ಆ್ಯಪ್ನಗರ

ವಿದೇಶಿಯರಿಗೆ ಬಾಡಿಗೆ ಮನೆ ನೀಡಿದ ಇಬ್ಬರು ಮನೆ ಮಾಲೀಕರ ಬಂಧನ

ಸೂಕ್ತ ದಾಖಲೆಗಳಿಲ್ಲದೆ ಆಫ್ರಿಕನ್‌ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಆರೋಪದಲ್ಲಿ ಇಬ್ಬರು ಮನೆ ಮಾಲೀಕರನ್ನು ಕೆ.ಆರ್‌ ಪುರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 29 Aug 2018, 11:52 am
ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಆಫ್ರಿಕನ್‌ ಪ್ರಜೆಗಳಿಗೆ ಮನೆ ಬಾಡಿಗೆ ನೀಡಿದ ಆರೋಪದಲ್ಲಿ ಇಬ್ಬರು ಮನೆ ಮಾಲೀಕರನ್ನು ಕೆ.ಆರ್‌ ಪುರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web accused arrested


ಕೆ.ಆರ್‌ ಪುರ ಟಿ.ಸಿ ಪಾಳ್ಯದ ಬೃಂದಾವನ ನಗರ ನಿವಾಸಿ ಅಮೀರ್‌ (38) ಹಾಗೂ ಸೀಗೇಹಳ್ಳಿ ಪ್ರಿಯಾಂಕ ನಗರದ ನೀಲಮ್ಮ (35) ಬಂಧಿತರು. ಪಾಸ್‌ಪೋರ್ಟ್‌, ವೀಸಾ ಮತ್ತು ವಾಸ ಪರವಾನಗಿ ಇಲ್ಲದ ನಾಲ್ವರು ಆಫ್ರಿಕನ್‌ ಪ್ರಜೆಗಳಿಗೆ ಅವರು ಮನೆಯನ್ನು ಬಾಡಿಗೆಗೆ ನೀಡಿದ್ದರು. ಇವರನ್ನು ಪಾಸ್‌ಪೋರ್ಟ್‌ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆ ಅಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರು ನಗರದಲ್ಲಿ ಸಾವಿರಾರು ವಿದೇಶಿಯರು ನೆಲೆಸಿದ್ದು, ಪಾಸ್‌ಪೋರ್ಟ್‌ ಮತ್ತು ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ಮರಳದೇ ಸೈಬರ್‌ ಕ್ರೈಂ, ಮಾದಕವಸ್ತು ಮಾರಾಟ ಸೇರಿದಂತೆ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಆರೋಪದ ಮೇರೆಗೆ ಜು. 21ರಂದು ಕೆ.ಆರ್‌ ಪುರದ ವಿವಿಧೆಡೆ ವಿದೇಶಿಯರ ಮನೆಗಳ ಮೇಲೆ ವೈಟ್‌ಫೀಲ್ಡ್‌ ಉಪ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಒಟ್ಟು 25 ವಿದೇಶಿಯರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿತ್ತು. ಬಂಧಿತರ ವಿರುದ್ಧ ಕೇಸ್‌ ದಾಖಲಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಆಯುಕ್ತರ ಆದೇಶ ಪಾಲಿಸಿಲ್ಲ: ಈ ನಡುವೆ ಅಕ್ರಮವಾಗಿ ನೆಲೆಸಿರುವ ವಿದೇಶಿಯರಿಗೆ ಮನೆ ಬಾಡಿಗೆ ನೀಡುವುದು ಕೂಡಾ ಅಪರಾಧ. ಈ ಕುರಿತಂತೆ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದು, ವಿದೇಶಿಯರಿಗೆ ಬಾಡಿಗೆ ನೀಡುವ ಮುನ್ನ ಅವರ ಪಾಸ್‌ಪೋರ್ಟ್‌, ವೀಸಾ ಮತ್ತು ವಾಸ ಪರವಾನಗಿ ದಾಖಲೆಗಳನ್ನು ಸಂಗ್ರಹಿಸಿ, ಸಮೀಪದ ಪೊಲೀಸ್‌ ಠಾಣೆಗೆ ನೀಡಬೇಕು. ಪೊಲೀಸರು ಆ ದಾಖಲೆಗಳನ್ನು ನೋಡಿ ಅಧಿಕೃತವಾಗಿವೆಯೇ ಎಂದು ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನೀಡಿದ ಬಳಿಕ ಪೊಲೀಸರು ಒಪ್ಪಿಗೆ ನೀಡಿದ ಬಳಿಕವಷ್ಟೇ ವಿದೇಶಿಯರಿಗೆ ಮನೆ ಬಾಡಿಗೆಯನ್ನು ಮಾಲೀಕರು ನೀಡಬೇಕು.

ಆದರೆ, ಬಂಧಿತರಿಬ್ಬರು ಹೆಚ್ಚಿನ ಬಾಡಿಗೆ ಆಸೆಗೆ ಪೊಲೀಸ್‌ ಆಯುಕ್ತರ ಆದೇಶಗಳನ್ನು ಉಲ್ಲಂಘಿಸಿ ಮನೆ ಬಾಡಿಗೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿದೇಶಿಯರ ಅಕ್ರಮ ಕೆಲಸಗಳಿಗೆ ನೆರವಾಗಿದ್ದಾರೆಂದು ಕೆ.ಆರ್‌ ಪುರ ಪೊಲೀಸ್‌ ಅಧಿಕಾರಿ ತಿಳಿಸಿದರು.

ಇನ್ನೂ ಏಳು ಜನರ ಬಂಧನವಾಗಬೇಕಿದೆ: ಒಟ್ಟು 25 ಜನರಿಗೆ ಬಾಡಿಗೆ ನೀಡಿದ 9 ಮನೆ ಮಾಲೀಕರನ್ನು ಗುರುತಿಸಲಾಗಿದೆ. ಈ ಪೈಕಿ ಈಗ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ ಏಳು ಜನ ಮನೆ ಮಾಲೀಕರನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮೊದಲ ಬಾರಿ ಮಾಲೀಕರ ಬಂಧನ ? : ಅಕ್ರಮವಾಗಿ ವಾಸವಿರುವ ವಿದೇಶಿಯರಿಗೆ ಬಾಡಿಗೆ ನೀಡಿರುವ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದು ಇದೇ ಮೊದಲು ಎಂದು ತಿಳಿದು ಬಂದಿದೆ. ಅಲ್ಲದೇ, ಇದು ವಿದೇಶಿಯರಿಗೆ ಮನೆ ಬಾಡಿಗೆ ನೀಡಿರುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ