿಕ ಪಾತ್ರೆಯಲ್ಲಿ ಸತ್ತ ಇಲಿಯನ್ನು ಹಾಕಲಾಗಿತ್ತು. ಕಾರ್ಪೊರೇಟರ್‌ ಪತಿ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಲಂಚ ನೀಡಲು ನಿರಾಕರಿಸಲಾಗಿತ್ತು. ಹೀಗಾಗಿಯೇ, ಸಂಸ್ಥೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸಾಂಬಾರ್‌ಗೆ ಸತ್ತ ಇಲಿಯನ್ನು ಹಾಕಲಾಗಿದೆ. ಕಳೆದ 15 ದಿನಗಳಿಂದಲೂ ಕರೆ ಮಾಡಿ, ವ್ಯವಸ್ಥಾಪಕರನ್ನು ಭೇಟಿ ಮಾಡಿಸುವಂತೆ ಒತ್ತಡ ಹೇರುತ್ತಿದ್ದರು. ಆದರೆ, ನಾನು ಮಾಡಿಸಿರಲಿಲ್ಲ,'' ಎಂದು ಬಾಲ ಮುರುಗನ್‌ ದೂರಿನಲ್ಲಿ ತಿಳಿಸಿದ್ದಾರೆ.

''ಕಾರ್ಪೊರೇಟರ್‌ ಅವರ ಪತಿ ಗಿರೀಶ್‌ ಲಕ್ಕಣ್ಣನವರೇ ಅಪರಿಚಿತ ದುಷ್ಕರ್ಮಿಗಳ ಮೂಲಕ ಸಾಂಬಾರ್‌ಗೆ ಸತ್ತ ಇಲಿಯನ್ನು ಹಾಕಿಸಿ, ಸಂಸ್ಥೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿರುವ ಅನುಮಾನವಿದೆ,'' ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗಿರೀಶ್‌ ಲಕ್ಕಣ್ಣ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

''ಪಾಲಿಕೆಯ ಎಲ್ಲ ಕಾರ್ಪೊರೇಟರ್‌ಗಳು ಹಫ್ತಾ ವಸೂಲಿ ಮಾಡುತ್ತಾರೆಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಂದಿರಾ ಕ್ಯಾಂಟೀನ್‌ನಿಂದ ಪೂರೈಸಿದ್ದ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಒಂದೊಮ್ಮೆ ಗಿರೀಶ್‌ ಲಕ್ಕಣ್ಣ ಅವರ ವಿರುದ್ಧ ಆರೋಪ ಸಾಬೀತಾದರೆ, ಸೂ0ಕ್ತ ಕ್ರಮ ಕೈಗೊಳ್ಳಲಾಗುವುದು,'' ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ