ಆ್ಯಪ್ನಗರ

ವಿಧಾನಸೌಧದ ಎದುರೇ ಅಪಹರಿಸಿ ದರೋಡೆ

ಪೊಲೀಸರ ಸೋಗಿನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಧಾನಸೌಧದ ಎದುರಲ್ಲೇ ಪ್ಲಂಬರ್‌ ಒಬ್ಬರನ್ನು ಅಪಹರಿಸಿ 37 ಸಾವಿರ ರೂ. ಹಾಗೂ 17.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 15 Sep 2018, 5:00 am
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಧಾನಸೌಧದ ಎದುರಲ್ಲೇ ಪ್ಲಂಬರ್‌ ಒಬ್ಬರನ್ನು ಅಪಹರಿಸಿ 37 ಸಾವಿರ ರೂ. ಹಾಗೂ 17.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web kidnap infront of vidhanasoudha
ವಿಧಾನಸೌಧದ ಎದುರೇ ಅಪಹರಿಸಿ ದರೋಡೆ


ಬೇಗೂರು ನಿವಾಸಿ ಸೈಫುಲ್ಲಾ(33) ಎಂಬುವರು ಆಗಸ್ಟ್‌ 3ರಂದು ಅಪಹರಣಕ್ಕೆ ಒಳಗಾದವರು. ಸೆ.12ರಂದು ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ''ಭಯದಿಂದ ವಿಷಯ ಮುಚ್ಚಿಟ್ಟಿದ್ದೆ. ಕುಟುಂಬ ಸದಸ್ಯರು ಧೈರ್ಯ ನೀಡಿದ ನಂತರ ದೂರು ಕೊಟ್ಟಿದ್ದೇನೆ,'' ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

''ಆ.3ರಂದು ಕೆಲಸ ಮುಗಿಸಿಕೊಂಡು ಸಂಜೆ 6.30ರಲ್ಲಿ ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಹೊರ ಬಂದಾಗ ಬಿಳಿ ಬಣ್ಣದ ಹೋಂಡಾ ಅಸೆಂಟ್‌ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ನನ್ನನ್ನು ಕಾರಿನ ಒಳಗೆ ಕೂರಿಸಿಕೊಂಡರು. ಬಳಿಕ ಮಾರಕಾಸ್ತ್ರ ತೋರಿಸಿ ಬೆದರಿಸಿ ಬಾಯಿಗೆ ಟವಲ್‌ ತುರುಕಿ 1,500 ನಗದು, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಕಿತ್ತುಕೊಂಡು ಬನ್ನೇರುಘಟ್ಟ ರಸ್ತೆ ಮೂಲಕ ನೈಸ್‌ ರಸ್ತೆಗೆ ಹೋಗಿ ಅಲ್ಲಿಂದ ತುಮಕೂರು ಬಳಿಯ ಹೆಗ್ಗೆರೆಗೆ ಕರೆದೊಯ್ದು ಕಾರು ನಿಲ್ಲಿಸಿದ್ದರು. ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಮತ್ತೆ ಮೂವರು ಸೇರಿ ಎಲ್ಲರೂ ಸೇರಿ ಬಟ್ಟೆ ಬಿಚ್ಚಿಸಿ ಕೂರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು'' ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

''ನಾನು ಪರಿಚಿತರಾದ ಭಾರತಿ ಎಂಬುವರ ಬಳಿ ಹಣ ಕೊಡಿಸುವುದಾಗಿ ಹೇಳಿದ ಬಳಿಕ, ಕಾರಿನಲ್ಲಿ ಆ.4ರಂದು ನನ್ನ ಮನೆಗೆ ಕರೆದೊಯ್ದು 37 ಸಾವಿರ ರೂ. ಕಿತ್ತುಕೊಂಡರು. ನಂತರ ಬನಶಂಕರಿಯ ಭಾರತಿ ಎಂಬುವರ ಮನೆಗೆ ಕರೆದುಕೊಂಡು ಹೋಗಿ 17.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಿತ್ತುಕೊಂಡರು. ರಾತ್ರಿ 7.30ಕ್ಕೆ ವಿಧಾನಸೌಧದ ಬಳಿ ವಾಪಸ್‌ ಬಿಟ್ಟು, ಯಾರಿಗೂ ವಿಷಯ ಹೇಳದಂತೆ ಬೆದರಿಕೆ ಹಾಕಿ ಪರಾರಿಯಾದರು,'' ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ