ಆ್ಯಪ್ನಗರ

ಕರ್ತವ್ಯದ ವೇಳೆ 35 ಅಡಿ ಎತ್ತರದ ಪಿಲ್ಲರ್‌ನಿಂದ ಬಿದ್ದು ಮೆಟ್ರೊ ಕಾರ್ಮಿಕ ಸಾವು

ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಟ್ರೊ ಕಾರ್ಮಿಕನೊಬ್ಬ 35 ಅಡಿ ಎತ್ತರದ ಪಿಲ್ಲರ್‌ನಿಂದ ಬಿದ್ದು ಮೃತಪಟ್ಟಿರುವ ಘಟನೆ ಕನಕಪುರ ರಸ್ತೆಯಲ್ಲಿ ನಡೆದಿದೆ. ಗುತ್ತಿಗೆದಾರ ಮತ್ತು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವರು ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

Vijaya Karnataka Web 20 Jan 2020, 12:47 pm
ಬೆಂಗಳೂರು: ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಮೆಟ್ರೊ ಕಾರ್ಮಿಕನೊಬ್ಬ 35 ಅಡಿ ಎತ್ತರದ ಪಿಲ್ಲರ್‌ನಿಂದ ಬಿದ್ದು ಮೃತಪಟ್ಟಿರುವ ಘಟನೆ ಕನಕಪುರ ರಸ್ತೆಯಲ್ಲಿ ನಡೆದಿದೆ.
Vijaya Karnataka Web bengaluru metro construction


ಚಿತ್ರದುರ್ಗ ಜಿಲ್ಲೆಯ ಅಜ್ಜನಹಳ್ಳಿ ಗ್ರಾಮದ ನಿವಾಸಿ ನರಸಿಂಹಮೂರ್ತಿ(34) ಮೃತ ಕಾರ್ಮಿಕ. ಪಿಲ್ಲರ್‌ ಸಂಖ್ಯೆ 249 ಮತ್ತು 250ರ ನಡುವೆ ಕೆಲಸ ಮಾಡುತ್ತಿದ್ದ ಇವರು, ಬುಧವಾರ ರಾತ್ರಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಿದ್ದರು. 35 ಅಡಿ ಎತ್ತರದಿಂದ ಬಿದ್ದಿದ್ದರಿಂದ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಸಾವಿಗೆ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಸೂಕ್ತ ರಕ್ಷಣಾ ವ್ಯವಸ್ಥೆ ಅಳವಡಿಸದಿರುವುದೇ ಕಾರಣ ಎಂದು ಆರೋಪಿಸಿ ನರಸಿಂಹಮೂರ್ತಿ ತಂದೆ ಹನುಮಂತಪ್ಪ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ''ಸಂಕ್ರಾಂತಿ ಹಬ್ಬಕ್ಕೆ ರಜೆ ಹಾಕಿ ಮನೆಗೆ ಬರುವವನಿದ್ದ. ಆದರೆ ಸದ್ಯದಲ್ಲೇ ನಡೆಯಲಿರುವ ಊರ ಜಾತ್ರೆಗೆ ಬರಬೇಕು ಎನ್ನುವ ಕಾರಣದಿಂದ ಸಂಕ್ರಾಂತಿಗೆ ಬರದೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದ.

ಕಳೆದೊಂದು ವಾರದಲ್ಲಿ ಬೆಂಗಳೂರಲ್ಲಿ ಪೆಟ್ರೋಲ್‌ ದರ 1 ರೂ. ಕಡಿಮೆ

ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಕಲು ದಿನಕ್ಕೆ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ. ಹಗಲು ಪಾಳಿ ಕೆಲಸಕ್ಕೆ 450 ಮತ್ತು ರಾತ್ರಿ ಪಾಳಿ ಕೆಲಸಕ್ಕೆ 650 ರೂ. ಕೂಲಿ ಸಿಗುತ್ತಿತ್ತು. ಮಕ್ಕಳನ್ನು ಓದಿಸಲು ಈ ರೀತಿ ಎರಡೆರಡು ಪಾಳಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಘಟನೆ ನಡೆದ ದಿನವೂ ರಾತ್ರಿ 10ರಿಂದ ಬೆಳಗಿನ 7 ಗಂಟೆವರೆಗಿನ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಜಾಗದಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ನೀಡದೆ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು,'' ಎಂದು ಕೋರಿದ್ದಾರೆ.

ಏರ್‌ಪೋರ್ಟ್‌ ಮೆಟ್ರೊಗಾಗಿ ಕಟ್ಟಡ ತೆರವಿಗೆ ಟೆಂಡರ್‌, 289 ಆಸ್ತಿ ಗುರುತು

ದೂರಿನ ಆಧಾರದಲ್ಲಿ ಗುತ್ತಿಗೆದಾರ ಬಲರಾಮರೆಡ್ಡಿ, ಎಂಜಿನಿಯರ್‌ ಮಂಜನಾಥ್‌, ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಉಮೇಶ್‌ ಮತ್ತು ಇತರರ ವಿರುದ್ಧ ನಿರ್ಲಕ್ಷ್ಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ